ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದಾಗಿ ವಾರ್ಡ್‌ಗಳಲ್ಲಿ ಸದಸ್ಯರು ತಲೆ ತಗ್ಗಿಸುವಂತಾಗಿದೆ ಎಂದು ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷ ಭೇದಮರೆತು ಸದಸ್ಯರು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ವಾರ್ಡ್‌ಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ ಕಸಕಡ್ಡಿಕಟ್ಟಿಕೊಂಡು ದುರ್ವಾಸನೆ ಬೀರುತ್ತಿವೆ. ಸೊಳ್ಳೆಕಾಟ ಹೆಚ್ಚಾಗಿದೆ. ರೋಗರುಜಿನಗಳು ಹರಡುವ ಭೀತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಕಾಮಗಾರಿಗಳು ಅಪೂರ್ಣಗೊಂಡಿದ್ದು, ಯುಜಿಡಿ ಕಾಮಗಾರಿ ಸಹ ಸಮಪರ್ಕವಾಗಿ ನಡೆದಿಲ್ಲ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ನಗರಸಭೆಯಿಂದ ಪೂರೈಕೆ ಮಾಡುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ಈ ಕುರಿತು ನಿವಾಸಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಬಹುತೇಕ ಸದಸ್ಯರು ಆಗ್ರಹಿಸಿದರು.
ನಗರಸಭೆ ಸಾಮಾನ್ಯಸಭೆಗೆ ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸದಸ್ಯರು ಒತ್ತಾಯಿಸಿ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಬಿ.ಎಚ್ ರಸ್ತೆಗೆ ಹುತ್ತಾ ಕಾಲೋನಿಯಿಂದ ಸಿ.ಎನ್ ರಸ್ತೆವರೆಗೂ ಹಲವು ವರ್ಷಗಳ ಹಿಂದೆಯೇ ಡಾ. ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದರೂ ಸಹ ಎಲ್ಲೂ ಸಹ ಇದುವರೆಗೂ ನಾಮಫಲಕ ಅಳವಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಈ ರಸ್ತೆಯನ್ನು ರಾಜ್‌ಕುಮಾರ್ ರಸ್ತೆ ಎಂದು ಕರೆಯುತ್ತಿಲ್ಲ. ಇದು ಡಾ. ರಾಜ್‌ಕುಮಾರ್‌ರವರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ನಾಮಫಲಕಗಳನ್ನು ಅಳವಡಿಸುವಂಗೆ ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. ನಗರಸಭೆ ಬಹುತೇಕ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಂಡ ಸಭೆಯಲ್ಲಿ ಮಧ್ಯಾಹ್ನ ೧.೩೦ರ ವರೆಗೆ ಕೇವಲ ಸಾಮಾನ್ಯ ಚರ್ಚೆಗಳು ನಡೆದವು. ಅಜೆಂಡಾದಲ್ಲಿರುವ ಪ್ರಸ್ತಾವನೆಗಳ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ.
No comments:
Post a Comment