ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆ
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಪಾಲ್ಗೊಂಡು ಸಮಸ್ಯೆಗಳನ್ನು ಆಲಿಸಿದರು.
ಭದ್ರಾವತಿ: ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯತನವಹಿಸಬಾರದು. ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಎಚ್ಚರಿಸಿದರು.
ಅವರು ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಆಲಿಸಿದರು.
ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಹಕ್ಕುಪತ್ರ ವಿತರಣೆ ಶಾಸಕರ ಕನಸಾಗಿದ್ದು, ವಿಳಂಬದಿಂದ ಹಿನ್ನಡೆಯಾಗಿದೆ. ಹಕ್ಕುಪತ್ರ ನೀಡಲು ಎರಡು ಸಭೆಗಳನ್ನು ನಡೆಸಿದರೂ ಇದುವರೆಗೂ ವಿತರಣೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ವಿಷಾದ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ. ಸೆಲ್ವಮಣಿ, ಭದ್ರಾವತಿ ತಾಲೂಕಿನ ಅಭಿವೃದ್ಧಿಗಳ ಪರಿಶೀಲನೆಗಾಗಿ ಪತ್ಯೇಕವಾಗಿ ಉಪವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣ್ ಅವರನ್ನು ನೇಮಿಸಲಾಗಿದೆ. ಪ್ರತಿದಿನ ಪರಿಶೀಲನೆ ನಡೆಸಿ ವಿವರ ನೀಡಲಿದ್ದಾರೆ. ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಹಕ್ಕುಪತ್ರಗಳ ಸಮಸ್ಯೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಮುಂದಿನ ತಿಂಗಳು ಜ.೩ ಅಥವಾ ೪ರಂದು ಪೂರ್ಣ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆ ಅಧ್ಯಕ್ಷತೆವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನಗರೋತ್ಥಾನ ಯೋಜನೆ ಕಾಮಗಾರಿಗಳು ಶೇ.೪೮ರಷ್ಟು ಪೂರ್ಣಗೊಳ್ಳಬೇಕಿತ್ತು. ಆದರೆ ಇದುವರೆಗೂ ಶೇ.೬ರಷ್ಟು ಮಾತ್ರ ಪೂರ್ಣಗೊಂಡಿವೆ. ಯುಜಿಡಿ ಗ್ರಾಮಗಾರಿ ಶೇ.೪೦ರಷ್ಟು ಬಾಕಿ ಉಳಿದಿದ್ದು, ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ವಿಳಂಬವಾಗಿವೆ. ೨೨ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ(ಪಿಡಿಓ)ಗಳ ಖಾತೆಗಳಲ್ಲಿ ಎಷ್ಟು ಹಣವಿದೆ, ಯಾವ ಕಾಮಗಾರಿಗಳು ಪೂರ್ಣಗೊಂಡಿವೆ, ಎಷ್ಟು ಪ್ರಗತಿಯಲ್ಲಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.
ಈ ನಡುವೆ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದವು. ಅಭಿವೃದ್ಧಿ ಕಾರ್ಯಗಳ ಕುರಿತು ಯಾವಾಗ ಕೇಳಿದರೂ ಕೋರ್ಟ್‌ಗೆ ತೆರಳಿದ್ದೇವೆ, ಡಿಸಿ ಕಚೇರಿಗೆ ತೆರಳಿದ್ದೇವೆ, ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದೇವೆ ಅನ್ನುತ್ತಾರೆ. ಉಳಿದಂತೆ ೪ ದಿನ ರಜೆ, ೨ ದಿನ ವಿಶೇಷ ರಜೆಗಳು ಕಳೆದರೆ ಇವರು ಜನರ ಕೆಲಸಮಾಡುವುದು ಯಾವಾಗ ಎಂದು ಪ್ರಶ್ನಿಸಿದರು.
ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಸೆಲ್ವಮಣಿ, ಎಲ್ಲಾ ಇಲಾಖೆ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಲೋಕಂಡೆ ಸ್ನೇಹಲ್ ಸುಧಾಕರ್, ಉಪವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣ, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಸ್ ಚೆನ್ನಪ್ಪನವರ್, ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸುದೀಪ್ ಕುಮಾರ್, ಸದಸ್ಯರಾದ
ವಿ. ಕದಿರೇಶ್, ಬಿ.ಟಿ ನಾಗರಾಜ್, ಲತಾಚಂದ್ರಶೇಖರ್, ಜಾರ್ಜ್, ಕಾಂತರಾಜ್, ಶ್ರೇಯಸ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
No comments:
Post a Comment