Thursday, January 25, 2024

ಯಾವುದೇ ಸರ್ಕಾರವಿದ್ದರೂ ಸೈದ್ದಾಂತಿಕವಾಗಿ ನಾನು ನೌಕರರ ಪರವಾಗಿರುತ್ತೇನೆ : ಪೂರ್ಣ ಪ್ರಮಾಣದ ರಾಜಕಾರಣಿ ಅಲ್ಲ, ಹೋರಾಟಗಾರ

ನೈರುತ್ಯ ಪದವೀಧರರ ಕ್ಷೇತ್ರ  ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್

\

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿದರು.
    ಭದ್ರಾವತಿ: ಕಳೆದ 40 ವರ್ಷಗಳಿಂದ ನನ್ನನ್ನು ನಾನೇ ನೌಕರರ ಹಾಗೂ ಕಾರ್ಮಿಕರ ವರ್ಗಕ್ಕೆ ಮೀಸಲಿಟ್ಟುಕೊಂಡಿದ್ದು, ಯಾವುದೇ ಸರ್ಕಾರವಿದ್ದರೂ ಸೈದ್ದಾಂತಿಕವಾಗಿ ನಾನು ನೌಕರರ ಪರವಾಗಿರುತ್ತೇನೆ. ಪೂರ್ಣ ಪ್ರಮಾಣದ ರಾಜಕಾರಣಿ ಅಲ್ಲ, ಹೋರಾಟಗಾರ  ಎಂದು ನೈರುತ್ಯ ಪದವೀಧರರ ಕ್ಷೇತ್ರ  ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
      ಹಳೇನಗರದ ಪತ್ರಿಕಾಭವನದಲ್ಲಿ  ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ದಿನಗಳಿಂದಲೂ ಕಾರ್ಮಿಕ, ಶ್ರಮಿಕ, ನೌಕರರ ಮತ್ತು ಜನಸಾಮಾನ್ಯರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಸದಾ ಕಾಲ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಹಿಂದೆ ಶಾಸಕನಾಗಿ ಆಯ್ಕೆಯಾದಾಗ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದನದ ಒಳಗೂ,  ಹೊರಗೂ ಶ್ರಮಿಕ ವರ್ಗದ ಪರವಾಗಿ ಧ್ವನಿಎತ್ತಿದ್ದೇನೆ ಎಂದರು.
       ನೌಕರರ, ಶಿಕ್ಷಕರ , ಅತಿಥಿ ಉಪನ್ಯಾಸಕರ, ಅತಿಥಿ ಶಿಕ್ಷಕರ ಹಾಗೂ ಬಡ್ತಿಯಿಂದ ಶಿಕ್ಷಕರಿಗೆ ಉಂಟಾದ ಸಮಸ್ಯೆ, ಸಿ ಅಂಡ್ ಆರ್ ಇತ್ಯಾದಿ ವಿಷಯಗಳು, ಆರೋಗ್ಯ ಇಲಾಖೆ ಎನ್.ಎಚ್.ಎಂ ನೌಕರರ, ಅರಣ್ಯ ಇಲಾಖೆ, ಪೌರ ಕಾರ್ಮಿಕರ ಸಮಸ್ಯೆ, ಕಾರ್ಖಾನೆಗಳ ಕಾರ್ಮಿಕರ ಬಗ್ಗೆ ಮತ್ತು ಪೊಲೀಸ್ ಇಲಾಖೆಯಲ್ಲಿ ಔರಾದ್ ಕರ್ ವರದಿಯಿಂದ ಉಂಟಾದ ವೇತನ ಹಾಗೂ ಭತ್ಯೆಯ ತಾರತಮ್ಯ, ಸೇವಾ ಜ್ಯೇಷ್ಠತೆ, ಕಡೆಗಣನೆಯ ವಿರುಧ್ದ ಕರ್ನಾಟಕ ರಾಜ್ಯದ ಪೊಲೀಸರ ಪರವಾಗಿ ಧ್ವನಿ ಎತ್ತಿ ಅವರ ಸಮಸ್ಯೆಯ ಬಗ್ಗೆ ಚರ್ಚಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೋರಾಟ ಮಾಡಿದ್ದೇನೆ ಎಂದು ವಿವರಿಸಿದರು.
      ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಒಟ್ಟು 30 ವಿಧಾನಸಭಾ ಹಾಗೂ 5 ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ಪದವೀಧರ ಕ್ಷೇತ್ರದ ಮತದಾರರಾಗಿ ಹೆಸರನ್ನು ನೊಂದಾಯಿಸಿಕೊAಡಿರುವ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.      
      ಪದವೀಧರ ನೌಕರರು, ಸ್ವಯಂ ಉದ್ಯೋಗಿ ಮತ್ತು ನಿರುದ್ಯೋಗಿ ಪದವೀಧರರ ಪರವಾಗಿ ಸದನದಲ್ಲಿ ಧ್ವನಿಯಾಗಲು ಮತ್ತೊಮ್ಮೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಪದವೀಧರ ಮತದಾರರು ತಪ್ಪದೆ ಮತದಾನ ಮಾಡುವ ಮೂಲಕ ಅವಕಾಶ ನೀಡಿ, ಹರಸಬೇಕೆಂದು ಮನವಿ ಮಾಡಿದರು.
      ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ವೈ.ಎಚ್ ನಾಗರಾಜ್, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್,  ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್,  ಜಿ.ಪಂ. ಸದಸ್ಯ ಎಸ್. ಮಣಿಶೇಖರ್ ಉಪಸ್ಥಿತರಿದ್ದರು.

No comments:

Post a Comment