ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೋವಿಡ್-೧೯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ: ರಾಜ್ಯದಲ್ಲೂ ಕೋವಿಡ್-೧೯ ಉಪತಳಿ ಜೆ.ಎನ್.೧ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಮನವಿ ಮಾಡಿದರು.
ಅವರು ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-೧೯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಜನರ ಸುರಕ್ಷತೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಜನರು ಜವಾಬ್ದಾರಿಯಿಂದ ತಮ್ಮ ಸುರಕ್ಷತೆಗೆ ಗಮನವಹಿಸಬೇಕು. ೬೦ವರ್ಷ ಮೇಲ್ಪಟ್ಟವರು ಮತ್ತು ಗರ್ಭೀಣಿ ಸ್ತ್ರೀಯರು ಗಾಳಿ ಬೆಳಕು ಉತ್ತಮವಾಗಿರುವಂತಹ ಸುರಕ್ಷತೆಯ ಸ್ಥಳದಲ್ಲಿರಬೇಕು. ಅನಗತ್ಯ ಓಡಾಟ ಸರಿಯಲ್ಲ ಎಂದರು.
ಬೆಂಕಿ ಬಿದ್ದಾಗ ಬಾವಿ ತೋಡುವುದು ಬೇಡ. ಮೊದಲೇ ಸುರಕ್ಷತೆ ಬಗ್ಗೆ ವೈದ್ಯಾಧಿಕಾರಿಗಳು ಗಮನಹರಿಸಿ. ಇಡೀ ರಾಜ್ಯದಲ್ಲಿ ವೈದ್ಯರ ಕೊರತೆಯಿದೆ. ಆದ್ದರಿಂದ ಸಮಸ್ಯೆ ಹೇಳದೆ ವ್ಯವಸ್ಥೆಗೆ ಮುಂದಾಗಿ. ನಾನು ಸಹ ಜಿಲ್ಲಾ ಆರೋಗ್ಯಾಧಿಕಾರಿ ಹಾಗು ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತೇನೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಎಲ್ಲರಿಗೂ ಪರೀಕ್ಷೆ ಕಡ್ಡಾಯವಲ್ಲ. ಆದರೆ ಶೀತ, ನೆಗಡಿ ಇರುವವರು ಮತ್ತು ಹೊರದೇಶಗಳಿಂದ ಬಂದವರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾವುದು. ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಮಾತನಾಡಿ, ಕ್ಷೇತ್ರ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಆರೋಗ್ಯ ಸೇವೆ ಸಮರ್ಪಕವಾಗಿ ಒದಗಿಸಲು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದ್ದು, ಪ್ರಸ್ತುತ ಸ್ಟಾಪ್ ನರ್ಸ್‌ಗಳು, ಅನಸ್ತೇಷಿಯ ತಜ್ಞರು, ಮೂವರು ಫಿಜಿಷನ್ ವೈದ್ಯರ ಅಗತ್ಯವಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಉಳಿದಂತೆ ಆಕ್ಸಿಜನ್ ಕೊರತೆಯಿಲ್ಲ. ೧೦೦ಹಾಸಿಗೆಯ ಆಸ್ಪತ್ರೆಯಲ್ಲಿ ೯೮ ಹಾಸಿಗೆಗಳಿಗೆ ಆಮ್ಲಜನಕದ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ತಹಸೀಲ್ದಾರ್ ಕೆ.ಆರ್ ನಾಗರಾಜು, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಉಪತಹಸೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ನಗರಸಭೆ ಸದಸ್ಯರಾದ ಚನ್ನಪ್ಪ, ಲತಾಚಂದ್ರಶೇಖರ್, ಟಿಪ್ಪು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment