ತಾಲೂಕು ಆಡಳಿತ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಭದ್ರಾವತಿ; ನಮ್ಮ ಸಂವಿಧಾನ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದು, ಮತ ಹಾಕುವ ಮತದಾರ ಯೋಚಿಸಿ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀಕಾಂತ್ ಹೇಳಿದರು.
ತಾಲೂಕು ಆಡಳಿತ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಎನ್ನುವುದು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಮಾತ್ರವಲ್ಲದೆ ಅದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ನಾವು ಹಾಕುವ ಒಂದು ಮತದಿಂದ ಗೆಲ್ಲುವ ಚುನಾಯಿತ ಪ್ರತಿನಿಧಿಗಳು, ಮಾಡುವ ಕಾನೂನುಗಳಿಂದ ಸಮಾಜದ ಮೇಲೆ ಹಾಗು ನಮ್ಮ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಬೀರುತ್ತವೆ.
ಹಿಂದೆ ನ್ಯಾಯವಾದಿಗಳು ಹೆಚ್ಚಾಗಿ ರಾಜಕೀಯ ರಂಗ ಪ್ರವೇಶಿಸುತ್ತಿದ್ದರು. ಕಾನೂನುಗಳ ಅರಿವು ತಿಳುವಳಿಕೆ ಕೂಡ ಹೊಂದಿರುತ್ತಿದ್ದರು, ಇತ್ತೀಚೆಗೆ ರಾಜಕೀಯ ಪ್ರವೇಶ ಕಡಿಮೆಯಾಗಿದೆ. ಇಂದಿಗೂ ಬ್ರಿಟಿಷರು ಮಾಡಿರುವ ಕಾನೂನುಗಳನ್ನೇ ನಾವು ಒಪ್ಪಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅವುಗಳನ್ನು ತಿದ್ದುಪಡಿ ಮಾಡುವುದೂ ಸಹ ಕಷ್ಟವಾಗಿದೆ. ತಿದ್ದುಪಡಿ ಮಾಡುವ ಅವಕಾಶ ಜನಪ್ರತಿನಿಧಿಗಳಿಗಿದ್ದು, ತಿಳುವಳಿಕೆಯುಳ್ಳ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದರು.
ತಹಸೀಲ್ದಾರ್ ಕೆ.ಆರ್ ನಾಗರಾಜ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 2,12,770 ಮತದಾರರಿದ್ದಾರೆ. ಈ ಪೈಕಿ 3,372 ಯುವ ಮತದಾರರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ಪ್ರಜಾಪ್ರಭುತ್ವ ಕಟ್ಟಲು ಮತದಾರರ ಪಾತ್ರ ಮಹತ್ವದ್ದಾಗಿದ್ದು, ಮತದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕೆAದರು.
ನ್ಯಾಯಾಧೀಶರಾದ ಸಿ.ಎನ್ ಲೋಕೇಶ್ ಪ್ರತಿಜ್ಞಾ ವಿಧಿ ಭೋಧಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ್, ಪಿ. ರತ್ನಮ್ಮ, ವಕೀಲರ ಸಂಘದ ಅಧ್ಯಕ್ಷ ಉಮೇಶ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ., ಗ್ರೇಡ್-2 ತಹಸೀಲ್ದಾರ್ ರಂಗಮ್ಮ, ಮಂಜಾನಾಯ್ಕ, ರಾಧಾಕೃಷ್ಣ ಭಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment