ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮನವಿ
ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಆಟೋ ಚಾಲಕರು ಮತ್ತು ಮಾಲೀಕರಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಭೆ ಅಧ್ಯಕ್ಷತೆವಹಿಸಿದ್ದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಅವರನ್ನು ಆಟೋ ಚಾಲಕರ ಸಂಘದಿಂದ ಅಭಿನಂದಿಸಲಾಯಿತು.
ಭದ್ರಾವತಿ, ಆ. ೧೭: ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮನವಿ ಮಾಡಿದರು.
ಅವರು ಗುರುವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಆಟೋ ಚಾಲಕರ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಆಟೋ ಚಾಲಕರು ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಆಟೋ ಚಾಲಕರಿಂದಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಆಟೋ ಚಾಲಕರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸಹಕರಿಸುವಂತೆ ಕೋರಿದರು.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಮಾತನಾಡಿ, ಆಟೋ ಚಾಲಕರ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಎಲ್ಲಿಬೇಕೆಂದರಲ್ಲಿ ಆಟೋ ನಿಲ್ಲಿಸುವಂತಿಲ್ಲ. ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವಂತಿಲ್ಲ. ತಪ್ಪು ಮಾಡಿದ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ತಪಾಸಣೆ ವೇಳೆ ಚಾಲನಾ ಪರವಾನಗಿ, ವಾಹನ ಮಾಲೀಕತ್ವ ದಾಖಲಾತಿ, ವಿಳಾಸ ದೃಢೀಕರಣ, ಆಧಾರ್ ಕಾರ್ಡ್ ಸೇರಿದಂತೆ ಸೂಕ್ತ ದಾಖಲಾತಿಗಳನ್ನು ನೀಡಲೇಬೇಕು. ಇಲಾಖೆಗೆ ಪ್ರತಿಯೊಬ್ಬ ಆಟೋ ಚಾಲಕನ ಮಾಹಿತಿ ಅಗತ್ಯವಾಗಿದೆ. ಆಟೋ ಚಾಲಕರ ಸಂಘಗಳು ತಕ್ಷಣ ಮಾಹಿತಿ ಸಂಗ್ರಹಿಸಿ ನೀಡಬೇಕು. ಒಂದು ವೇಳೆ ಅಗತ್ಯವಿದ್ದಲ್ಲಿ ಎಲ್ಲಾ ಸಂಘಗಳಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಆಟೋ ಚಾಲಕರು ಇಲಾಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿದ್ದಾರೆ. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಆಟೋ ಚಾಲಕರಿಂದ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಆಟೋ ಚಾಲಕರು ತಮ್ಮ ಅಳಲನ್ನು ತೋರ್ಪಡಿಸಿಕೊಂಡರು.
ಪೊಲೀಸ್ ನಗರ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ್ ಹಾಗು ವಿವಿಧ ಠಾಣೆಗಳ ಠಾಣಾಧಿಕಾರಿಗಳು, ಸಂಚಾರಿ ಪೊಲೀಸರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
No comments:
Post a Comment