Thursday, July 28, 2022

ಜನಸಂಖ್ಯೆ ನಿಯಂತ್ರಣ ಕುರಿತು ಜ್ಞಾನ ಹೊಂದಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೮: ಜನಸಂಖ್ಯೆ ನಿಯಂತ್ರಣದಲ್ಲಿ ದೇಶದ ಹಾಗು ಕುಟುಂಬದ ಬೆಳವಣಿಗೆ ಕುರಿತು ಜ್ಞಾನ ಹೊಂದಿರಬೇಕು ಎಂದು ಹೊಸಮನೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
    ಅವರು ಗುರುವಾರ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಜನಸಂಖ್ಯೆ ಹೆಚ್ಚಳ ಎಲ್ಲಾ ಕ್ಷೇತ್ರಗಳು ಕುಂಠಿತಗೊಳ್ಳಲು ಕಾರಣವಾಗಲಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗಲಿದೆ. ದೇಶದ ಹಾಗು ಕುಟುಂಬದ ವಾಸ್ತಾವಿಕ ಸ್ಥಿತಿಗತಿಗಳನ್ನು ಅರಿಯುವ ಮೂಲಕ ಜನಸಂಖ್ಯೆ ನಿಯಂತ್ರಣದಲ್ಲಿ ನಮ್ಮ ಪಾತ್ರ ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಪ್ರಪಂಚದಾದ್ಯಂತ ಜನಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ಕಂಡು ಬಂದ ಹಿನ್ನಲೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಅನಿವಾರ್ಯತೆ ಎದುರಾಯಿತು. ಈ ಹಿನ್ನಲೆಯಲ್ಲಿ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
    ಜನಸಂಖ್ಯೆ ನಿಯಂತ್ರಣದಲ್ಲಿ ಶಿಕ್ಷಣವಂತರ ಪಾತ್ರ ಅತಿ ಮುಖ್ಯವಾಗಿದ್ದು, ದೇಶ ಹಾಗು ಕುಟುಂಬದ ಕಾಳಜಿ ಹಿನ್ನಲೆಯಲ್ಲಿ  ಪ್ರತಿಯೊಬ್ಬರು ಸಹ ತಮ್ಮ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಜನಸಂಖ್ಯಾ ದಿನಾಚರಣೆ ಸಾರ್ಥಕಗೊಳ್ಳುತ್ತದೆ ಎಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಜನಸಂಖ್ಯಾ ನಿಯಂತ್ರಣದ ಅಗತ್ಯತೆ ಹಾಗು ಪ್ರಸ್ತುತ ಅಂಕಿ-ಅಂಶಗಳನ್ನು ವಿವರಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯೆ ಸರ್ವಮಂಗಳ ಭೈರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಹಾಯಕ ಪ್ರಾಧ್ಯಾಪಕ ಮಹಮದ್ ನಜೀಬ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ವರದರಾಜ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಬಾಯಿ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ಗುರುಪ್ರಸಾದ್ ವಂದಿಸಿದರು.
    ಇದಕ್ಕೂ ಮೊದಲು ಜನಸಂಖ್ಯಾ ನಿಯಂತ್ರ ಸಂಬಂಧ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕೊರೋನಾ ಮುಂಜಾಗ್ರತೆ ಹಿನ್ನಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಚುಚ್ಚುಮದ್ದು ನೀಡಲಾಯಿತು.   ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕ, ಅಧ್ಯಾಪಕೇತರ ವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


No comments:

Post a Comment