ಪ್ರಧಾನಿ, ಕೇಂದ್ರ ಸಚಿವರು, ಸಂಸದರಿಗೆ ಬಿಜೆಪಿ ಕೃತಜ್ಞತೆ
ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗು ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಆ. ೩: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸ್ಥಗಿತಗೊಂಡಿರುವ ಬಾರ್‌ಮಿಲ್ ಘಟಕ ಆ.೧೦ ರಿಂದ ಪುನಃ ಆರಂಭಗೊಳ್ಳಲಿದ್ದು, ನಂತರದ ದಿನಗಳಲ್ಲಿ ಪ್ರೈಮರಿ ಮಿಲ್ ಘಟಕ ಕಾರ್ಯಾರಂಭಗೊಳ್ಳಲಿದೆ. ಇದರಿಂದಾಗಿ ಮುಚ್ಚುವ ಹಂತ ತಲುಪಿರುವ ಕಾರ್ಖಾನೆಗೆ ಮರುಜೀವ ಬಂದಂತಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕ ಸಂಘಟನೆಗಳು, ಸ್ಥಳೀಯ ಮತ್ತು ಜಿಲ್ಲಾ ಹಾಗು ರಾಜ್ಯಮಟ್ಟದ ಮುಖಂಡರು, ಜನಪ್ರತಿನಿಧಿಗಳು ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ನಿರಂತರವಾಗಿ ಕೈಗೊಂಡ ಪರಿಶ್ರಮದಿಂದಾಗಿ ಘಟಕಗಳು ಕಾರ್ಯಾರಂಭಗೊಳ್ಳುತ್ತಿವೆ ಎಂದರು.
ಕಾರ್ಖಾನೆಗೆ ಬಂಡವಾಳ ತೊಡಗಿಸಲು ಸಾಧ್ಯವಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದ ಉಕ್ಕು ಪ್ರಾಧಿಕಾರ (ಸೈಲ್) ಆಡಳಿತ ಮಂಡಳಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಅಥವಾ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಬಂಡವಾಳ ತೊಡಗಿಸಲು ಯಾವ ಕಂಪನಿಗಳು/ಬಂಡವಾಳಶಾಹಿಗಳು ಮುಂದೆ ಬಾರದ ಹಿನ್ನಲೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಮುಚ್ಚುವ ಪ್ರಕ್ರಿಯೆಗೆ ಆದೇಶ ನೀಡಿತ್ತು. ಆದರೆ ಕಾರ್ಮಿಕರ ಹೋರಾಟ ಹಾಗೂ ಕೇಂದ್ರ ಸಚಿವರು ಮತ್ತು ಕೇಂದ್ರ ಸರ್ಕಾರದ ನಡುವೆ ಸಂಸದ ಬಿ.ವೈ ರಾಘವೇಂದ್ರರವರು ನಡೆಸಿದ ನಿರಂತರ ಸಂಪರ್ಕದಿಂದಾಗಿ ಮುಚ್ಚುವ ಪ್ರಕ್ರಿಯೆಗೆ ಆದೇಶ ನೀಡಿದ್ದ ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿಯೇ ಇಂದು ಬಾರ್ ಮಿಲ್ ಹಾಗೂ ಪ್ರೈಮರಿ ಮಿಲ್ ಘಟಕಗಳ ಆರಂಭದ ಶುಭಸೂಚನೆ ನೀಡಿದೆ. "ಬಾರ್ ಮಿಲ್ ಘಟಕದಲ್ಲಿ ಉತ್ಪಾದನೆ ಆ,೧೦ ರಿಂದ ಆರಂಭವಾಗಲಿದೆ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಿ" ಎಂಬ ಸಂದೇಶದ ಪ್ರತಿಯನ್ನು ಸಹ ಇಲ್ಲಿನ ಆಡಳಿತ ಮಂಡಳಿಯ ಅಧಿಕಾರಿಗಳು ನೋಟೀಸಿನಲ್ಲಿ ಹಾಕುವಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದರು.
ಕಾರ್ಖಾನೆಯಲ್ಲಿ ನಿರಂತರ ಉತ್ಪಾದನೆಗಳು ನಡೆದರೆ ಕಾರ್ಮಿಕರಿಗೆ ಪೂರ್ಣ ಪ್ರಮಾಣ ಉದ್ಯೋಗ ದೊರಕುವುದಲ್ಲದೆ. ಮಂಜೂರಾಗಿರುವ ಗಣಿ ಕೂಡ ತನ್ನ ಕಾರ್ಯ ಆರಂಭಿಸಲಿದೆ. ಆ ಮೂಲಕ ನಿರಂತರ ಉತ್ಪಾದನೆಯಿಂದಾಗಿ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಬಹುದು. ಇದು ಬಂಡವಾಳ ಹೂಡಿಕೆಯ ಮೇಲೂ ಪರಿಣಾಮ ಬೀರಲಿದ್ದು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಹಂತದಿಂದ ಹೊರತರುವ ಸಾಧ್ಯತೆಗಳಿವೆ ಎಂದರು.
ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಮಿಕರು ಹೊಂದಿರುವ ವಿಶ್ವಾಸ ಹಾಗು ನಂಬಿಕೆಯನ್ನುಉಳಿಸಿಕೊಂಡಿದ್ದಾರೆ. ಸುಮಾರು ೧೨ ವರ್ಷಗಳಿಂದಲೂ ಖಾಸಗಿಕರಣ, ಬಂಡವಾಳ ಹಿಂತೆಗೆದಂತಹ ಹಲವಾರು ಸಮಸ್ಯೆಗಳ ನಡುವೆ ಮುಚ್ಚುವ ಪ್ರಕ್ರಿಯೆ ಎದುರಾದರೂ ಉತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲದಂತೆ ನೋಡಿಕೊಂಡು, ಮುಚ್ಚಿದ್ದ ಬಾರ್ ಮಿಲ್ ತೆರೆಯಲು ಬೇಕಾದ ಅಗತ್ಯವಾದ ಬಜೆಟ್ ಸಿದ್ದಪಡಿಸಿ, ಬೇಕಾದಂತಹ ಕಚ್ಚಾವಸ್ತುಗಳು ಕಾರ್ಖಾನೆಗೆ ಸರಬರಾಜಾಗುವಂತೆ ಮಾಡುವಲ್ಲಿ ಸಂಸದರ ಪ್ರಯತ್ನ ಹೆಚ್ಚಿನದ್ದಾಗಿದೆ ಎಂದರು.
ಘಟಕಗಳು ಕಾರ್ಯಾರಂಭಗೊಳ್ಳಲು ಕಾರಣಕರ್ತರಾಗಿರುವ ಸಂಸದ ಬಿ.ವೈ ರಾಘವೇಂದ್ರ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಾರ್ಖಾನೆಯ ಕಾರ್ಮಿಕ ಸಂಘಟನೆಗಳು ಹಾಗೂ ಬಿಜೆಪಿ ಘಟಕದವತಿಯಿಂದ ಧನ್ಯವಾದ ಅರ್ಪಿಸಲಾಗುವುದು ಎಂದರು.
ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಮಾತನಾಡಿ, ಕಾರ್ಖಾನೆಯ ವಸ್ತು ಸ್ಥಿತಿಯನ್ನು ಅಗತ್ಯ ದಾಖಲೆಗಳ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಸಂಸದರು ಯಶಸ್ವಿಯಾಗಿದ್ದಾರೆ. ಸಂಸದರು ಸರ್ಕಾರದ ಮಟ್ಟದಲ್ಲಿ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಅವರ ನಿರಂತರ ಪ್ರಯತ್ನದಿಂದ ಮುಚ್ಚುವ ಪ್ರಕ್ರಿಯೆ ಆದೇಶವಿದ್ದ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡುವಂತಾಗಿದೆ. ಇದು ಕಾರ್ಖಾನೆಯನ್ನು ಉಳಿಸಿಕೊಳ್ಳುವ ಒಂದು ಪ್ರಯತ್ನವಾಗಿದ್ದು, ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು. ಕಾರ್ಖಾನೆ ವಿಚಾರದಲ್ಲಿ ನಿರಂತರ ಪ್ರಯತ್ನದಲ್ಲಿರುವ ಬಿ.ವೈ ರಾಘವೇಂದ್ರ ಅವರಿಗೆ ಕಾರ್ಮಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಕಾರ್ಖಾನೆಗೆ ಶಾಶ್ವತ ಬಂಡವಾಳ ತೊಡಗಿಸಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ, ಇದುವರೆಗಿನ ಹೋರಾಟದಿಂದಲೇ ಘಟಕಗಳು ಆರಂಭವಾಗಲು ಸಾಧ್ಯವಾಗಿದೆ. ಸರ್ಕಾರದ ಪಾಲಿಸಿ ಮ್ಯಾಟರ್ ಎಂದು ಸಂಸದರು ಕೈಕಟ್ಟಿ ಕುಳಿತುಕೊಳ್ಳದೆ ಕೆಲಸ ಮಾಡಿದ್ದಕ್ಕಾಗಿ ಉತ್ತಮ ಫಲಿತಾಂಶ ಹೊರಬಂದಿದೆ ಎಂದರು.
ಗುತ್ತಿಗೆ ಕಾರ್ಮಿಕರ ಸಂಘಟನೆ(ಎಐಟಿಯುಸಿ) ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರುಗಳಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ತೀರ್ಥಯ್ಯ, ಮಂಜುಳ, ಮಂಗಳ, ಸುರೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment