Wednesday, December 20, 2023

ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರ ಸಾಧನೆ

೩ ತಿಂಗಳ ಅಭ್ಯಾಸ, ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ

ಭದ್ರಾವತಿ ಸಿ.ಎನ್ ರಸ್ತೆ ನಿವಾಸಿ ವೈ. ನಟರಾಜ್ ಕುಟುಂಬ ಸದಸ್ಯರು ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಬಹುಮಾನ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರು ಭಾಗವಹಿಸಿ ಬಹುಮಾನ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.
ಈ ಕುಟುಂಬದ ಸದಸ್ಯರು ಕಳೆದ ೩ ತಿಂಗಳಿನಿಂದ ಪವರ್ ಲಿಪ್ಟಿಂಗ್ ಅಭ್ಯಾಸದಲ್ಲಿ ತೊಡಗಿದ್ದು, ಕಡಿಮೆ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪವರ್ ಲಿಪ್ಟಿಂಗ್ ಕ್ಷೇತ್ರದಲ್ಲಿ ಸಾಧನೆಯ ಪಯಣಕ್ಕೆ ಮುನ್ನುಡಿ ಬರೆದಿದ್ದಾರೆ.  
    ನಗರದ ಸಿ.ಎನ್ ರಸ್ತೆ ನಿವಾಸಿ ವೈ. ನಟರಾಜ್ ಕುಟುಂಬ ಸದಸ್ಯರು ಇಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಕಾರಂತ್ ಜಿಮ್ ವ್ಯಾಯಾಮ ಶಾಲೆಯಲ್ಲಿ ಕಳೆದ ೩ ತಿಂಗಳ ಹಿಂದೆ ತರಬೇತಿ ಆರಂಭಿಸಿದ ನಟರಾಜ್ ಕುಟುಂಬ ಸದಸ್ಯರು ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
    ೧೨೦ ಕೆ.ಜಿ ತೂಕದ ವಿಭಾಗದಲ್ಲಿ ವೈ. ನಟರಾಜ್ ತೃತೀಯ ಸ್ಥಾನ, ಇವರ ಪತ್ನಿ ಡಿ. ಸೌಮ್ಯ ೮೪ ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಹಾಗು ಈ ದಂಪತಿಗಳ ಕಿರಿಯ ಪುತ್ರ ಎನ್. ಮನ್ವಿತ್ ೫೩ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರ ಹಿರಿಯ ಪುತ್ರ ಎನ್. ಪೂಜಿತ   ಸಹ ಕಳೆದ ಮೂರು ತಿಂಗಳ ಹಿಂದೆ ಅಭ್ಯಾಸ ಆರಂಭಿಸಿದ್ದು, ಒಂದು ಜಿಲ್ಲಾ ಮಟ್ಟದ ಸ್ಪರ್ಧೆ ಹಾಗು ಒಂದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾನೆ.
    ಒಟ್ಟಾರೆಯಾಗಿ ಕಳೆದ ೩ ತಿಂಗಳ ಹಿಂದೆ ಪವರ್ ಲಿಪ್ಟಿಂಗ್ ತರಬೇತಿ ಪಡೆದ ನಟರಾಜ್ ಕುಟುಂಬ ಸದಸ್ಯರು ಕೆಲವೇ ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.  

No comments:

Post a Comment