ಭದ್ರಾವತಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿದರು.
ಭದ್ರಾವತಿ, ಫೆ. ೨೩ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟದಲ್ಲಿ ಪಕ್ಷ ರಾಜಕಾರಣ ಮಾಡುವುದಿಲ್ಲ. ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವ ಜೊತೆಗೆ ಕ್ಷೇತ್ರದ ಸಮಸ್ತ ನಾಗರೀಕರು ಸಹ ಫೆ.೨೪ರಂದು ಹಮ್ಮಿಕೊಳ್ಳಲಾಗಿರುವ ಭದ್ರಾವತಿ ಬಂದ್ ಹೋರಾಟ ಬೆಂಬಲಿಸುವಂತೆ ಮನವಿ ಮಾಡುವುದಾಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕಾರ್ಮಿಕನಾಗಿ ದುಡಿಯುವ ಜೊತೆಗೆ ಕಾರ್ಮಿಕರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಒಬ್ಬ ಕಾರ್ಮಿಕನ ಹೆಂಡತಿಯಾಗಿರುವ ನಾನು ಸಹ ಈ ಕಾರ್ಖಾನೆ ಉಳಿಯಬೇಕೆಂಬ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದ ವತಿಯಿಂದ ಸಹ ಹೋರಾಟ ನಡೆಸಲಾಗುತ್ತಿದ್ದು, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೂ ಸಂಪೂರ್ಣ ಬೆಂಬಲ ನೀಡಿದ್ದೇವೆ. ವಿಐಎಸ್‌ಎಲ್ ಕಾರ್ಖಾನೆ ವಿಚಾರದಲ್ಲಿ ಯಾವುದೇ ರೀತಿ ರಾಜಕಾರಣ ಮಾಡುವುದಿಲ್ಲ. ಕ್ಷೇತ್ರದ ನಾಗರೀಕರು ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಈ ಕಾರ್ಖಾನೆ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಅಂದು ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡುವ ಮೂಲಕ ಕಾರ್ಮಿಕರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಶಿವಮೊಗ್ಗ ನಗರಕ್ಕೆ ಫೆ.೨೭ರಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ಈ ಕಾರ್ಖಾನೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಕ್ಷೇತ್ರದ ಜನತೆಗೆ ಶುಭ ಸಂದೇಶ ನೀಡಬೇಕೆಂದು ಮನವಿ ಮಾಡಿದರು.
ಕಳೆದ ದಿನಗಳ ಹಿಂದೆ ಕ್ಷೇತ್ರಕ್ಕೆ ಆಗಮಿಸಿದ್ದ ಪಂಚರತ್ನ ಯಾತ್ರೆ ಯಶಸ್ವಿಯಾಗಿದೆ. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದ್ದು, ಯಶಸ್ವಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಮಾತನಾಡಿ, ವಿಐಎಸ್‌ಎಲ್ ಉಳಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ನಿಲುವು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಮ್ಮ ಹೋರಾಟ ಈ ನಿಟ್ಟಿನಲ್ಲಿ ದಾರಿಯಲ್ಲಿಯೇ ಸಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷರುಗಳಾದ ಆರ್. ಕರುಣಾಮೂರ್ತಿ, ಧರ್ಮಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ತಿಮ್ಮೇಗೌಡ, ಕರಿಯಪ್ಪ, ಮೈಲಾರಪ್ಪ, ಉಮೇಶ್, ಮಧುಸೂದನ್, ಲೋಕೇಶ್ವರ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment