Tuesday, September 6, 2022

ಸೆ.೮ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆ

ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ರಾಜಮಹಾರಾಜರ ಕಾಲದ ಕೋಟೆಯಂತೆ ಕಾಣುವ ಮಹಾದ್ವಾರ.

    ಭದ್ರಾವತಿ, ಸೆ. ೬: ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆ ತಮಿಳು ಶಾಲೆ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಸೆ.೮ರಂದು ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ.
    ಈ ಬಾರಿ ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ೯ ದಿನಗಳ ಕಾಲ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿನಡೆದಿವೆ. ಸೆ.೮ರಂದು ವಿಸರ್ಜನೆ ನಡೆಯಲಿದ್ದು, ಈ ಸಂಬಂಧ ನಡೆಯುವ ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಕೇಸರಿ ಪಡೆಯಿಂದ ೨೫ ಸಾವಿರ ಲಾಡು ವಿತರಣೆ :
    ಪ್ರತಿ ವರ್ಷ ರಾಜಬೀದಿ ಉತ್ಸವದಲ್ಲಿ ವಿಶಿಷ್ಟ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಕೇಸರಿ ಪಡೆ ವತಿಯಿಂದ ಈ ಬಾರಿ ೨೫ ಸಾವಿರ ಲಾಡು ವಿತರಣೆ ನಡೆಯಲಿದೆ. ಈಗಾಗಲೇ ಲಾಡು ತಯಾರಿಕೆ ಕಾರ್ಯ ನಡೆಯುತ್ತಿದ್ದು, ಈ ಹಿಂದೆ ಸಹ ಲಾಡು ವಿತರಣೆ ಮಾಡಲಾಗಿತ್ತು.


ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಕೇಸರಿ ಪಡೆ ವತಿಯಿಂದ ಈ ಬಾರಿ ೨೫ ಸಾವಿರ ಲಾಡು ವಿತರಣೆ ನಡೆಯಲಿದ್ದು, ಈ ಹಿನ್ನೆಯಲ್ಲಿ ಕಾರ್ಯಕರ್ತರು ಲಾಡು ತಯಾರಿಸುತ್ತಿರುವುದು.

    ಕೋಟೆಯಂತೆ ಮಹಾದ್ವಾರ ನಿರ್ಮಾಣ :
    ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತಗಳಲ್ಲಿ ರಾಜಮಹಾರಾಜರ ಕಾಲದ ಕೋಟೆಯಂತೆ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಮಹಾದ್ವಾರಗಳು ಆಕರ್ಷಕವಾಗಿ ಕಂಡು ಬರುವ ಜೊತೆಗೆ ಎಲ್ಲರ ಗಮನ ಸೆಳೆಯುತ್ತಿವೆ.
    ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ :
    ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕುರಿತು ಜನರಲ್ಲಿ ಮೂಡಿಸುವ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಉದ್ದೇಶದೊಂದಿಗೆ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪ ವೃತ್ತದ ವರೆಗೂ ಪಥ ಸಂಚಲನ ನಡೆಸಲಾಯಿತು.
ಪಥ ಸಂಚಲನದಲ್ಲಿ ಪೊಲೀಸ್ ಇಲಾಖೆ ಹಾಗು ಆರ್‌ಎಎಫ್ ಸಿಬ್ಬಂದಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.


ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪ ವೃತ್ತದ ವರೆಗೂ ಪಥ ಸಂಚಲನ ನಡೆಸಲಾಯಿತು.

    ನಗರಸಭೆ ವತಿಯಿಂದ ಬ್ಯಾರಿಗೇಡ್‌ಗಳ ನಿರ್ಮಾಣ :
ರಾಜಬೀದಿ ಉತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಪ್ರಮುಖ ವೃತ್ತ ಹಾಗು ರಸ್ತೆಗಳಲ್ಲಿ ನಗರಸಭೆ ವತಿಯಿಂದ ಬ್ಯಾರಿಗೇಡ್‌ಗಳ ನಿರ್ಮಾಣ ನಡೆಯುತ್ತಿದ್ದು, ಈ ಬಾರಿ ಸಹ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.



No comments:

Post a Comment