ಮುಖ್ಯಸ್ಥರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡಿ
ಶಿವಕುಮಾರ್, ಸಾಮಾಜಿಕ ಹೋರಾಟಗಾರ
ಭದ್ರಾವತಿ, ಫೆ. ೨೨: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯಪಡೆ ಮುಖ್ಯಸ್ಥರು) ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡುವಂತೆ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆಯ ಮುಂಗಡ ಗುಂಡಿ ತೆಗೆಯುವ ಕಾಮಗಾರಿಯಲ್ಲಿ ಎಸ್.ಎಸ್.ಆರ್ ದರದಲ್ಲಿ ಯಾವುದೇ ರೀತಿಯ ಮಣ್ಣು ಪರೀಕ್ಷೆ ಮಾಡಿಸದೇ ಗಟ್ಟಿ ಮಣ್ಣು ಎಂದು ಹೆಚ್ಚಿನ ದರ ಅಳವಡಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ನೂರಾರು ಕೋಟಿ ನಷ್ಟ ಉಂಟುಮಾಡುತ್ತಿದ್ದು, ಇದನ್ನು ಆಯಾ ವಿಭಾಗದ ಮತ್ತು ಸರ್ಕಲ್ ವ್ಯಾಪ್ತಿಯ ಸಿಸಿಎಫ್ ಮತ್ತು ಡಿಸಿಎಫ್ ಗಳನ್ನು ಮಾಹಿತಿ ಹಕ್ಕಿನಡಿ ದಾಖಲಾತಿಗಳನ್ನು ಕೇಳಿದರೆ ಮುಂಗಡ ಕಾಮಾಗಾರಿಯನ್ನು ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅಭಿವೃದ್ಧಿ) ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಇಓ(ಕಾಂಪಾ), ಅರಣ್ಯ ಭವನ ಬೆಂಗಳೂರುರವರು ನಿಗದಿಪಡಿಸಿರುವ ದತ್ತಪತ್ರಗಳನ್ವಯ ದರಗಳನ್ನು ಅಳವಡಿಸಿಕೊಂಡು ಕಾಮಗಾರಿಗಳನ್ನು ನಿರ್ವಹಿಸಲಾಗಿರುತ್ತದೆ ಎಂದು ಐಎಫ್‌ಎಸ್ ಅಧಿಕಾರಿಯಾದ ಶಿವಶಂಕರ್ ಡಿಸಿಎಫ್, ಶಿವಮೊಗ್ಗ ಹಾಗೂ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪರವರು ಮಾಹಿತಿ ನೀಡಿರುತ್ತಾರೆ.
೨೦೧೮ ರಿಂದ ೨೦೨೧ರವರೆಗಿನ ಎ.ಜೆ ಆಡಿಟ್ ವರದಿಯಲ್ಲಿ ಯಾವುದೇ ರೀತಿಯ ಮಣ್ಣು ಪರೀಕ್ಷೆ ಮಾಡದೇ ರಾಜ್ಯದ ಬೊಕ್ಕಸಕ್ಕೆ ಶಿವಮೊಗ್ಗ ಸಿಸಿಎಫ್ ವಿಭಾಗಗಳಲ್ಲಿ ಅಧಿಕಾರಿಗಳು ೨-೩ ಕೋಟಿ ಹಣ ದುರುಪಯೋಗಪಡಿಸಿಕೊಂಡಿರುವುದು ರುಜುವಾಗಿದೆ. ಅರಣ್ಯ ಇಲಾಖೆಯಲ್ಲಿ ಈ ಹಿಂದಿನಿಂದ ಸಾವಿರಾರು ಕೋಟಿ ಹಣ ದಾಖಲೆಗಳಿಲ್ಲದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ದೂರನ್ನು ನೀಡಿದ್ದು, ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಪುನಃ ೨೦೨೨-೨೩ನೇ ಸಾಲಿನಲ್ಲಿ ಮುಂಗಡ ಗುಂಡಿ ತೆಗೆಯುವ ಕಾಮಗಾರಿಯಲ್ಲಿ ಗಟ್ಟಿ ಮಣ್ಣು ಎಂದು ನಮೂದಿಸಿಕೊಂಡು ಮಣ್ಣು ಪರೀಕ್ಷೆ ಮಾಡಿಸದೇ ಸರ್ಕಾರಿ ಹಣ ಹೆಚ್ಚಿನ ದರ ನಿಗದಿಪಡಿಸಿಕೊಂಡು ಹಣ ಲಪಟಾಯಿಸಿರುತ್ತಾರೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ೧೩ ಸರ್ಕಲ್‌ಗಳು ಇದ್ದು, ಇದೇ ರೀತಿಯ ಗಟ್ಟಿ ಮಣ್ಣಿನ ದರ ಅಳವಡಿಸಿಕೊಂಡಿರುವುದು ಮಾಹಿತಿ ಹಕ್ಕಿನಡಿ ದಾಖಲಾತಿಯನ್ನು ಪಡೆದಿರುತ್ತೇನೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಎಸ್‌ಎಸ್‌ಆರ್ ದರ ಉಲ್ಲಂಘನೆ ಮಾಡಿ ಕರ್ನಾಟಕ ಆರ್ಥಿಕ ಸಂಹಿತೆಯ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದರೂ ಇವರದೆ ಡಾಟ ಶೀಟಿನಂತೆ ಹೆಚ್ಚಿನ ದರ ಅಳವಡಿಸಿಕೊಂಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ರಾಜ್ಯದ ಎಲ್ಲಾ ಅಧಿಕಾರಿಗಳು ಇವರ ಆದೇಶದ ಮೇರೆಗೆ ಕೆಲಸ ನಿರ್ವಹಿಸುತ್ತಿರುವುದರಿಂದ ೨೦೨೧-೨೨-೨೩ನೇ ಸಾಲಿನ ಈ ಅಕ್ರಮಗಳಿಗೆ ಇವರೇ ನೇರ ಕಾರಣಕರ್ತರಾಗಿದ್ದು, ಅರಣ್ಯ ಪಡೆ ಮುಖ್ಯಸ್ಥರ ವಿರುದ್ಧ ಮಾನ್ಯ ಘನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಇವರ ವಿರುದ್ಧ ದೂರು ದಾಖಲಿಸಲು ತುರ್ತಾಗಿ ಅನುಮತಿ ನೀಡುವಂತೆ ಕೋರಿದ್ದಾರೆ.
No comments:
Post a Comment