ನೂತನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಕಾರ್ಯಕರ್ತರ ಕಾರ್ಯಕ್ರಮ. ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಶಾಸಕ ಬಿ.ಕೆ.ಸಂಗಮೇಶ್ವರ್ ಕರೆ ನೀಡಿದರು
ಅವರು ಮಂಗಳವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರು ತಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಕು. ಯಾರು ಸಹ ನಮಗೆ ಆಹ್ವಾನ ನೀಡಿಲ್ಲ ಎಂದುಕೊಳ್ಳಬಾರದು. ಭವನ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್ ಮಾತನಾಡಿ, ಬುದ್ಧಿವಂತರ ಜಿಲ್ಲೆಯಾಗಿದ್ದ ಶಿವಮೊಗ್ಗವನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕೀಯದಿಂದ ಸಂಘರ್ಷಗಳನ್ನು ಸೃಷ್ಟಿಸಿ ಜಿಲ್ಲೆಗೆ ಕಪ್ಪುಚುಕ್ಕೆ ತಂದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿದೆ. ಕಾಂಗ್ರೆಸ್ ಏಳಿಗೆಗಾಗಿ ದುಡಿದ ಕಾರ್ಯಕರ್ತರು ಸಣ್ಣಪುಟ್ಟ ಕಾರಣಗಳಿಗಾಗಿ ಬೇರೆಕಡೆ ಮುಖಮಾಡಬೇಡಿ. ಕಳೆದ ಬಾರಿ ಪಕ್ಷದ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೈತಪ್ಪಿತು. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಕೆಪಿಸಿಸಿ ಸದಸ್ಯೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಭಾನು ಮಾತನಾಡಿ, ಭದ್ರಾವತಿ ರಾಜಕಾರಣದ ಇತಿಹಾಸವನ್ನು ಗಮನಿಸಿದರೆ ಈ ಕ್ಷೇತ್ರ ಜಾತ್ಯಾತೀತ(ಸೆಕ್ಯೂಲರ್) ಕ್ಷೇತ್ರ ಎಂಬುದು ತಿಳಿಯುತ್ತದೆ. ಬಿಜೆಪಿ ಯಾವ ಕ್ಷೇತ್ರದಲ್ಲಾದರೂ ಅಧಿಕಾರ ಗಳಿಸಬಹುದು; ಆದರೆ ಭದ್ರಾವತಿಯಲ್ಲಿ ಅಧಿಕಾರ ಪಡೆಯುವುದು ಅಸಾಧ್ಯ ಎಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಾರ್ಯಕರ್ತರು ತಾವು ಕೂಡ ನಾಯಕರು ಎಂದು ಭಾವಿಸಿ ಶ್ರಮಿಸಬೇಕು. ಆದರೆ ಬ್ಯಾನರ್, ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಲಿಲ್ಲ ಎಂದು ಮುನಿಸಿಕೊಳ್ಳುವುದು ಸಣ್ಣತನ. ಹೆಸರು, ಫೋಟೋಗೆ ಸೀಮಿತವಾಗದೆ ಜವಾಬ್ದಾರಿಯಿಂದ ವರ್ತಿಸಬೇಕು. ಹಣದಂತೆಯೇ ಕಾರ್ಯಕರ್ತರ ಶ್ರಮವೂ ಮುಖ್ಯ ಎಂದರು.
ನಗರಸಭೆ ಅಧ್ಯಕ್ಷೆ ಶೃತಿವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ, ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ರೇಣುಕಮ್ಮ ಸಿ.ಎಂ.ಖಾದರ್ , ಬಾಲಕೃಷ್ಣ, ಮಣಿ, ಕಾಂತರಾಜ್, ಚನ್ನಪ್ಪ, ಬದರಿನಾರಾಯಣ್, ಸುಧಾಮಣಿ, ಟಿಪ್ಪು, ಪ್ರವೀಣ್, ಗೋಪಿ, ಅಫ್ತಾಬ್, ಶೇಕ್ ಮೆಹಬೂಬ್, ಅಂತೋಣಿ ವಿಲ್ಸನ್, ಫ್ರಾನ್ಸಿಸ್, ಶಿವಕುಮಾರ್, ಜೆಬಿಟಿ ಬಾಬು, ಅಮೀರ್ ಜಾನ್ ಆಂಜನೇಯ ಹಾಗು ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
No comments:
Post a Comment