ಭದ್ರಾವತಿ: ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವದ ಪ್ರಯುಕ್ತ ಡಿ.೩ರಂದು ಸಂಜೆ ೬ ಗಂಟೆಗೆ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜನಪದ ಜಾತ್ರೆ ಹಮ್ಮಿಕೊಳ್ಳಲಾಗಿದೆ.
ಡಾ. ಬಿ.ಆರ್ ಅಂಬೇಡ್ಕರ ಜಾನಪದ ಕಲಾ ಸಂಘದ ಕಲಾವಿದರಿಂದ ಜನಪದ ಹಾಡುಗಾರಿಕೆ, ತಾಲೂಕಿನ ಅತ್ತಿಗುಂದ ಗ್ರಾಮದ ಚಂದ್ರಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ಎಮ್ಮೆಹಟ್ಟಿ ಗ್ರಾಮದ ಗಜಾನನ ಡೊಳ್ಳು ಯುವಕರ ಸಂಘದಿಂದ ಡೊಳ್ಳು ಕುಣಿತ, ಡಿ.ಬಿ ಹಳ್ಳಿ ಶ್ರೀ ಮುಗ್ದ ಸಂಗಮೇಶ್ವರ ವೀರಗಾಸೆ ಕಲಾತಂಡದಿಂದ ಪುರುಷರ ವೀರಗಾಸೆ, ಶಿವಮೊಗ್ಗ ಬೆಳಲಕಟ್ಟೆ ಸರಸ್ವತಿ ಕಲಾ ತಂಡದಿಂದ ಲಂಬಾಣಿ ನೃತ್ಯ, ಸಾಗರ ಬಂದಗದ್ದೆ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಕೋಲಾಟ ಕಲಾ ತಂಡದಿಂದ ಕೋಲಾಟ, ತರೀಕೆರೆ ಲಿಂಗದಹಳ್ಳಿ ಶ್ರೀ ಗುರುವೀರ ಮಹಿಳಾ ವೀರಗಾಸೆ ಕಲಾ ತಂಡದಿಂದ ಮಹಿಳಾ ವೀರಗಾಸೆ, ಉತ್ತರ ಕನ್ನಡ ಜಿಲ್ಲೆಯ ಅಂಚೊ ಮೂಳ ಸಿದ್ಧಿ ಸಾಂಸ್ಕೃತಿಕ ಕಲಾ ತಂಡದಿಂದ ಡಮಾಮಿ ನೃತ್ಯ, ಮಂಡ್ಯ ಅರೇಚಾಕನಹಳ್ಳಿ ಸುಂದರೇಶ್ ಮತ್ತು ತಂಡದವರಿಂದ ಪೂಜಾ ಕುಣಿತ ಹಾಗು ಮೈಸೂರು ಪಿರಿಯಾಪಟ್ಟಣ ಕುಮಾರನಾಯ್ಕ ಮತ್ತು ತಂಡದವರಿಂದ ಕಂಸಾಳೆ ನಡೆಯಲಿದೆ.
ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ೨೦೧೩ರಲ್ಲಿ ಜನ್ನಾಪುರದಲ್ಲಿ ತಮಟೆ ಮೇಳದ ತಂಡವಾಗಿ ಹುಟ್ಟಿ ಕೊಂಡಿದ್ದು, ತದನಂತರ ಜನಪದ ಕಲೆಗಳ ಪ್ರದರ್ಶನ, ಜನಪದ ಗೀತೆಗಳ ಹಾಡುಗಾರಿಕೆ ಹಾಗು ಬೀದಿನಾಟಕ ಪ್ರದರ್ಶನಗಳನ್ನು ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ.
ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಬಿರಗಳು ಹಾಗು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸಲಾಗಿದೆ. ಸಂಘಕ್ಕೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಸಂಘದ ಕಾರ್ಯ ಚಟುವಟಿಕೆ ಮತ್ತಷ್ಟು ವಿಸ್ತಾರಗೊಳ್ಳಲಿ, ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂಬ ಆಶಯದೊಂದಿಗೆ ದಶಮಾನೋತ್ಸವ ಆಚರಿಸುತ್ತಿದ್ದು, ಕಲಾವಿದರು, ಕಲಾಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
No comments:
Post a Comment