Tuesday, September 6, 2022

ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಜಯಂತ್ಯೋತ್ಸವ, ವಾರ್ಷಿಕೋತ್ಸವ

ಭದ್ರಾವತಿ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಜರುಗುತ್ತಿವೆ.
  ಭದ್ರಾವತಿ, ಸೆ. ೬: ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ನಡೆಯುತ್ತಿದ್ದು, ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಳ್ಳುವ ಮೂಲಕ ತಮ್ಮ ನಿವೇದನೆಗಳನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ.
    ಈ ಭಾಗದಲ್ಲಿ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರ ಇಂದಿಗೂ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ. ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರ ಧಾರ್ಮಿಕ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಪವಾಡ ಕ್ಷೇತ್ರವಾಗಿ ಸಹ ಗುರುತಿಸಿಕೊಂಡಿದೆ.
    ಆ.೨೯ರಿಂದ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ನಡೆಯುತ್ತಿದ್ದು, ಮಾತೆ ಧರ್ಮಸಭೆಯ ಮಕ್ಕಳನ್ನು ಅನ್ಯೋನ್ಯತೆಯೆಡೆಗೆ ಮುನ್ನಡೆಸುವ ಮಹಾಮಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳ ದಿನ, ಕ್ರಿಸ್ತನೊಂದಿಗೆ ಪಯಣಿಸುವ ಮಾತೆ, ಯುವಜನತೆಯನ್ನು ಸಹಭಾಗಿತ್ವದಲ್ಲಿ ನಡೆಸುವ ಕೃಪಾದಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ಯುವಜನರ ದಿನ, ಮರಿಯ ಪ್ರೇಷಿತರ ಸಮಾಗಮ, ಕುಟುಂಬದಲ್ಲಿ ಐಕ್ಯತೆಯ ಉಗಮ ಎಂಬ ಧ್ಯೇಯ ವಾಕ್ಯದೊಂದಿಗೆ ಕುಟುಂಬದ ದಿನ, ಮಾತೆಯ ಮಧ್ಯಸ್ಥಿಕೆ ಹಿರಿಯರಲ್ಲಿ ಚೇತರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯರ ದಿನ, ಮಾತೆಯ ಪ್ರಾರ್ಥನಾ ಸಾಂಗತ್ಯ ದಂಪತಿಗಳಿಗೆ ಅಗತ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ದಂಪತಿಗಳ ದಿನ, ಮಾತೆಯ ವಿಶ್ವಾಸದ ಹಾದಿ, ಕಾರ್ಮಿಕರ ಬಾಳಿಗೆ ಭದ್ರ ಬುನಾದಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಮಿಕರ ದಿನ, ಮಾತೆಯ ದೈವ ವಾಕ್ಯದ ಅನುಸರಣೆ, ಶಿಕ್ಷಕರ ಬಾಳಿಗಾಗಲಿ ಪ್ರೇರಣೆ ಎಂಬ ವಾಕ್ಯದೊಂದಿಗೆ ಶಿಕ್ಷಕರ ದಿನ ಹಾಗು ಆರೋಗ್ಯ ಮಾತೆ ನಮ್ಮೆಲ್ಲರ ಸೌಖ್ಯ ದಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ವೈದ್ಯ/ದಾದಿಯರ ದಿನಾಚರಣೆಗಳು ಈಗಾಗಲೇ ಜರುಗಿವೆ.
    ಸೆ.೭ರಂದು ಕ್ರೈಸ್ತ ತಾಯಿ ಮರಿಯಮ್ಮ, ಸುವಾರ್ತಿಕರ ಹರಸಮ್ಮ ಎಂಬ ಧೈಯ ವಾಕ್ಯದೊಂದಿಗೆ ಧಾರ್ಮಿಕರ ದಿನ ನಡೆಯಲಿದ್ದು, ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ, ೬.೩೦ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾತೆಯ ಅಲಂಕೃತ ತೇರಿನ ಮೆರವಣಿಗೆ ನಡೆಯಲಿದೆ.
    ಸೆ.೮ರಂದು ಮಾತೆ ಮರಿಯ : ಸರ್ವರ ಪೋಷಕಿ, ಸುವಾರ್ತಿಕರ ಪ್ರೇರಕಿ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ವರ ದಿನ ನಡೆಯಲಿದ್ದು, ಬೆಳಿಗ್ಗೆ ೭ ಗಂಟೆಯಿಂದ ೧೧ ಗಂಟೆವರೆಗೆ ಪೂಜೆಗಳು, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ಜರುಗಲಿವೆ.
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಯಶಸ್ವಿಗೊಳಿಸುವಂತೆ ಧರ್ಮಗುರುಗಳು ಕೋರಿದ್ದಾರೆ.

No comments:

Post a Comment