Monday, January 8, 2024

ವಿದ್ಯಾವಂತ ನಿರುದ್ಯೋಗಿ ಯುವಕರ ಆರ್ಥಿಕ ಭವಿಷ್ಯ ಭದ್ರವಾಗಿಸಲು ಯುವನಿಧಿ ಯೋಜನೆ ಸಹಕಾರಿ : ಶಾಸಕ ಬಿ ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
    ಭದ್ರಾವತಿ: ಯುವಪೀಳಿಗೆಗೆ ಆದರ್ಶರಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನ ಜ.೧೨ರಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ೫ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
      ಅವರು ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ವಿದ್ಯಾವಂತ, ನಿರುದ್ಯೋಗಿ ಯುವಕರ ಆರ್ಥಿಕ ಭವಿಷ್ಯ ಭದ್ರವಾಗಿಸಲು ಯುವನಿಧಿ ಯೋಜನೆ ಸಹಕಾರಿಯಾಗಿದೆ. ೨೦೨೩ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮೊ ಮುಗಿಸಿರುವ ನಿರುದ್ಯೋಗಿ ಯುವಕರು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ಜ.೧೨ರಂದು ಆಯೋಜಿಸಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಕ್ಷೇತ್ರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
      ಯುವ ನಿಧಿ ಯೋಜನೆಯ ತಾಲೂಕು ಉಸ್ತುವಾರಿ ರಮೇಶ್ ಶಂಕರಘಟ್ಟ ಮಾತನಾಡಿ, ಜ.೧೨ರಂದು ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಬೃಹತ್ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿ ನಿರುದ್ಯೋಗಿ ಯುವಕರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಮೂಲಕ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಸಂಪುಟ ದರ್ಜೆಯ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರಾದ ಬಿ.ಕೆ ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಸೇರಿದಂತೆ ಕಾಂಗ್ರೇಸ್ ಪಕ್ಷದ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.  
      ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಬಲ್ಕೀಷ್ ಬಾನು, , ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಹೆಚ್ ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯಾ ರಾಜು, ಯುವ ಘಟಕದ ನಗರ ಅಧ್ಯಕ್ಷ ಅಫ್ತಾಪ್ ಅಹಮದ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಮುಖಂಡರುಗಳಾದ ಸಿ.ಎಂ ಖಾದರ್, ಎಸ್. ಮಣಿಶೇಖರ್, ಅಂತೋಣಿ ವಿಲ್ಸನ್, ಸಿ. ಜಯ್ಯಪ್ಪ, ಬಿ. ಗಂಗಾಧರ್, ಮುಸ್ವೀರ್, ಅಭಿಲಾಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

1 comment:

  1. Bhadravathi people has to elect different person and give opportunity for others else , this city will be in the same state even after decades.

    ReplyDelete