ತಕ್ಷಣ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ : ನಗರಸಭೆ ಸದಸ್ಯರ ಆಗ್ರಹ
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-೪ರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಕಾಮಗಾರಿಗಳನ್ನು ತಕ್ಷಣ ಆರಂಭಿಸದೆ ನಿರ್ಲಕ್ಷ್ಯವಹಿಸಿರುವ ಹಾಗು ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭಾ ಸದಸ್ಯರು ಆಗ್ರಹಿಸಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-೪ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರು ನಗರಸಭೆ ಅಧಿಕಾರಿಗಳು ಹಾಗು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರು.
ಬಿ.ಕೆ ಮೋಹನ್ ಸೇರಿದಂತೆ ಹಲವು ಸದಸ್ಯರು ಕಾಮಗಾರಿಗಳ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಗುತ್ತಿದಾರರು ಗುತ್ತಿಗೆಪಡೆದು ಕಾಮಗಾರಿ ಆರಂಭಿಸದಿರುವುದು ಕಂಡುಬಂದಿತು. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ವಿಳಂಬವಾಗಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಅಲ್ಲದೆ ಕೆಲವು ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸಹ ಆಕ್ರೋಶ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.
ನಗರಸಭೆ ಸದಸ್ಯರ ಮಾತುಗಳನ್ನು ಆಲಿಸಿದ ಪೌರಾಯುಕ್ತ ಎಚ್.ಎಂ ಮನುಕುಮಾರ್, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ದಿಕ್ಕುತಪ್ಪಿಸದೆ ಸರಿಯಾಗಿ ಮಾಹಿತಿನೀಡಿ. ನಮ್ಮ ಬಳಿ ಒಂದು ರೀತಿ ಹೇಳಿಕೆ, ಜನಪ್ರತಿನಿಧಿಗಳ ಬಳಿ ಒಂದು ರೀತಿ ಹೇಳಿಕೆ ನೀಡಬಾರದು. ಉತ್ತಮ ಕೆಲಸಗಾರರನ್ನು ನೇಮಿಸಿಕೊಂಡು ಕೆಲಸ ಬೇಗ ಮುಗಿಸುವಂತೆ ತಾಕೀತು ಮಾಡಿದರು.
ನಗರೋತ್ಥಾನ-೪ರ ಪ್ರಗತಿ ಕುರಿತು ಮಾಹಿತಿ ನೀಡಿದ ಎಚ್.ಎಂ ಮನುಕುಮಾರ್, ೧೧,೮೭೫ ಮೀ. ಡಾಂಬರ್ ರಸ್ತೆ, ೧೦,೧೩೮ ಮೀ. ಕಾಂಕ್ರೀಟ್ ರಸ್ತೆ, ೨೯,೭೯೧ ಮೀ. ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು ೧೮.೫ ಕೋ.ರು. ವೆಚ್ಚ ಮಾಡಲಾಗುತ್ತಿದ್ದು, ಈ ಪೈಕಿ ಇದುವರೆಗೂ ೩,೫೪೬ ಮೀ. ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಕಾರ್ಯಪಾಲಕ ಅಭಿಯಂತರರಾದ ವಹೀದಾ ಬೇಗಂ, ೨೦೨೩-೨೪ರ ಅಮೃತ್ ನಗರೋತ್ಥಾನ ಯೋಜನೆಯಡಿ ವಿದ್ಯುತ್ ಕಾಮಗಾರಿಗಳಿಗೆ ೩.೩೮ ಕೋಟಿ ಅನುದಾನ ಮಂಜೂರಾಗಿದ್ದು, ೧.೬೦ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ಬಿ.ಕೆ.ಮೋಹನ್, ಬೇರೆ ತಾಲ್ಲೂಕುಗಳಲ್ಲಿ ಬೀದಿದೀಪಗಳ ಅಳವಡಿಕೆ ಉತ್ತಮವಾಗಿದೆ. ಆದರೆ ಭದ್ರಾವತಿಯಲ್ಲಿ ನಕ್ಷೆ ತಯಾರಿಕೆಯೇ ಅವೈಜ್ಞಾನಿಕವಾಗಿದೆ. ಝಡ್ ಮಾಧರಿಯಲ್ಲಿ ಬೀದಿದೀಪ ಅಳವಡಿಸುವ ಬದಲು ಒಂದೇ ಬದಿಯಲ್ಲಿ ಅಳವಡಿಸಿರುವುದು ನಗರದ ಅಂದವನ್ನು ಕೆಡಿಸಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ವಿ. ಕದಿರೇಶ್, ಬಿ.ಟಿ.ನಾಗರಾಜ್, ಲತಾ ಚಂದ್ರಶೇಖರ್, ಚನ್ನಪ್ಪ, ಮಣಿ ಎಎನ್‌ಎಸ್, ಜಾರ್ಜ್, ಆರ್. ಮೋಹನ್ ಕುಮಾರ್, ಉದಯ ಕುಮಾರ್, ಟಿಪ್ಪು ಸುಲ್ತಾನ್, ಬಷೀರ್ ಅಹಮದ್, ರಿಯಾಜ್ ಅಹಮದ್, ಕೋಟೇಶ್ವರರಾವ್, ಅನಿತಾ ಮಲ್ಲೇಶ್, ಪಲ್ಲವಿ ದಿಲೀಪ್, ಜಯಶೀಲ ಸುರೇಶ್, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ, ಮಂಜುಳ ಸುಬ್ಬಣ್ಣ, ಅನುಸುಧಾ ಮೋಹನ್ ಪಳನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment