Monday, September 30, 2024

ಅಥ್ಲೆಟಿಕ್ ಅಂಧ ಕ್ರೀಡಾಪಟುಗಳಿಗೆ ತರಬೇತಿ : ಸೌಮ್ಯ ಸಾವಂತ್‌ಗೆ ಸನ್ಮಾನ

ಭದ್ರಾವತಿ ಹೊಸಮನೆ ನಿವಾಸಿ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಒಲಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಇವರ ಪರಿಶ್ರಮ ಸಹ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ನಗರದ ಹೊಸಮನೆ ನಿವಾಸಿ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಒಲಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಇವರ ಪರಿಶ್ರಮ ಸಹ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಸೌಮ್ಯ ಸಾವಂತ್ ಈ ಹಿಂದೆ ಅಥ್ಲೆಟಿಕ್ ಕ್ರೀಡಾಪಟು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಸಾಧನೆಗಳನ್ನು ಮಾಡುವ ಮೂಲಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದಿದ್ದರು. ನಂತರ ಅಂತರಾಷ್ಟ್ರೀಯ ತರಬೇತಿದಾರರಾಗಿ ಅಂಧ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಅವರುಗಳು ಸಹ ರಾಜ್ಯ ಮತ್ತು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಂಗಾರ ಮತ್ತು ಬೆಳ್ಳಿ ಪದಕಗಳನ್ನು ಗಳಿಸುವಲ್ಲಿ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸೆ.೨೯ರಂದು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಒಲಿಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಕ್ರೀಡಾಪಟು ಹಾಗು ತರಬೇತಿದಾರರೊಂದಿಗೆ ಸಂತೋಷ ಕೂಟ ಸಂಭ್ರಮ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  ಮುಕೇಶ್ ಅಂಬಾನಿ, ನೀತು ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬ ವರ್ಗದವರು ಹಾಗು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 
    ಸೌಮ್ಯ ಸಾವಂತ್ ಹಿರಿಯ ಪತ್ರಕರ್ತ ಯು.ಆರ್ ಸಾವಂತ್-ಅನ್ನಪೂರ್ಣ ಸಾವಂತ್ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಸೌಮ್ಯ ಸಾವಂತ್ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇವರ ಪತಿ ಬಿ.ರಾಹುಲ್ ಸಹ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದು, ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 

ಪಡಿತರ ವಿತರಕರ ಸಂಘ : ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್

ಎಸ್.ಆರ್ ನಾಗರಾಜ್ 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನಗರ ಘಟಕದ ಹಂಗಾಮಿ ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್ ಅವರನ್ನು ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
    ಹಂಗಾಮಿ ಅಧ್ಯಕ್ಷರ ಆಯ್ಕೆ ಸಂಬಂಧ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಎಸ್.ಆರ್ ನಾಗರಾಜ್ ಆಯ್ಕೆಯಾಗಿದ್ದಾರೆ. ಸುಮಾರು ೨೫ ಸದಸ್ಯರು ಅಧ್ಯಕ್ಷರ ಆಯ್ಕೆ ಅನುಮೋದಿಸಿದ್ದು, ಈ ನಡುವೆ ಸಿದ್ದಲಿಂಗಯ್ಯ ಸೇರಿದಂತೆ ಪದಾಧಿಕಾರಿಗಳು ಹಂಗಾಮಿ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. 

ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಎಸ್. ಲೋಹಿತ್

ಎಸ್. ಲೋಹಿತ್ 
    ಭದ್ರಾವತಿ: ಶಿವಮೊಗ್ಗ ಹರಿಗೆ ನಿವಾಸಿ, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ಕಿರಿಯ ಆಟಗಾರ ಎಸ್. ಲೋಹಿತ್  ಬಿಸಿಸಿಐ ೧೯ ವರ್ಷದೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. 
    ಒರಿಸ್ಸಾ ಕಟಕ್ ನಗರದಲ್ಲಿ ಅ.೪ ರಿಂದ ೧೨ರವರೆಗೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯದಿಂದ ಒಟ್ಟು ೧೫ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎಸ್. ಲೋಹಿತ್ ಸಹ ಒಬ್ಬರಾಗಿದ್ದಾರೆ. ಕೆ.ಬಿ ಪವನ್ ಮುಖ್ಯ ತರಬೇತಿದಾರರಾಗಿದ್ದು, ಎಸ್.ಎಲ್ ಅಕ್ಷಯ್ ಸಹಾಯಕ ತರಬೇತಿದಾರರಾಗಿದ್ದಾರೆ. 
    ಎಸ್. ಲೋಹಿತ್ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಮೂಲಕ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಸ್ಪೋಟಕ ಬಳಸಿ ಅಕ್ರಮ ಕಲ್ಲು ಸಾಗಾಣಿಕೆ : ನಾಲ್ವರಿಗೆ ೧ ವರ್ಷ ಸೆರೆವಾಸ, ೨೦ ಸಾವಿರ ರು. ದಂಡ

    ಭದ್ರಾವತಿ: ಯಾವುದೇ ಪರವಾನಗಿ ಪಡೆಯದೆ ಸಿಡಿಮದ್ದು ಬಳಸಿ ಅಕ್ರಮವಾಗಿ ಕಲ್ಲು ಬಂಡೆ ಸ್ಪೋಟಿಸಿ ಕಲ್ಲು ಸಾಗಾಣಿಕೆ  ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೪ ಮಂದಿಗೆ ೧ ವರ್ಷಗಳ ಕಾಲ ಸಾದಾ ಸೆರೆವಾಸ ಹಾಗು ತಲಾ ೨೦,೦೦೦ ರು. ದಂಡ ವಿಧಿಸಿ ತೀರ್ಪು ನೀಡಿದೆ. 
    ಗುರುಮೂರ್ತಿ, ಧರ್ಮಪ್ಪ, ಸತೀಶ ಮತ್ತು ಹರಿಕೃಷ್ಣ ಶಿಕ್ಷೆಗೊಳಗಾದವರು. ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 
ಪ್ರಕರಣದ ವಿವರ:
    ಈ ನಾಲ್ವರು ಅಪರಾಧಿಗಳು ತಾಲೂಕಿನ ಅತ್ತಿಗುಂದ ಗ್ರಾಮದ ಸರ್ವೆ ನಂ.೭೬ರಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೆ ಕಲ್ಲುಬಂಡೆಗಳನ್ನು ಸ್ಪೋಟಿಸಿ ಕಲ್ಲು ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇರೆಗೆ ೧೯-೦೮-೨೦೧೬ರಂದು ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಅಲ್ಲದೆ ಸ್ಪೋಟಕಕ್ಕೆ ಬಳಸಿದ ೫ ಕೇಪುಗಳು, ೨ ತೋಟಗಳು, ಒಂದು ಮೀಟರ್ ಉದ್ದದ ಬತ್ತಿ, ಒಂದು ಹಿಡಿಯಷ್ಟು ಉಪ್ಪು ಹಾಗು ೩ ಸುತ್ತಿಗೆಗಳು, ಮೂರು ಹಾರೆಕೋಲುಗಳು ಹಾಗು ೧ ಟ್ರ್ಯಾಕ್ಟರ್ ಮತ್ತು ೧ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 
    ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಬಿ. ಅಶೋಕ್ ಕುಮಾರ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೪ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಸುಮಾರು ೮ ವರ್ಷಗಳ ವಿಚಾರಣೆ ನಂತರ ಇದೀಗ ತೀರ್ಪು ಹೊರ ಹೊರಬಿದ್ದಿದೆ. 

Sunday, September 29, 2024

ಕೇರಳ ಸಮಾಜದವರು ನೆಲದ ಸಂಸ್ಕೃತಿ ಪಸರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡಿದ್ದಾರೆ

೧೨ನೇ ವರ್ಷದ ಓಣಂ ಆಚರಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ


ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಕೇರಳ ಸಮಾಜದವರು ಓಣಂ ಆಚರಣೆಯ ಮೂಲಕ ತಮ್ಮ ನೆಲದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವ ಮೂಲಕ ಜಾತಿ, ಧರ್ಮ, ಭಾಷೆ ಮೀರಿ ಸೌಹಾರ್ದತೆ ಕಾಯ್ದುಕೊಂಡು ಬಂದಿರುವುದು ಅವರ ವಿಶೇಷತೆಯಾಗಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಭಾನುವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದರು. 
    ಕೇರಳ ಸಮಾಜದವರಲ್ಲಿ ಒಂದು ವಿಶೇಷವಾದ ಶಕ್ತಿ ಇದೆ. ತಮ್ಮಲ್ಲಿನ ಪ್ರತಿಭೆ ಮೂಲಕ ಪ್ರಪಂಚದ ಎಲ್ಲೆಡೆ ಎಲ್ಲರೊಂದಿಗೂ ಗುರುತಿಸಿಕೊಂಡಿದ್ದಾರೆ. ತಾವು ನೆಲೆಸಿರುವ ನೆಲದ ಭಾಷೆ, ಸಂಸ್ಕೃತಿ ಜೊತೆಗೆ ತಮ್ಮ ಮೂಲ ನೆಲೆಯ ಸಂಸ್ಕೃತಿಯನ್ನೂ ಸಹ ಪಸರಿಸುತ್ತಿದ್ದಾರೆ. ಕೇರಳ ಸಮಾಜದವರ ಏಳಿಗೆಗೆ ಸದಾ ಬದ್ಧನಾಗಿದ್ದೇನೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕೇರಳ ಸಮಾಜದವರು ಓಣಂ ಆಚರಣೆ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಮಾದರಿಯಾಗಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಜಗಜ್ಯೋತಿ ಬಸವೇಶ್ವರರ ಆಶಯ ಕೂಡ ಇದೆ ಆಗಿದೆ. ಕೇರಳ ಸಮಾಜದ ಸಂಘಟನೆಗೆ ಅಗತ್ಯವಿರುವ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕೇರಳ ಸಮಾಜಂ ಅಧ್ಯಕ್ಷ ಸುಗುಣ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ಘಟಕದ ಅಧ್ಯಕ್ಷ ಎಸ್. ಪ್ರಸನ್ನ ಕುಮಾರ್, ಉದ್ಯಮಿಗಳಾದ ಕೆ. ಇಬ್ರಾಹಿಂ, ಬಿ.ಕೆ ಜಗನ್ನಾಥ, ಬಿ.ಕೆ ಶಿವಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಸದಸ್ಯ ಹನುಮಂತಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಓಣಂ ಆಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ರಂಗೋಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ಪ್ರಶಾಂತ್ ಅಪ್ಪು ಕಾರ್ಯಕ್ರಮ ನಿರೂಪಿಸಿದರು. 

ಶಾಸಕರ ಸ್ವಂತ ಹಣದಲ್ಲಿ ತಾಲೂಕಿನ ಪೊಲೀಸ್ ಠಾಣೆಗಳಿಗೆ ಉಚಿತ ಕಂಪ್ಯೂಟರ್ ವಿತರಣೆ

ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ಭದ್ರಾವತಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ಭದ್ರಾವತಿ : ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ತಾಲೂಕಿನ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ನ್ಯೂಟೌನ್, ಹಳೇನಗರ, ಹೊಸಮನೆ ಶಿವಾಜಿ ಸರ್ಕಲ್, ಪೇಪರ್ ಟೌನ್, ಗ್ರಾಮಾಂತರ ಹಾಗು ಬಿ.ಆರ್.ಪಿ(ಗ್ರಾಮಾಂತರ ಉಪ ಠಾಣೆ) ಮತ್ತು ಸಂಚಾರಿ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಗಳಿದ್ದು, ಅಲ್ಲದೆ ಪೊಲೀಸ್ ಉಪಾಧೀಕ್ಷಕರ ಹಾಗು ನಗರ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಗಳಿವೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ಸಹ ಉಚಿತವಾಗಿ ಕಂಪ್ಯೂಟರ್‌ಗಳನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ವಿತರಿಸಲಾಯಿತು. 
    ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಪೇಪರ್ ಟೌನ್ ಠಾಣಾ ನಿರೀಕ್ಷಕಿ ನಾಗಮ್ಮ, ಹೊಸಮನೆ ಶಿವಾಜಿ ಸರ್ಕಲ್ ಠಾಣಾ ಸಹಾಯಕ ನಿರೀಕ್ಷಕ ಕೃಷ್ಣಕುಮಾರ್ ಮಾನೆ, ನ್ಯೂಟೌನ್ ಪೊಲೀಸ್ ಠಾಣಾ ಸಹಾಯಕ ನಿರೀಕ್ಷಕ ರಮೇಶ್, ಸಂಚಾರಿ ಠಾಣಾ ಸಹಾಯಕ ನಿರೀಕ್ಷಕಿ ಶಾಂತಲ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ ಹಾಗು ಎಲ್ಲಾ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Saturday, September 28, 2024

ಶಿಕ್ಷಕರ, ಸಂಸ್ಥಾಪಕರ ದಿನಾಚರಣೆ, ಮದರ್ ತೆರೇಸಾ ಹುಟ್ಟುಹಬ್ಬ

ಭದ್ರಾವತಿ ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ಶಿಕ್ಷಕರ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ ಹಾಗು ಮದರ್ ತೆರೇಸಾರವರ ಹುಟ್ಟುಹಬ್ಬ ಆಚರಿಸಲಾಯಿತು.
    ಭದ್ರಾವತಿ: ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ಶಿಕ್ಷಕರ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ ಹಾಗು ಮದರ್ ತೆರೇಸಾರವರ ಹುಟ್ಟುಹಬ್ಬ ಆಚರಿಸಲಾಯಿತು.
    ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ,  ಲಯನ್ಸ್ ಕ್ಲಬ್ ದೇವೇಂದ್ರ ಭಟ್ ಹಾಗು ಎಂಪಿಎಂ ಕಾರ್ಖಾನೆಯ ಎಚ್.ಎನ್ ರವಿಚಂದ್ರನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ಹಿರಿಯ ನರ್ಸಿಂಗ್ ಬಡ್ತಿ ಅಧಿಕಾರಿ ಶೀಲಮೇರಿ ಜಾರ್ಜ್ ವಿನ್ಸೆಂಟ್, ಅರಳಿಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನೀತ ಮತ್ತು ದೈಹಿಕ ಶಿಕ್ಷಕಿ ನಂದಿನಿ ಹಾಗು ನಿವೃತ್ತ ಕೆಪಿಟಿಸಿಎಲ್ ಇಂಜಿನಿಯರ್‌ಗಳಾದ ಸತ್ಯನಾರಾಯಣ ಮತ್ತು ಸಾಣೆಗೌಡ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. 
    ಲಯನ್ಸ್ ಕ್ಲಬ್ ಶುಗರ್‌ಟೌನ್ ಅಧ್ಯಕ್ಷ ಉಮೇಶ್ ಅಧ್ಯಕ್ಷತೆವಹಿಸಿದ್ದರು. ಡಾ. ನರೇಂದ್ರ ಭಟ್, ಸತೀಶ್ ಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಮ್ಮೇಗೌಡ ಸ್ವಾಗತಿಸಿ, ಶಿಕ್ಷಕಿಯರಾದ ಸವಿತಾ ಮತ್ತು ಕೋಕಿಲಾ ಪ್ರಾರ್ಥಿಸಿ, ಡಾರತಿ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ವಂದಿಸಿದರು. 
 

೧೮೬೧ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ

ಭದ್ರಾವತಿ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಏಕದಂತ ಕಲ್ಯಾಣ ಮಂಟದಲ್ಲಿ ೧೮೬೧ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು. 
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಮದ್ಯವರ್ಜನ ವ್ಯವಸ್ಥಾಪನ ಸಮಿತಿ, ಜನ್ನಾಪುರ ಹಾಗೂ ಸ್ಥಳಿಯ ಸಂಘ-ಸಂಸ್ಥೆಗಳ ಸಹಾಕಾರದೊಂದಿಗೆ ೧೮೬೧ನೇ ಮದ್ಯವರ್ಜನ ಶಿಬಿರ ಅ.೩ರ ವರೆಗೆ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಏಕದಂತ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದು, ಹಲವು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. 
    ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾರತರಾಜು ಅಧ್ಯಕ್ಷತೆಯಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ನಗರಸಭಾ ಸದಸ್ಯರಾದ ಲತಾಚಂದ್ರಶೇಖರ್, ಸವಿತಾ ಉಮೇಶ್, ಜಿಲ್ಲಾ ಜನ ಜಾಗೃತಿ ವೇದಿಕೆ  ಉಪಾಧ್ಯಕ್ಷ ಪಾಲಾಕ್ಷಪ್ಪ, ಸದಸ್ಯರಾದ ಆರ್. ಕರುಣಾಮೂರ್ತಿ, ಜಯರಾಂ ಗೊಂದಿ, ಯೋಜನಾಧಿಕಾರಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 
    ಶಿಬಿರದ ಸಮಾರೋಪ ಸಮಾರಂಭ ಅ.೩ರಂದು ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸುವರು. ತಹಸೀಲ್ದಾರ್ ಕೆ.ಆರ್ ನಾಗರಾಜು, ಬೆಳ್ತಂಗಡಿ ಜನಜಾಗೃತಿ ವೇದಿಕೆ ಕೇಂದ್ರ ಕಛೇರಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಮೂ ಕೊರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿ ಮನೋಹರ್ ಮಸ್ಸೂರಿ ತರಬೇತಿಗೆ ಆಯ್ಕೆ

ಈ ಹಿಂದೆ ೨ ಬಾರಿ ಭದ್ರಾವತಿ ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿ ಮನೋಹರ್‌ರವರು ಪ್ರಸ್ತುತ ವಿಜಯನಗರ ಜಿಲ್ಲೆಯ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತರಕಾಂಡ್, ಮಸ್ಸೂರಿಯಲ್ಲಿ ನಡೆಯುತ್ತಿರುವ ತರಬೇತಿಗೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿ ಮನೋಹರ್‌ರವರು ಪ್ರಸ್ತುತ ವಿಜಯನಗರ ಜಿಲ್ಲೆಯ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತರಕಾಂಡ್, ಮಸ್ಸೂರಿಯಲ್ಲಿ ನಡೆಯುತ್ತಿರುವ ತರಬೇತಿಗೆ ಆಯ್ಕೆಯಾಗಿದ್ದಾರೆ. 
    ರಾಜ್ಯದಿಂದ ಪೌರಾಡಳಿತ ಇಲಾಖೆಯ ೪ ಜನರು ಮಾತ್ರ ತರಬೇತಿಗೆ ಆಯ್ಕೆಯಾಗಿದ್ದು, ಈ ಪೈಕಿ ಮನೋಹರ್ ಸಹ ಒಬ್ಬರಾಗಿದ್ದಾರೆ. ಉತ್ತರಕಾಂಡ್ ರಾಜ್ಯದ ಮಸ್ಸೂರಿ ಮೂಲತಃ ಗಿರಿಧಾಮವಾಗಿದ್ದು, ಅಲ್ಲದೆ ಡೆಹ್ರಾಡೋನ್ ನಗರದಲ್ಲಿ ಪೌರಾಡಳಿತ ಮಂಡಳಿಯಾಗಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಕುರಿತು ಅಧ್ಯಯನ ನಡೆಸುವ ಉದ್ದೇಶದೊಂದಿಗೆ ತರಬೇತಿ ಆಯೋಜಿಸಲಾಗಿದೆ.
    ಮನೋಹರ್ ಈ ಹಿಂದೆ ೨ ಬಾರಿ ಇಲ್ಲಿನ ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ತರಬೇತಿ ಯಶಸ್ವಿಯಾಗಲಿ ಎಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
 

Friday, September 27, 2024

ಮಂಜುಳ ನಿಧನ

ಮಂಜುಳ 
    ಭದ್ರಾವತಿ : ಹಳೇನಗರದ ನಿವಾಸಿ, ಉದ್ಗೀತ ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್‌ರವರ ಮಾತೃಶ್ರೀ ಎಸ್. ಮಂಜುಳ (೭೦) ನಿಧನ ಹೊಂದಿದರು. 
    ಪತಿ ಶೇಷಗಿರಿ ಆಚಾರ್ ಹಾಗೂ ಪುತ್ರ ಡಾ. ಸುದರ್ಶನ್ ಆಚಾರ್ ಸೇರಿದಂತೆ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಶಾಖೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಸ್ವಚ್ಛತೆಯೇ ಸೇವೆ ಶೀರ್ಷಿಕೆಯಡಿ ಪರಿಸರ ದಿನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹಳೇ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನ  ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆಯಡಿ ಪರಿಸರ ದಿನ ಆಚರಿಸಲಾಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹಳೇ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನ  ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆಯಡಿ ಪರಿಸರ ದಿನ ಆಚರಿಸಲಾಯಿತು. 
    ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಜು, ಉಪ ಪ್ರಾಂಶುಪಾಲ ಎಸ್. ಹನುಮಂತಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪೂರ್ಣಿಮಾ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

ಉಕ್ಕಿನ ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಡಾ. ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಮತ್ತು ಬೆಂಗಳೂರಿನ ನಿಸರ್ಗ ಚಾರಿಟೇಬಲ್ ಟ್ರಸ್ಟ್, ನಿರಾಶ್ರಿತರ ವೃದ್ಧಾಶ್ರಮ ಹಾಗೂ ಮೈಸೂರು ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಹೂಟಗಳ್ಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ವಿಷ್ಣುವರ್ಧನ್‌ರವರ ೭೪ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಡಾ. ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಮತ್ತು ಬೆಂಗಳೂರಿನ ನಿಸರ್ಗ ಚಾರಿಟೇಬಲ್ ಟ್ರಸ್ಟ್, ನಿರಾಶ್ರಿತರ ವೃದ್ಧಾಶ್ರಮ ಹಾಗೂ ಮೈಸೂರು ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಹೂಟಗಳ್ಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ವಿಷ್ಣುವರ್ಧನ್‌ರವರ ೭೪ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಡಾ. ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ರಂಗಭೂಮಿ ಕಲಾವಿದ ವೈ.ಕೆ ಹನುಮಂತಯ್ಯ, ಹಲವಾರು ವರ್ಷಗಳಿಂದ ರೈಫಲ್ ಅಸೋಸಿಯೇಷನ್ (ಸಿಆರ್‌ಟಿಸಿ) ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಂ.ಎಸ್ ರವಿ, ಅಡುಗೆ ಅನಿಲ ವಿತರಕರಾಗಿ ಕರ್ತವ್ಯ ಸಲ್ಲಿಸುವ ಜೊತೆಗೆ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಸೆಲ್ವರಾಜ್ ಹಾಗು ಉದ್ಯಮಿ ಹಾಗು ಸಮಾಜ ಸೇವಕ ಜಿ.ಎನ್ ಸತ್ಯಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಪ್ರಶಸ್ತಿ ಪಡೆದುಕೊಂಡಿರುವ ಗಣ್ಯರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗು ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ.

Thursday, September 26, 2024

ಪ್ರಭಾಕರ ಬೀರಯ್ಯರಿಗೆ ಕಸಾಪ ಕಟ್ಟಡ ಸಮಿತಿಯಿಂದ ಸನ್ಮಾನ, ಗೌರವ

ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ವಿಶ್ವವಿದ್ಯಾಲಯ ಭದ್ರಾವತಿ ನಗರದ ಜನ್ನಾಪುರ ನಿವಾಸಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯರವರಿಗೆ ಡಾಕ್ಟರ್ ಆಫ್ ಲೆಟರ್‍ಸ್-ಡಿ.ಲಿಟ್ ಗೌರವ ಪದವಿ ನೀಡಿದೆ. ಈ ಹಿನ್ನಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ವಿಶ್ವವಿದ್ಯಾಲಯ ನಗರದ ಜನ್ನಾಪುರ ನಿವಾಸಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯರವರಿಗೆ ಡಾಕ್ಟರ್ ಆಫ್ ಲೆಟರ್‍ಸ್-ಡಿ.ಲಿಟ್ ಗೌರವ ಪದವಿ ನೀಡಿದೆ. ಈ ಹಿನ್ನಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಸಮಿತಿ ಅಧ್ಯಕ್ಷರಾದ ಡಾ. ವಿಜಯಾದೇವಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗು ಸದಸ್ಯರು ಸನ್ಮಾನಿಸಿ ಗೌರವಿಸಿದರು. ಪ್ರಭಾಕರ ಬೀರಯ್ಯರವರು ಕಟ್ಟಡ ಸಮಿತಿ ಉಪಾಧ್ಯಕ್ಷರಾಗಿದ್ದು, ಅವರ ಬಹುಮುಖ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವ ಡಿ ಲಿಟ್ ಪದವಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಇದು ಸಮಿತಿಗೆ ಸಂದ ಗೌರವಾಗಿದ್ದು, ಪ್ರಭಾಕರ ಬೀರಯ್ಯರವರು ಮತ್ತಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸ್ಪೂರ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. 
      ಸನ್ಮಾನ ಸ್ವೀಕರಿಸಿದ ಪ್ರಭಾಕರ ಬೀರಯ್ಯರವರು ಅಭಿನಂದನಾ ನುಡಿಗಳನ್ನಾಡಿ, ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಮಿತಿ ಪ್ರಮುಖರಾದ ಸಿ. ಜಯಪ್ಪ ಹೆಬ್ಬಳಗೆರೆ, ಕಸಾಪ ಕಾರ್ಯದರ್ಶಿ ಎಂ.ಈ  ಜಗದೀಶ್, ಮೋಹನ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಬಿ.ಎಸ್ ಪ್ರಕಾಶ್, ಕರ್ನಾಟಕ ಸಾಹಿತ್ಯ ಸಾಂಸ್ಕೃತಿ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಜಂಟಿ ಕಾರ್ಯದರ್ಶಿ ಸೌಮ್ಯ ಡಿ. ಪ್ರಭಾಕರ ಬೀರಯ್ಯ, ನಿರ್ದೇಶಕ ಜಿ. ಸುರೇಶ್, ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಗುದ್ದಲಿಗೆ ಪೂಜೆ ನೆರವೇರಿಸಿ, ಯೋಜನಾ ವರದಿಗೆ ಸೂಚನೆ ನೀಡಿ

ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆಯಿಂದ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರಿಗೆ ಮನವಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಗುದ್ದಲಿ ಪೂಜೆ ಕೈಗೊಳ್ಳುವುದು ಹಾಗು ಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಾಮಗಾರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಗುದ್ದಲಿ ಪೂಜೆ ಕೈಗೊಳ್ಳುವುದು ಹಾಗು ಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಾಮಗಾರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರಿಗೆ ಮನವಿ ಸಲ್ಲಿಸಲಾಗಿದೆ. 
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಂಬ್ಲೆಬೈಲು, ಕಲ್ಲಹಳ್ಳಿ, ತಡಸ, ದೊಣಬಘಟ್ಟ, ಸಿಂಗನಮನೆ, ಕೂಡ್ಲಿಗೆರೆ, ಬಿಳಿಕಿ, ಬಾರಂದೂರು, ಕಂಬದಾಳ್ ಹೊಸೂರು, ಗ್ರಾಮಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಗ್ರಾಮಸ್ಥರಿಗೆ ಪರಿಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಗಳ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಈ ಹಿನ್ನಲೆಯಲ್ಲಿ ಶಿಷ್ಟಾಚಾರ ಪಾಲನೆ (ಪ್ರೋಟೋಕಾಲ್) ಪ್ರಕಾರ ಗುದ್ದಲಿ ಪೂಜೆ ನೆರವೇರಿಸುವ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ. 
    ದೊಣಬಘಟ್ಟ, ಬಿಳಿಕಿ, ತಡಸ, ಕಾಗೆಕೋಡಮಗ್ಗಿ ಮತ್ತು ನಾಗತಿಬೆಳಗಲು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪರಿಶುದ್ಧವಾದ ಹಾಗೂ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲು ಪ್ರಸ್ತುತ ಕೆರೆಯ ನೀರಿನ ಸರಬರಾಜು ಬದಲಿಗೆ ನಗರಸಭೆ ವ್ಯಾಪ್ತಿಯ ಕಾಗದನಗರದ ಬಳಿ ಭದ್ರಾ ನದಿಯಿಂದ ನೀರನ್ನು ಪೈಪ್‌ಲೈನ್ ಮೂಲಕ ಒದಗಿಸಲು ಹಾಗೂ ಅವಶ್ಯಕವಿರುವ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ ಮಾಡಲು ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ. 
    ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್, ಮಾಜಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಈ ನಡುವೆ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರ ಕಾರ್ಯವೈಖರಿ ಹಾಗು ಭದ್ರಾವತಿ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹೆಚ್ಚಿನ ಶ್ರಮವಹಿಸಿರುವ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ದೊಣಬಘಟ್ಟ ಗ್ರಾಮಪಂಚಾಯತಿ ಅಧ್ಯಕ್ಷರಾದ ನಜೀಬಾಸುಲ್ತಾನ್, ಉಪಾಧ್ಯಕ್ಷ ಜೋಹರ್‌ಬಾನು, ಮುಖಂಡರಾದ ಯೂನಸ್‌ಬೇಗ್, ಮಹಮ್ಮದ್ ಪಾರೂಕ್, ಖಾಸಿಂಸಾಬ್, ದೇವೇಂದ್ರಪ್ಪ ಮತ್ತು ಕಲ್ಲಹಳ್ಳಿ ಗ್ರಾಮಪಂಚಾಯತಿ ಸದಸ್ಯ ಧರ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ದಾನಿಗಳ ಕೊಡುಗೆ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಲಿ : ಸತ್ಯನಾರಾಯಣ

ಭದ್ರಾವತಿ ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆ ಗಂಗೂರು ವೆಂಕಣ್ಣರವರು ದೇಣಿಗೆಯಾಗಿ ನೀಡಿದ ಸೌಂಡ್ ಸಿಸ್ಟಂ ಉಪವಿಭಾಗಾಧಿಕಾರಿ ಸತ್ಯನಾರಾಯಣ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಶಾಲೆಗೆ ಹಸ್ತಾಂತರಿಸಿದರು.  
    ಭದ್ರಾವತಿ: ಶಾಲೆಗಳಿಗೆ ದಾನವಾಗಿ ಪಡೆದ ವಸ್ತುಗಳು ಮಕ್ಕಳ ಕಲಿಕೆಗೆ ದಾರಿ ದೀಪವಾಗಬೇಕು. ಈ ನಿಟ್ಟಿನಲ್ಲಿ ಅವುಗಳ ಸದ್ಬಳಕೆಯಾಗಬೇಕೆಂದು ಉಪವಿಭಾಗಾಧಿಕಾರಿ ಸತ್ಯನಾರಾಯಣ ಹೇಳಿದರು. 
    ಅವರು ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆ ಗಂಗೂರು ವೆಂಕಣ್ಣರವರು  ದೇಣಿಗೆಯಾಗಿ ನೀಡಿದ ಸೌಂಡ್ ಸಿಸ್ಟಂ ಶಾಲೆಗೆ ಹಸ್ತಾಂತರಿಸಿ ಹಾಗು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. 
    ಮಕ್ಕಳು ಕಲಿಕೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ಶಿಕ್ಷಕರು ಹಾಗು ಪೋಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಪ್ರಸ್ತುತ ಮಕ್ಕಳ ಕಲಿಕೆ ಸರಳಗೊಳಿಸುವ ನಿಟ್ಟಿನಲ್ಲಿ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಶಿಕ್ಷಕರು ಕಲಿಕೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಕಲಿಕೆ ಕಷ್ಟವಾಗಲಾರದು. ಮಕ್ಕಳು ಪೋಷಕರಿಗೆ ಹೊರೆಯಾಗದಂತೆ ನಡೆದುಕೊಳ್ಳಬೇಕು. ಉತ್ತಮ ಸಹವಾಸದೊಂದಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕೆಂದರು. 
    ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಹಳೇಯ ವಿದ್ಯಾರ್ಥಿಗಳು, ದಾನಿಗಳು, ಸಂಘ-ಸಂಸ್ಥೆಗಳು ಸಹ ಕೈಜೋಡಿಸುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಸಹ ಸಬಲೀಕರಣಗೊಳ್ಳುತ್ತಿವೆ. ಈ ನಡುವೆ ಸಮಾಜದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಒಲವು ಮೂಡಿಸುವ ಕಾರ್ಯ ಸಹ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು. 
    ಕಾವ್ಯ ಪ್ರಾರ್ಥಿಸಿ, ಶಿಕ್ಷಕಿಯರಾದ ಸವಿತಾ ಸ್ವಾಗತಿಸಿ, ಫಾತೀಮಾಬೀ ನಿರೂಪಿಸಿದರು. ಶಿಕ್ಷಕ ಕಿರಣ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Wednesday, September 25, 2024

ಬಿಜೆಪಿ ಒಬಿಸಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಅಪ್ರತಿಮ ಸಂಘಟಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ತಾಲೂಕು ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಅಪ್ರತಿಮ ಸಂಘಟಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಿಸಲಾಯಿತು. 
    ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆ ನಡೆಸಲಾಯಿತು. ಮಂಡಲ ಒಬಿಸಿ ಅಧ್ಯಕ್ಷ ರಾಜಶೇಖರ್ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು.
    ಮಂಡಲ ಅಧ್ಯಕ್ಷರಾದ ಧರ್ಮ ಪ್ರಸಾದ್ ಅವರು ಮಾತನಾಡಿ ದೀನ್ ದಯಾಳ್ ಉಪಾಧ್ಯಾಯ ಅವರ ಮಹತ್ವದ ಸಂದೇಶಗಳಾದ ಏಕಾತ್ಮ ಮಾನವದರ್ಶನ, ಅಂತ್ಯೋದಯದ ಅದ್ಭುತ ಪರಿಕಲ್ಪನೆ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸಮಸ್ತ ಎಂಬ ತತ್ವಗಳ ದೃಷ್ಟಿಕೋನವನ್ನು ಬೆಳೆಸಿಕೊಂಡು ಈ ತತ್ವಗಳನ್ನು ಉಸಿರಾಗಿಸಿಕೊಂಡ ಮಹಾತ್ಮರಿಗೆ ನಮಿಸಿದರು.   
    ಒಬಿಸಿ ಜಿಲ್ಲಾಧ್ಯಕ್ಷ ಎಂ.ಎನ್ ಸುಧಾಕರ್, ಅಭಿಯಾನದ ಜಿಲ್ಲಾ ಪ್ರಭಾರಿ ಭವಾನಿರಾವ್ ಮೋರೆ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತ ಗರಿಷ್ಠ ೧೦೦ ಸದಸ್ಯತ್ವದ ಗುರಿ ಹೊಂದಬೇಕೆಂದು ವಿನಂತಿಸಿಕೊಂಡರು. 
    ಜಿಲ್ಲಾ ಒಬಿಸಿ ಉಪಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ಕೆ.ಎನ್ ವಿಕಾಸ್, ಎಂ. ಪ್ರಭಾಕರ್, ಎನ್. ರಂಗನಾಥ್ ಹಾಗು ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ

ಭದ್ರಾವತಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮಾತನಾಡಿದರು. 
    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಸಮೀಪದಲ್ಲಿರುವ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಮಹಮ್ಮದ್ ಪರ್ವೀಜ್ ತಿಳಿಸಿದರು. 
  ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಲವಾರ ವರ್ಷಗಳಿಂದ ಸಂಘ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಹೊಸದಾಗಿ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡಲಾಗಿದೆ. ಅದರಂತೆ ಅಧ್ಯಕ್ಷ ಮಹಮ್ಮದ್ ಪರ್ವೀಜ್, ಉಪಾಧ್ಯಕ್ಷರಾಗಿ ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಜಗದೀಶ್, ಕಾರ್ಯದರ್ಶಿಯಾಗಿ ಶ್ರೀ ಕುಮಾರ್, ಖಜಾಂಚಿಯಾಗಿ ಮುಬಾರಕ್ ಹಾಗು ನಿರ್ದೇಶಕರಾಗಿ ಸಂತೋಷ್ ಕುಮಾರ್(ಬಾಬು), ಎ. ರಾಜಣ್ಣ, ನೇವಿಲ್ ಪೆರೆರಾ, ಅಬ್ದುಲ್ ರೆಹಮಾನ್, ವಾಸುದೇವ ಆಚಾರ್, ಮಹೇಶ್, ರಾಕೇಶ್, ಗೋವಿಂದ ಮತ್ತು ಎಸ್.ಎನ್ ಕಾಂತರಾಜುರವರು ಆಯ್ಕೆಯಾಗಿದ್ದಾರೆ ಎಂದರು. 
    ಪ್ರಸ್ತುತ ವಾಹನ ಚಾಲಕರು ಮತ್ತು ಮಾಲೀಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಸರ್ಕಾರ ವಾಹನಗಳ ತೆರಿಗೆ ವಿಮೆ ಮೊತ್ತ ಹೆಚ್ಚಿಸಿರುವುದು ಸರಿಯಲ್ಲ. ತಕ್ಷಣ ಹೆಚ್ಚಿಸಿರುವ ಮೊತ್ತ ಹಿಂಪಡೆಯಬೇಕು. ಯಾವುದೇ ವಸತಿ ಸೌಲಭ್ಯಗಳು ಇಲ್ಲದ ಕಾರಣ ವಸತಿ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಬೇಕು. ಹಲವಾರು ಬೇಡಿಕೆಗಳಿದ್ದು, ಇವುಗಳನ್ನು ಈಡೇರಿಸಿಕೊಡುವ ಮೂಲಕ ಹಿತಕಾಪಾಡುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.   

ದಲಿತ ನೌಕರನ ವಿರುದ್ಧ ಸುಳ್ಳು ವರದಿ ನೀಡಿ ಕರ್ತವ್ಯದಿಂದ ಅಮಾನತು : ಖಂಡನೆ

ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಮುಂಭಾಗ ಡಿಎಸ್‌ಎಸ್ ಪ್ರತಿಭಟನೆ 

ಭದ್ರಾವತಿ ಇಲ್ಲಿನ ಅರಣ್ಯ ವಿಭಾಗದ ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ ದಲಿತ ನೌಕರನ ವಿರುದ್ಧ ಸುಳ್ಳು ವರದಿ ನೀಡಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ: ಇಲ್ಲಿನ ಅರಣ್ಯ ವಿಭಾಗದ ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ ದಲಿತ ನೌಕರನ ವಿರುದ್ಧ ಸುಳ್ಳು ವರದಿ ನೀಡಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು. 
    ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ ದಲಿತ ನೌಕರ ರಾಮು ದೊಡ್ಮನೆ ಎಂಬುವರು ಕಳೆದ ಸುಮಾರು ೮ ವರ್ಷಗಳಿಂದ ಮಾವಿನಕೆರೆ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಯಾವುದೇ ಆರೋಪಗಳು ಇರುವುದಿಲ್ಲ. ವಲಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಗದೀಶ್‌ರವರಿಗೆ ಮೇಲಾಧಿಕಾರಿಗಳಿಂದ ತಾಲೂಕಿನ ಗುಡಮಘಟ್ಟ ಗ್ರಾಮದ ಸರ್ವೆ ನಂ.೪೩ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ರೈತರು ಅಕ್ರಮವಾಗಿ ಸಾಗುವಳಿ ಮಾಡಿರುವ ಕುರಿತು ಮಾಹಿತಿ ಬಂದಿದ್ದು, ಈ ಹಿನ್ನಲೆಯಲ್ಲಿ ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ  ಸೂಚನೆ ಬಂದಿದೆ. ಈ ಹಿನ್ನಲೆಯಲ್ಲಿ ಜಗದೀಶ್‌ರವರು ರಾಮು ಅವರಿಗೆ ಗುಡಮಘಟ್ಟ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ. 
    ರಾಮುರವರು ಸ್ಥಳಕ್ಕೆ ತೆರಳಿ ಸರ್ವೆ ಕಾರ್ಯ ನಡೆಸಿ ಪ್ರಾಮಾಣಿಕವಾಗಿ ವರದಿ ಸಲ್ಲಿಸಿದ್ದಾರೆ. ಆದರೆ ಜಗದೀಶ್‌ರವರು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಅರಣ್ಯ ಇಲಾಖೆ ಭೂಮಿಯನ್ನು ಕಂದಾಯ ಇಲಾಖೆ ಭೂಮಿ ಎಂಬುದಾಗಿ ಸುಳ್ಳು ವರದಿ ನೀಡಿದ್ದಾರೆಂದು ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಮು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಜಗದೀಶ್‌ರವರು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಈ ರೀತಿ ಮಾಡಿದ್ದು, ಅಮಾನತು ಆದೇಶ ಪತ್ರ ಬಂದ ನಂತರ ಆರೋಗ್ಯ ನೆಪ ಹೇಳಿ ಜಗದೀಶ್‌ರವರು ಸುಮಾರು ೧೫ ದಿನ ಕರ್ತವ್ಯಕ್ಕೆ ರಜಾ ಸಲ್ಲಿಸಿದ್ದಾರೆಂದು ದಲಿತ ಮುಖಂಡರು ಆರೋಪಿಸಿದರು. 
    ತಕ್ಷಣ ರಾಮು ಅವರ ಮೇಲಿನ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಬೇಕು. ತಕ್ಷಣ ರಾಮು ಅವರನ್ನು ಕರ್ತವ್ಯ ಸೇರ್ಪಡೆಮಾಡಿಕೊಳ್ಳಬೇಕು. ಜಗದೀಶ್‌ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
    ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸತ್ಯ ಭದ್ರಾವತಿ ಮತ್ತು ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಸಿ. ಜಯಪ್ಪ ಹೆಬ್ಬಲಗೆರೆ, ಈಶ್ವರಪ್ಪ, ಮಣಿ ಜಿಂಕ್‌ಲೈನ್, ಪರಮೇಶ್ವರಪ್ಪ, ಎನ್. ಗೋವಿಂದ, ಸುಬ್ರಮಣಿ(ಕಬಡ್ಡಿ), ಈಶ್ವರಪ್ಪ(ನಗರಸಭೆ), ಸಂದೀಪ್, ಸುರೇಶ್(ಕೂಡ್ಲಿಗೆರೆ), ಎನ್. ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 

ಬಲಿಜ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಎಚ್.ಆರ್ ರಂಗನಾಥ್ ಆಯ್ಕೆ

ಭದ್ರಾವತಿ ತಾಲೂಕು ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಎಚ್.ಆರ್ ರಂಗನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕು ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಎಚ್.ಆರ್ ರಂಗನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಬಲಿಜ ಸಮುದಾಯ ಭವನದಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ರಂಗನಾಥ್‌ರವರು ಆಯ್ಕೆಯಾಗಿದ್ದಾರೆ. ರಂಗನಾಥ್‌ರವರು ಹಿರಿಯ ಕಬಡ್ಡಿ ಆಟಗಾರರಾಗಿದ್ದು, ಕೇಸರಿ ಪ್ರಶಸ್ತಿ ವಿಜೇತರಾಗಿದ್ದಾರೆ. ಇವರು ಹಲವಾರು ವರ್ಷಗಳಿಂದ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಹಿಂದೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 
    ಸಭೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಸಂಜೀವ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸುಬ್ರಮಣ್ಯ(ತಾತಯ್ಯ), ಉಪಾಧ್ಯಕ್ಷರಾದ ಜಂಗಮಪ್ಪ, ಶಕುಂತಲ, ಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ನರೇಂದ್ರ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸ್ವಚ್ಛ ಭಾರತ ಅಭಿಯಾನ : ಶಾಲಾ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ


 ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು.  
ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೆಶಕ ಬಿ.ಎಲ್ ಚಂದ್ವಾನಿ ಸ್ಪರ್ಧೆ ಉದ್ಘಾಟಿಸಿ ಆಂಗ್ಲಭಾಷೆಯಲ್ಲಿ ಸ್ವಚ್ಛತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಕನ್ನಡದಲ್ಲಿ  ಬೋಧಿಸಿದರು. 
ಬಿ.ಎಲ್ ಚಂದ್ವಾನಿ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಅಭ್ಯಾಸ ಅಳವಡಿಸಿಕೊಳ್ಳಬೇಕು ಮತ್ತು ಇತರರಿಗೂ ಈ ಅಭ್ಯಾಸ ರೂಢಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.
    ಕಾರ್ಖಾನೆಯ ಪರಿಸರ ನಿರ್ವಹಣಾ ವಿಭಾಗದ ಮಹಾಪ್ರಬಂಧಕ ಮುತ್ತಣ್ಣ ಸುಬ್ಬರಾವ್ ಮಾತನಾಡಿ, ಸ್ವಚ್ಛತೆಯು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.
    ಮಾರುಕಟ್ಟೆ ವಿಭಾಗದ ಮಹಾಪಬಂಧಕ ಹರಿಕೃಷ್ಣ ಗುಡೆ, ಪರಿಸರ ನಿರ್ವಹಣಾ ವಿಭಾಗದ ಉಪ ಮಹಾಪಬಂಧಕ ವಿಕಾಸ್ ಬಸೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ನೂರಕ್ಕೂ ಹೆಚ್ಚು ಸಸಿಗಳನ್ನು ಆಸಕ್ತ ಪೋಷಕರಿಗೆ ವಿತರಣೆ ಮಾಡಲಾಯಿತು. ತಾಲೂಕಿನ ೧ ರಿಂದ ೧೦ನೇ ತರಗತಿವರೆಗಿನ ಒಟ್ಟು ೪೨೫ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪರಿಸರದ ಮೇಲಿನ ಅಭಿಮಾನ ಹಾಗು ಪ್ರತಿಭೆಯನ್ನು ಕಲಾತ್ಮಕ ಚಿತ್ರಣದ ಮೂಲಕ ಪ್ರದರ್ಶಿಸಿದರು.  
 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಸಸಿಗಳನ್ನು ಆಸಕ್ತ ಪೋಷಕರಿಗೆ ವಿತರಣೆ ಮಾಡಲಾಯಿತು. 

ಸ್ವಚ್ಛ ಭಾರತ ಅಭಿಯಾನ : ಶಾಲಾ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು.
    ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೆಶಕ ಬಿ.ಎಲ್ ಚಂದ್ವಾನಿ ಸ್ಪರ್ಧೆ ಉದ್ಘಾಟಿಸಿ ಆಂಗ್ಲಭಾಷೆಯಲ್ಲಿ ಸ್ವಚ್ಛತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಕನ್ನಡದಲ್ಲಿ  ಬೋಧಿಸಿದರು. 
ಬಿ.ಎಲ್ ಚಂದ್ವಾನಿ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಅಭ್ಯಾಸ ಅಳವಡಿಸಿಕೊಳ್ಳಬೇಕು ಮತ್ತು ಇತರರಿಗೂ ಈ ಅಭ್ಯಾಸ ರೂಢಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.
    ಕಾರ್ಖಾನೆಯ ಪರಿಸರ ನಿರ್ವಹಣಾ ವಿಭಾಗದ ಮಹಾಪ್ರಬಂಧಕ ಮುತ್ತಣ್ಣ ಸುಬ್ಬರಾವ್ ಮಾತನಾಡಿ, ಸ್ವಚ್ಛತೆಯು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.
    ಮಾರುಕಟ್ಟೆ ವಿಭಾಗದ ಮಹಾಪಬಂಧಕ ಹರಿಕೃಷ್ಣ ಗುಡೆ, ಪರಿಸರ ನಿರ್ವಹಣಾ ವಿಭಾಗದ ಉಪ ಮಹಾಪಬಂಧಕ ವಿಕಾಸ್ ಬಸೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ನೂರಕ್ಕೂ ಹೆಚ್ಚು ಸಸಿಗಳನ್ನು ಆಸಕ್ತ ಪೋಷಕರಿಗೆ ವಿತರಣೆ ಮಾಡಲಾಯಿತು. ತಾಲೂಕಿನ ೧ ರಿಂದ ೧೦ನೇ ತರಗತಿವರೆಗಿನ ಒಟ್ಟು ೪೨೫ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪರಿಸರದ ಮೇಲಿನ ಅಭಿಮಾನ ಹಾಗು ಪ್ರತಿಭೆಯನ್ನು ಕಲಾತ್ಮಕ ಚಿತ್ರಣದ ಮೂಲಕ ಪ್ರದರ್ಶಿಸಿದರು.  
 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಸಸಿಗಳನ್ನು ಆಸಕ್ತ ಪೋಷಕರಿಗೆ ವಿತರಣೆ ಮಾಡಲಾಯಿತು.