ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಮಾತನಾಡಿದರು.
ಭದ್ರಾವತಿ, ಫೆ. ೨೩ ; ಶಿವಮೊಗ್ಗ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರು ಸೂಚಿಸುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂದು ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಪರಿಶ್ರಮದ ಫಲವಾಗಿ ಸಹ್ಯಾದ್ರಿ ಗಿರಿಶೃಂಗಗಳ ತಪ್ಪಲಿನಲ್ಲಿರುವ ಮಲೆನಾಡಿನ ಹೆಬ್ಬಾಗಿಲೆಂದೇ ಪ್ರಖ್ಯಾತವಾಗಿರುವ ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಇವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ನಿಲ್ದಾಣಕ್ಕೆ ಹೆಸರನ್ನು ನಾಮಕರಣ ಮಾಡುವ ವಿಷಯದಲ್ಲಿ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದು, ಈ ಹೆಸರುಗಳ ಪೈಕಿ ಸ್ವತಃ ಬಿ.ಎಸ್ ಯಡಿಯೂರಪ್ಪನವರು ತಮ್ಮ ಹೆಸರಿನ ಬದಲಿಗೆ ರಾಷ್ಟ್ರಕವಿ ಕುವೆಂಪುರವರ ಹೆಸರಿನ್ನಿಡಲು ಸೂಚಿಸಿರುತ್ತಾರೆ. ಅನೇಕ ಕವಿವರ್ಯರು ಹುಟ್ಟಿ ಮೆರೆದ ಹಾಗೂ ಶಿವಪ್ಪನಾಯಕರಂತಹ ಹಲವು ರಾಜಮಹಾರಾಜರುಗಳು ಆಳಿದ ಇಂತಹ ಮಲೆನಾಡಿನಲ್ಲಿ ಜನಿಸಿದಂತಹ ಕುವೆಂಪುರವರು ಸಾಹಿತ್ಯ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡು, ಶ್ರೀ ರಾಮಾಯಣ
ದರ್ಶನಂ ಮಹಾಕಾವ್ಯವನ್ನು ರಚಿಸಿ ಕನ್ನಡದ ಸರ್ವಶ್ರೇಷ್ಟ ಸಾಹಿತಿ ಹಾಗೂ ಕವಿ ಎಂದು ಖ್ಯಾತಿಗೊಳಗಾಗಿ, ನಾಡಿಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ
ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ದೇಶಕ್ಕೆ ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚೇತನ, ಕವಿ ಕುವೆಂಪುರವರ ಹೆಸರನ್ನು ನಿರ್ಮಾಣಕ್ಕೆ ನಾಮಕರಣ ಮಾಡುವುದು ಸೂಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಹಕ್ಕೊತ್ತಾಯ ಮಾಡುವ ಮೂಲಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಚ್. ತಿಮ್ಮಪ್ಪ, ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ್, ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ, ಕೋಡ್ಲುಯಜ್ಞಯ್ಯ, ರೇವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment