Thursday, August 3, 2023

ಮಣಿಪುರ ಸರ್ಕಾರ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ

ರಾಷ್ಟ್ರಪತಿಗಳಿಗೆ ತಹಸೀಲ್ದಾರ್‌ ಮೂಲಕ ಡಿಎಸ್‌ಎಸ್‌ ಮನವಿ

ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನಸಿಂಗ್ ನೇತೃತ್ವದ  ಸರ್ಕಾರ  ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೩: ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನಸಿಂಗ್ ನೇತೃತ್ವದ  ಸರ್ಕಾರ  ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ಈಶಾನ್ಯ ರಾಜ್ಯವಾದ ಮಣಿಪುರ ಸುಮಾರು ಮೂರು ತಿಂಗಳುಗಳ ಹಿಂದೆ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿದೆ. ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲು ಮಾಡಿ ಅವರ ಮೇಲೆ ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಮಣಿಪುರ ಹಿಂಸಾಚಾರದ ಅಘಾತಕರ ಮುಖವನ್ನು ತೆರೆದಿಟ್ಟಿದೆ. ಹಿಂಸಾಚಾರದ ಕರಾಳ ಮುಖ ಇಡೀ ದೇಶಕ್ಕೆ ತೋರಿಸಿದೆ. ಮಹಿಳೆಯರಿಗೆ ಯಾವ ಮಟ್ಟದ ಅವಮಾನ ಮಾಡುವುದಕ್ಕೂ ಹೇಸದ ಮನಸ್ಥಿತಿ ಪೋಲೀಸರು ಮತ್ತು ಮಧ್ಯ ಪ್ರವೇಶ ಮಾಡಲು ಕೇಂದ್ರ ಸರ್ಕಾರದ ಹಿಂದೇಟು ಮತ್ತು ಎಲ್ಲಕ್ಕಿಂತ ಮಾನವೀಯತೆಯನ್ನೇ ಮರೆತಿರುವ ಸ್ಥಿತಿ ಎಲ್ಲದಕ್ಕೂ ಈ ವಿಡಿಯೋ ಕನ್ನಡಿ ಹಿಡಿದಿದೆ. ಈ ಕೃತ್ಯವು ಮಣಿಪುರ ಮಾತ್ರವಲ್ಲ ಇಡೀ ದೇಶ ಬೆಚ್ಚಿ ಬೀಳಿಸುವಂತೆ ಮಾಡಿದ ಈ ಘಟನೆಯ ಪೂರ್ಣ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೇ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದರು.
    ಕಾನೂನಿನ ಆಡಳಿತಕ್ಕೆ ಒಳಪಟ್ಟ ಯಾವುದೇ ನಾಗರೀಕ ಸಮಾಜ ಇಂತಹ ಹೀನಕೃತ್ಯ ಎಸಗಿದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಿತ್ತು. ಮೇ ತಿಂಗಳಲ್ಲಿ ಎಫ್ಐಆರ್ ದಾಖಲಾಗಿದೆ.  ಘಟನೆ ಹೇಗೆ ನಡೆದಿದೆ ಎಂಬ ವಿಡಿಯೋ ಅದರಲ್ಲಿದೆ. ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವವರೆಗೆ ಯಾವುದೇ ತನಿಖೆ ನಡೆದಿರಲಿಲ್ಲ. ಯಾರನ್ನು ಬಂಧಿಸಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇಷ್ಟೆಲ್ಲಾ ನಡೆದಿರುವಾಗ ಪ್ರಧಾನಿ ಮೋದಿಯವರೇಕೆ ಮೌನ ವಹಿಸಿದ್ದಾರೆ ಎನ್ನುವುದು ಸಹ ಅನುಮಾನಕ್ಕೀಡು ಮಾಡಿದೆ ಎಂದು ಆರೋಪಿಸಿದರು.
    ಮುಖ್ಯಮಂತ್ರಿ ಬಿರೇನ್‌ಸಿಂಗ್ ರವರು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಘಟನೆಗಳ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊತ್ತುಕೊಳ್ಳಬೇಕಾಗುತ್ತದೆ. ರಾಜಕೀಯ, ಸಾಮಾಜಿಕ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳು ಹುಟ್ಟಲು ಈಗಿನ ಪರಿಸ್ಥಿತಿ ಕಾರಣವಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ ಚಂದ್ರಚೂಢ ರವರು ಗಾಢ ಕಳವಳ ವ್ಯಕ್ತಪಡಿಸಿದ್ದಾರೆ. ತಳಮಟ್ಟದಲ್ಲಿ ಏನನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದರೆ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಸಂಬಂಧಿಸಿದ ತಮ್ಮ ಸುಧೀರ್ಘ ಮತ್ತು ನಿಗೂಢ ಮೌನವನ್ನು ಕೊನೆಗೂ ಮುರಿದಿದ್ದಾರೆ (ಮುಖ್ಯ ನ್ಯಾಯಮೂರ್ತಿಯವರ ಮಾತುಗಳು ಮತ್ತು ಜನರಲ್ಲಿ ಮೂಡುತ್ತಿರುವ ಆಕ್ರೋಶದಿಂದ ಅವರು ಮೌನ ಮುರಿದಿರಬಹುದು) ಈ ಘಟನೆಯಿಂದ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಮತ್ತು ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲವೆಂದು ಪ್ರಧಾನಿಯವರು ಹೇಳಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಲು ಇಂತಹದೊಂದು ಘೋರಕೃತ್ಯ ನಡೆಯಬೇಕಾಗಿತ್ತೇ?  ಎಂದು ಮುಖಂಡರು ಪ್ರಶ್ನಿಸಿದರು.
    ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಮಣಿಪುರದಲ್ಲಿ 2023 ಮೇ 4 ರಂದು ಕುಕಿ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಸಂಪೂರ್ಣ ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣವೇ ಗಲ್ಲಿಗೇರಿಸಬೇಕು. ಸುಮಾರು 3 ತಿಂಗಳುಗಳಿಂದ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಮಣಿಪುರ ಮುಖ್ಯಮಂತ್ರಿ ಬೀರೇನ್‌ಸಿಂಗ್ ನೇತೃತ್ವದ ಸರ್ಕಾರ ತಕ್ಷಣವೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಮಣಿಪುರದ ಮುಖ್ಯಮಂತ್ರಿ ಬೀರೇನ್‌ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ರವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕು ಮತ್ತು ಮಣಿಪುರದ ಸಂತ್ರಸ್ಥ ಮಹಿಳೆಯರ ಕುಟುಂಬಗಳಿಗೆ ಸರ್ಕಾರಸೂಕ್ತ ಭದ್ರತೆ ಒದಗಿಸಬೇಕು ಹಾಗು ಸಂತ್ರಸ್ಥ ಮಹಿಳೆಯರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
    ಡಿಎಸ್‌ಎಸ್‌  ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಹಿರಿಯ ಮುಖಂಡ ಶಿವಬಸಪ್ಪ,  ತಾಲೂಕು ಸಂಚಾಲಕ ಎಸ್. ನಾಗರಾಜ್‌, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಲಮ್ಮ, ಜಿಲ್ಲಾ ಸಂಚಾಲಕರಾದ ಆರ್. ತಮ್ಮಯ್ಯ, ಎಂ. ಏಳುಕೋಟಿ, ವಕೀಲ ಎಂ. ಶಿವಕುಮಾರ್‌  ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment