ಭದ್ರಾವತಿಯಲ್ಲಿ ಬುಧವಾರ ಆಮ್ ಆದ್ಮಿ ಪಾರ್ಟಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಾದ ಎಚ್. ರವಿಕುಮಾರ್, ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಭದ್ರಾವತಿ, ಮಾ. ೮ : ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ರಾಜ್ಯದ ನಾಯಕರು ಹಣವಂತರಿಗೆ ಮಣೆ ಹಾಕುತ್ತಿರುವುದು ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಾದ ಎಚ್. ರವಿಕುಮಾರ್ ಮತ್ತು ರಮೇಶ್ ಹೇಳಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರವರ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರ ಮುಕ್ತ ಆಡಳಿತದ ಜೊತೆಗೆ ಶ್ರೀಸಾಮಾನ್ಯರ ಪಕ್ಷವಾಗಿ ಗುರುತಿಸಿಕೊಂಡಿದೆ. ಪಕ್ಷದ ತತ್ವ, ಸಿದ್ದಾಂತಗಳನ್ನು ಮೆಚ್ಚಿ ಸುಮಾರು ೧ ದಶಕದಿಂದ ತಾಲೂಕಿನಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಪಕ್ಷ ಸಂಘಟನೆಗಾಗಿ ಎಲ್ಲವನ್ನು ತ್ಯಾಗಮಾಡಿದ್ದೇವೆ. ಆದರೆ ಇಂದು ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಪಕ್ಷದಿಂದ ಯಾವುದೇ ರೀತಿ ಪ್ರತಿಫಲ ಬಯಸಲಿಲ್ಲ. ಇಂದಿಗೂ ಸಹ ಬದ್ದತೆಯನ್ನು ಉಳಿಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ರಾಜ್ಯದ ಮುಖಂಡರು ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಿ ಹಣವಂತರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಮನಸ್ಸಿಗೆ ತುಂಬಾ ಬೇಸರ ಉಂಟಾಗಿದೆ. ಪಕ್ಷದಿಂದ ಹೊರಬರಲು ನಿರ್ಧರಿಸಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅಥವಾ ಅಮಿಷಗಳಿಗೆ ಬಲಿಯಾಗಿ ಪುನಃ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದರು.
ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸೂಕ್ತ ನಿರ್ಧಾರ ಕೈಗೊಂಡು ಮುನ್ನಡೆಯಲಾಗುವುದು. ಪಕ್ಷ ಸಂಘಟನೆಯಲ್ಲಿ ಸಹಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
No comments:
Post a Comment