Thursday, February 23, 2023

ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ, ಗೋಪುರ ಕಳಶ ಪ್ರತಿಷ್ಠಾಪನೆ

ಭದ್ರಾವತಿ ಬಿ.ಎಚ್ ರಸ್ತೆ ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ ಹಾಗು ಗೋಪುರ ಕಳಶ ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹ ಮತ್ತು ಗೋಪುರ ಕಲಶ ಮೆರವಣಿಗೆ ನಡೆಯಿತು.
    ಭದ್ರಾವತಿ, ಫೆ. ೨೩: ನಗರದ ಬಿ.ಎಚ್ ರಸ್ತೆ ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ ಹಾಗು ಗೋಪುರ ಕಳಶ ಪ್ರತಿಷ್ಠಾಪನೆ ಶುಕ್ರವಾರ ನಡೆಯಲಿದೆ.
    ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಪೂಜೆ, ಮಧ್ಯಾಹ್ನ ಕಂಕಣ ಧಾರಣೆ, ಅಂಕುರಾರ್ಪಣೆ, ಧ್ವಜಸ್ಥಾಪನೆ, ನಂತರ ಮಹಾಮಂಗಳಾರತಿ, ಸಂಜೆ ಗಂಗೆಪೂಜೆ ವಿಗ್ರಹ ಮೆರವಣಿಗೆ ನಂತರ ದೇವಾಲಯ ಪ್ರವೇಶ, ಬಿಂಬಶುದ್ಧಿ, ಅಧಿವಾಸಂಗ, ಪೂಜಾ ಹೋಮ ಪ್ರಸಾದ ವಾಸ್ತು ಹೋಮ, ರಾಕ್ಷೋಜ್ಞ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ, ಕಲಾ ಪ್ರತಿಷ್ಠಾಪನೆ, ನೇತ್ರೋನ್ಮಿಲನ ಪ್ರತಿಷ್ಠಾಪನಾಂಗ ಹೋಮ, ಪೂರ್ಣಾಹುತಿ, ನವಕಲಾಶಾಭಿಷೇಕ, ಮಹಾ ಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.


    ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹ ಮತ್ತು ಗೋಪುರ ಕಲಶ ಮೆರವಣಿಗೆಯಲ್ಲಿ ಡಾ. ರಾಜ್‌ಕುಮಾರ್, ಡಾ. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘ ಮತ್ತು ನೃಪತುಂಗ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದೇವಸ್ಥಾನ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಎಂ.ಪಿ ಉಮೇಶ್, ಬಿ.ಎಂ ಮಹಾದೇವಯ್ಯ, ಶ್ರೀನಿವಾಸ್ ನಾಯ್ಡ್, ಕಾರ್ಯದರ್ಶಿ ಗೋವಿಂದಪ್ಪ, ಖಜಾಂಚಿ ಮಾಣಿಕ್ಯಂ, ಸದಸ್ಯರಾದ ಜಾರ್ಜ್(ನಗರಸಭಾ ಸದಸ್ಯ), ದೇವು, ಬಿ.ಎನ್ ವಾಸು, ಎಂ. ಮಹಾದೇವ, ಗುರುಸ್ವಾಮಿ, ಎಂ.ಪಿ ಕೃಷ್ಣ, ತಿಮ್ಮಯ್ಯ, ಭೂಮಿನಾಥನ್, ಶರವಣ, ಮಂಜುನಾಥ್, ಎಸ್. ಕುಮಾರ ಮತ್ತು ಬಿ.ಎನ್ ರವಿ ಹಾಗು ವಾರ್ಡ್ ಹಿರಿಯ ಮುಖಂಡರು ಮತ್ತು ನಿವಾಸಿಗಳು ಪಾಲ್ಗೊಂಡಿದ್ದರು.
    ಮಂಗಳವಾದ್ಯ ಸೇರಿದಂತೆ ಕಲಾತಂಡಗಳು ಹಾಗು ಪೂರ್ಣಕುಂಭಗಳೊಂದಿಗೆ ನೂತನ ವಿಗ್ರಹ ಮತ್ತು ಗೋಪುರ ಕಲಶ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಸಿಡಿಮದ್ದು ಪ್ರದರ್ಶನ ನಡೆಯಿತು. ಶಂಕರಮಠದ ಅರ್ಚಕ ಗಣೇಶ್ ಪ್ರಸಾದ್ ನೇತೃತ್ವದ ತಂಡದಿಂದ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.  

No comments:

Post a Comment