ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಲೋಕಾಯುಕ್ತ ಇಲಾಖೆ ವತಿಯಿಂದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು.
ಭದ್ರಾವತಿ: ಲಿಖಿತವಾಗಿ ದೂರು ನೀಡಿದಾಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯ್ಕ ಹೇಳಿದರು.
ಅವರು ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೂರುದಾರರಿಗೆ ಮಾಹಿತಿ ನೀಡಿದರು.
ವಿನಾಕಾರಣ ಆರೋಪ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆರೋಪಗಳಿಗಿಂತಲೂ ಲಿಖಿತ ದೂರು ಮುಖ್ಯ. ದೂರುದಾರರು ಅಗತ್ಯ ದಾಖಲೆಗಳೊಂದಿಗೆ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಬಗಹರಿಸಿಕೊಳ್ಳಲು ಮುಂದಾಗಬೇಕು. ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ವ್ಯಾಜ್ಯಗಳನ್ನು ಕುಂದುಕೊರತೆ ಸಭೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹೆಚ್ಚಿನ ದೂರುಗಳು ಬಾರದಂತೆ ನಗರಸಭೆ ಹಾಗು ತಾಲೂಕು ಆಡಳಿತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ಆರ್ ನಾಗರಾಜ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಒಟ್ಟು ೬ ಲಿಖಿತ ದೂರುಗಳು ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಲಾಯಿತು.
No comments:
Post a Comment