ಭದ್ರಾವತಿ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಶಿವಮೊಗ್ಗ ಜಂಟಿ ನಿರ್ದೇಶಕ ಡಾ. ಬಿ.ಟಿ ಮಂಜುನಾಥ್, ಸಹಾಯಕ ನಿರ್ದೇಶಕ ದೇವದಾಸ್ ಮತ್ತು ಆಹಾರ ನಿಗಮ ವ್ಯವಸ್ಥಾಪಕ ಎನ್. ಶ್ರೀಕಂಠ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜು. ೩೦: ಸರ್ಕಾರಿ ನೌಕರರು ತಮ್ಮ ಕೆಲಸದ ಮಹತ್ವ ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಶಿವಮೊಗ್ಗ ಜಂಟಿ ನಿರ್ದೇಶಕ ಡಾ. ಬಿ.ಟಿ ಮಂಜುನಾಥ್ ಹೇಳಿದರು.
ಅವರು ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ. ಸರ್ಕಾರಿ ನೌಕರರು ತಮ್ಮ ವೃತ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹೊರತು ದುರುಪಯೋಗಪಡಿಸಿಕೊಳ್ಳಬಾರದು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರಿ ಕೆಲಸದಲ್ಲಿರುವವರು ತಮ್ಮ ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು. ನಾವು ಮಾಡುವ ಕೆಲಸ ಮಾತಾಡಬೇಕು. ನಮಗೆ ಆತ್ಮತೃಪ್ತಿ ನೀಡುವಂತಿರಬೇಕೆಂದರು.
ತಹಸೀಲ್ದಾರ್ ಆರ್. ಪ್ರದೀಪ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಶಿವಮೊಗ್ಗ ಸಹಾಯಕ ನಿರ್ದೇಶಕ ದೇವದಾಸ್, ಆಹಾರ ನಿಗಮ ವ್ಯವಸ್ಥಾಪಕ(ಭದ್ರಾವತಿ ಶಾಖೆ) ಎನ್. ಶ್ರೀಕಂಠ, ಪಡಿತರ ವಿತರಕರ ಸಂಘದ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಕೆ. ಲೋಕೇಶಪ್ಪ, ಮಂಜಪ್ಪ, ಸಾಗರ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಮ್ಮ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ಎಸ್. ಆರ್ ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ.ಆರ ಸೌಮ್ಯ ಪ್ರಾರ್ಥಿಸಿ, ಜವರಾಯ ನಿರೂಪಿಸಿದರು.
No comments:
Post a Comment