Sunday, June 25, 2023

ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಭವಿಷ್ಯಕ್ಕೆ ಮುನ್ನುಡಿಯಾಗಲಿ

ಪುನರ್ ಮಿಲನ-ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಭೈರಪ್ಪ

ಭದ್ರಾವತಿ ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಭೈರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೫ : ಯಾವುದೇ ವಿದ್ಯಾಸಂಸ್ಥೆಯಾಗಿರಲಿ ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಭವಿಷ್ಯಕ್ಕೆ ಮುನ್ನುಡಿ ಬರೆಯುವಂತಾಗಬೇಕು ಎಂದು ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಭೈರಪ್ಪ ಹೇಳಿದರು.
    ಅವರು ಭಾನುವಾರ ಶಾಲೆಯಲ್ಲಿ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಒಂದು ವಿದ್ಯಾಸಂಸ್ಥೆ ಆರಂಭಿಸಿ ಅದನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಈ ವಿದ್ಯಾಸಂಸ್ಥೆಯನ್ನು ಇಂದಿಗೂ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಹಳೇಯ ವಿದ್ಯಾರ್ಥಿಗಳು ಇದನ್ನು ನೆನಪಿನಲ್ಲಿಟ್ಟುಕೊಂಡು ವಿದ್ಯಾಸಂಸ್ಥೆಗೆ ನೆರವಾಗಬೇಕು. ಆಗಮಾತ್ರ ಶಿಕ್ಷಣ ನೀಡಿದ ಗುರುಗಳಿಗೆ, ಶಿಕ್ಷಣ ಸಂಸ್ಥೆಗೆ ಗೌರವ ನೀಡಿದಂತಾಗುತ್ತದೆ ಎಂದರು.
    ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇಯವಿದ್ಯಾರ್ಥಿ, ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸುಮಾರು ೪೦ ವರ್ಷಗಳ ನಂತರ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮಗೆ ವಿದ್ಯೆ ಹೇಳಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು ವಿಶೇಷತೆಯಿಂದ ಕೂಡಿದೆ. ಈ ಕಾರ್ಯಕ್ರಮ ಆಯೋಜನೆಗಾಗಿ ಸುಮಾರು ೬ ವರ್ಷಗಳಿಂದ ರೂಪುರೇಷೆ ಸಿದ್ದಪಡಿಸಿಕೊಂಡು ಬರಲಾಗಿದೆ. ಈ ಶಾಲೆಯ ಹಳೇಯ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಇದಕ್ಕೆ ಕಾರಣೀಭೂತರಾದ ಗುರುಗಳನ್ನು ಗೌರವಿಸುವುದು ಹಾಗು ಅವರ ಆಶೀರ್ವಾದ ಪಡೆಯುವುದು ಮತ್ತು ಭವಿಷ್ಯದ ಸಮಾಜಕ್ಕೆ ನಾವು ಮಾದರಿಯಾಗುವ ನಿಟ್ಟಿನಲ್ಲಿ ಮುನ್ನಡೆಯುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
    ಗುರುಗಳಾದ ಭೈರಪ್ಪ, ರಾಜಣ್ಣ, ಎ.ಸಿ ಚನ್ನಬಸಪ್ಪ, ನಟರಾಜ್, ದಿವಂಗತ ಕೆ.ಎಸ್ ರುದ್ರಪ್ಪ ಮತ್ತು  ಮುರುಗೇಂದ್ರಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗು ಶಾಲೆಯ ಶಿಕ್ಷಕ ವೃಂದವನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.


ಭದ್ರಾವತಿ ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮ ಯಶಸ್ವಿ ಹಿನ್ನಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಅವರನ್ನು ಸನ್ಮಾನಿಸಿ ಸಂಭ್ರಮಿಸಿದರು.

    ಶಾಲೆಯ ಹಳೇಯ ವಿದ್ಯಾರ್ಥಿಗಳಾದ ಸಿದ್ದಯ್ಯ, ಸಾಗರ್, ಮಂಜುನಾಥ್, ತೋಟಯ್ಯ, ರಾಜಪ್ಪ, ಎಸ್.ವಿ ರಾಮಚಂದ್ರ, ಜಗದೀಶ್, ಪ್ರಮೀಳಾ, ನಂಜುಂಡಪ್ಪ, ಉಮೇಶ್, ಮಹೇಶ್ವರಯ್ಯ, ನಾಗರತ್ನ, ಭಾರತಿ, ಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಭಾರತಿ ಪ್ರಾರ್ಥಿಸಿ, ನಿತ್ಯಾನಂದ ಸ್ವಾಗತಿಸಿ, ಮುರುಳಿ ನಿರೂಪಿಸಿದರು. ರಾಜ್ಯದ ವಿವಿಧೆಡೆಗಳಿಂದ ಹಾಗು ಹೊರರಾಜ್ಯದಿಂದ ಹಳೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭದಲ್ಲಿ ನಿಧನ ಹೊಂದಿದ ಗುರುಗಳಿಗೆ ಹಾಗು ಹಳೇಯ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.

No comments:

Post a Comment