Wednesday, August 3, 2022

ಅಣ್ಣನಿಂದ ತಮ್ಮನ ಮೇಲೆ ಗುಂಡು


    ಭದ್ರಾವತಿ, ಜು. ೩: ದಾರಿ ಮಧ್ಯದಲ್ಲಿ ಹೂವಿನ ಗಿಡಗಳನ್ನು ನೆಟ್ಟು ಜಮೀನಿಗೆ ಹೋಗದಂತೆ ಅಡ್ಡಿಪಡಿಸುತ್ತಿದ್ದಾರೆಂದು ಆಕ್ರೋಶಗೊಂಡ ವ್ಯಕ್ತಿಯೋರ್ವ ತಮ್ಮನ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊನೆಗೆ ಮನೆಯಲ್ಲಿದ್ದ ನಾಡಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ತಾಲೂಕಿನ ಸಿದ್ದರಮಟ್ಟಿ ಗ್ರಾಮದ ಮುನಿಸ್ವಾಮಿ ಎಂಬುವರು ತಮ್ಮ ಮುರುಗೇಶ್(೩೫) ಮೇಲೆ ಗುಂಡು ಹಾರಿಸಿದ್ದು, ಸದ್ಯ ಗುಂಡು ಎದೆಗೆ ಬೀಳದೆ ತೊಡೆಗೆ ತಗುಲಿದೆ. ಇದರಿಂದಾಗಿ ಪ್ರಾಣಾಪಾಯ ತಪ್ಪಿದೆ. ಗಾಯಗೊಂಡಿರುವ ಮುರುಗೇಶ್ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಘಟನೆ ವಿವರ :
    ಗ್ರಾಮದ ನಿವಾಸಿ ಆರ್ಮುಗಂ ಎಂಬುವರು ೨ ಎಕರೆ ಜಮೀನು ಹೊಂದಿದ್ದು, ಇವರು ನಿಧನ ಹೊಂದಿದ್ದ ನಂತರ ೭ ಜನ ಮಕ್ಕಳಿಗೆ ಜಮೀನು ಹಂಚಿಕೆಯಾಗಿದೆ. ಹಿರಿಯ ಮಗ ಮುನಿಸ್ವಾಮಿ ಮತ್ತು ಕಿರಿಯ ಮಗ ಮುರುಗೇಶ್ ಕುಟುಂಬದ ನಡುವೆ ಜಮೀನು ಸಂಬಂಧ ಗಲಾಟೆ ನಡೆಯುತ್ತಿದ್ದು, ಮುನಿಸ್ವಾಮಿ ಮಂಗಳವಾರ ಬೆಳಿಗ್ಗೆ  ತಮ್ಮನ ಪತ್ನಿ, ಮಗಳು ಹಾಗು ಮಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಚಾರ ತಿಳಿದು ಪ್ರಶ್ನಿಸಲು ಬಂದ ಮುರುಗೇಶ್ ಮೇಲೂ ಆಕ್ರೋಶಗೊಂಡು ಮನೆಯಲ್ಲಿದ್ದ ನಾಡಬಂದೂಕಿನಿಂದ ಗುಂಡು ಹಾರಿಸಲಾಗಿದೆ. ಸದ್ಯ ಗುಂಡು ಮುರುಗೇಶ್ ತೊಡಗೆ ತಗುಲಿದೆ ಎನ್ನಲಾಗಿದೆ.
    ಮುರುಗೇಶ್ ಮೊದಲು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

No comments:

Post a Comment