ಭದ್ರಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಕಾಗೇಗೋಡಮಗ್ಗೆ, ಅರಳಿಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಾಂತರ ಭಾಗಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಭದ್ರಾವತಿ, ಮೇ. ೨ : ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಪ್ರಚಾರದ ಭರಾಟೆ ಹೆಚ್ಚಾಗುತ್ತಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೂ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಭ್ಯರ್ಥಿಗಳ ಪರವಾಗಿ ಆಯಾ ಭಾಗಗಳಲ್ಲಿ ಹೆಚ್ಚಿನ ಪ್ರಚಾರದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಕಳೆದ ೫-೬ದಿನಗಳಿಂದ ಗ್ರಾಮಾಂತರ ಭಾಗದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು, ಸೋಮವಾರ ಕಾಗೇಕೋಡಮಗ್ಗೆ, ಅರಳಿಹಳ್ಳಿ, ವೀರಾಪುರ, ರಾಮನಗರ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದ್ದು, ಇದೀಗ ನಗರಸಭೆ ವ್ಯಾಪ್ತಿಯಲ್ಲಿ ಭದ್ರಾ ಕಾಲೋನಿ, ಸೀಗೆಬಾಗಿ, ಹೊಸಮನೆ, ಗಾಂಧಿನಗರ, ಭೂತನಗುಡಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಭದ್ರಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ನಗರಸಭೆ ವ್ಯಾಪ್ತಿಯ ಹಳೇನಗರದ ಭಾಗದಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಭಾರತೀಯ ಜನತಾಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಸಹ ಕಳೆದ ೫-೬ ದಿನಗಳಿಂದ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಗ್ರಾಮಾಂತರ ಭಾಗಗಳಲ್ಲಿ ರಾತ್ರಿ ವೇಳೆ ನಗರ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಪಕ್ಷ ಆಯಾ ಭಾಗದ ಪಕ್ಷದ ಶಕ್ತಿ ಕೇಂದ್ರಗಳಲ್ಲಿ, ಬೂತ್‌ಗಳಲ್ಲಿ ವ್ಯಾಪಕ ಪ್ರಚಾರಕ್ಕೆ ಗಮನ ನೀಡಿದೆ.
ಸೋಮವಾರ ಹೆಬ್ಬಂಡಿ, ಲಕ್ಷ್ಮೀಪುರ, ಬಿಳಿಕಿ, ಡೈರಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಹಾಗು ನಗರಸಭೆ ವ್ಯಾಪ್ತಿಯ ಕೋಟೆನಗರ, ಹಳೇನಗರ ಭಾಗದಲ್ಲಿ ಮಂಗೋಟೆ ರುದ್ರೇಶ್ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ಕಳೆದ ಹಲವು ದಿನಗಳಿಂದ ಸಂಜೆ ವೇಳೆ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಶಾಸಕರ ಪರವಾಗಿ ಅವರ ಸಹೋದರರು, ಮಕ್ಕಳು ಹಾಗು ಕುಟುಂಬ ಸಂಬಂಧಿಗಳು ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಗ್ರಾಮಾಂತರ ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಆನಂದ್ ಮೆಡಿಕಲ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ಅಭ್ಯರ್ಥಿ ಸಮಿತ್ರಬಾಯಿ, ಸಂಯುಕ್ತ ಜನತಾದಳ ಅಭ್ಯರ್ಥಿ ಶಶಿಕುಮಾರ್ ಎಸ್. ಗೌಡ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಎನ್ ರಾಜು, ಎಸ್.ಕೆ ಸುಧೀಂದ್ರ, ಜಾನ್ ಬೆನ್ನಿ, ವೈ. ಶಶಿಕುಮಾರ್, ಡಿ. ಮೋಹನ್ ಸಹ ಪ್ರಮುಖ ರಾಜಕೀಯ ಪಕ್ಷಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ.
No comments:
Post a Comment