Wednesday, October 18, 2023

ಶತಮಾನೋತ್ಸವ ಆಚರಣೆ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ

ವಿಐಎಸ್‌ಎಲ್ ಶತಮಾನೋತ್ಸವ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ನಟ ದೊಡ್ಡಣ್ಣ

ಭದ್ರಾವತಿ ನ್ಯೂಟೌನ್ ಶಾರದಾ ಮಂದಿರದಲ್ಲಿ ನಡೆದ ವಿಐಎಸ್‌ಎಲ್ ಶತಮಾನೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿದರು.
    ಭದ್ರಾವತಿ: ಮೈಸೂರು ಮಹಾರಾಜರು ಆರಂಭಿಸಿದ ವಿಐಎಸ್‌ಎಲ್ ಕಾರ್ಖಾನೆ ಇದೀಗ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಮ್ಮನ್ನಾಳುವವರ ಕಣ್ಣು ತೆರೆಸಲು ಕಾರ್ಖಾನೆಯ ಅನ್ನತಿಂದು ಬೆಳೆದ ಸಮಾನ ಮನಸ್ಕರು ಒಗ್ಗೂಡಿ ಚಿಂತಿಸಿದ ಫಲವಾಗಿ ಶತಮಾನೋತ್ಸವ ಆಚರಣೆ ರೂಪುಗೊಂಡಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಶತಮಾನೋತ್ಸವ  ಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
    ಅವರು ಬುಧವಾರ ನ್ಯೂಟೌನ್ ಶಾರದಾ ಮಂದಿರದಲ್ಲಿ ಆಯೋಜಿಸಿದ್ದ ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿ,  ನ: ೩ ರಿಂದ ೫ ರವರೆಗೆ ಆಯೋಜಿಸಿರುವ ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ೧೨ ಸಮಿತಿಗಳನ್ನು ರಚಿಸಲಾಗಿದೆ. ಆಸಕ್ತರು ಸ್ವಇಚ್ಚೆಯಿಂದ ಆ ಸಮಿತಿಗಳಲ್ಲಿ ಸೇರಿಕೊಂಡು ನಮ್ಮ ಮನೆಯ ಹಬ್ಬವೆಂದುಕೊಂಡು ಸೇವೆ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿದರು.
    ಶತಮಾನೋತ್ಸವಕ್ಕೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಆಗಮಿಸಲು ಒಪ್ಪಿದ್ದಾರೆ. ರಾಷ್ಟ್ರಪತಿ ಮುರ್ಮು, ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಲು ಸತತ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಪ್ರಹ್ಲಾದ ಜೋಷಿ, ನಾರಾಯಣಸ್ವಾಮಿ, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರು, ವಿಧಾನಸಭೆ ಹಾಗು ವಿಧಾನಪರಿಷತ್ ಅಧ್ಯಕ್ಷರು, ಸದಸ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ ಎಂದರು.
    ಬೆಂಗಳೂರು ಜಯದೇವ ಆಸ್ಪತ್ರೆಯ ಡಾ. ಸಿ. ಮಂಜುನಾಥ್, ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಉದ್ಯಮಿಗಳಾದ ವಿಜಯಸಂಕೇಶ್ವರ್, ಪ್ರಭಾಕರ ಕೋರೆ ಮುಂತಾದವರನ್ನು ಗೌರವಿಸಲಾಗುವುದು. ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಕೋಡಿಮಠದ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ ಸಾನಿಧ್ಯವಹಿಸುವರು ಎಂದರು.
    ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾವಾದಿ, ಶತಮಾನೋತ್ಸವ ಆಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವಿ.ರೇವಣಸಿದ್ದಯ್ಯ ಮಾತನಾಡಿ, ಕಾರ್ಖಾನೆಯಲ್ಲಿ ಅನ್ನ ತಿಂದ ನಾವೆಲ್ಲರೂ ಕೂಡಿ ಕಾರ್ಖಾನೆಗೆ ಕಾಯಕಲ್ಪ ನೀಡಲು ಮುಂದಾಗಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿ ಬೇಕಾಗಿದೆ. ಶತಮಾನೋತ್ಸವದ ಹೆಸರಲ್ಲಿ ನಮ್ಮದು ಹೋರಾಟವಾಗಿದೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯದಂತೆ ಕಂಗೊಳಿಸುತ್ತಿದ್ದ ಕಾರ್ಖಾನೆಯು ಇಂದು ಸೊರಗಿದೆ. ವಿಐಎಸ್‌ಎಲ್ ಉಳಿಸಿ ಎಂಬ ಹೆಸರಲ್ಲಿ ಹೋರಾಟ ರೂಪಿಸಿದ್ದ ನಾವು ಶತಮಾನೋತ್ಸವ ಆಚರಿಸುವ ಹೆಸರಲ್ಲಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
    ವೇದಿಕೆಯಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಬಸಂತಕುಮಾರ್, ನಿವೃತ್ತ ಅಧಿಕಾರಿ ಎಸ್. ಅಡವೀಶಯ್ಯ, ಮಂಜುನಾಥ್, ಉದ್ಯೋಗಿಗಳ ಸಂಘದ ಕುಮಾರಸ್ವಾಮಿ ಇದ್ದರು.
    ಸಭೆಯಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಮೋಹನ್, ಅಮೃತ್, ತ್ರಿವೇಣಿ, ಗುತ್ತಿಗೆ ಕಾರ್ಮಿಕ ಸಂಘದ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕ ಸಂಘದ ನರಸಿಂಹಾಚಾರ್, ಶಂಕರ್, ನಂಜಪ್ಪ, ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಅಖಿಲ ಭಾರತ ವೀರಶೈವ ಮಹಾಸಭಾದ ಸಿದ್ದಲಿಂಗಯ್ಯ, ಕಲಾವಿದರ ಸಂಘದ ಮಂಜುನಾಥ್, ಚಿದಾನಂದ್, ಶಂಕರ್ ಬಾಬು, ಸುಂದರಬಾಬು, ಬಿಜೆಪಿ ಮುಖಂಡ ಟಿ.ವೆಂಕಟೇಶ್, ಹೇಮಾವತಿ ವಿಶ್ವನಾಥರಾವ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ. ರವಿ, ಎಂಪಿಎಂ ಚೆನ್ನಿಗಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment