Wednesday, December 4, 2024

ನಗರಸಭೆ ಆಯವ್ಯಯ ಪೂರ್ವಭಾವಿ ಸಭೆ : ಆದಾಯ ಹೆಚ್ಚಿಸಿಕೊಂಡು ಮೂಲ ಸೌಕರ್ಯ ಕಲ್ಪಿಸಿ ಕೊಡಿ


ಭದ್ರಾವತಿ ನಗರಸಭೆ ೨೦೨೫-೨೬ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ಬುಧವಾರ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ: ನಗರಸಭೆ ೨೦೨೫-೨೬ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ಬುಧವಾರ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
   ಈ ಬಾರಿ ನಗರಸಭೆಯ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಇತರೆ ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು ೭,೮೮೫.೧೦ ಲಕ್ಷ ರು. ಆದಾಯದ ನಿರೀಕ್ಷೆಯೊಂದಿಗೆ ಆಯವ್ಯಯ ಸಿದ್ಧಪಡಿಸಲಾಗುತ್ತಿದೆ ಎಂದು ಸಭೆಯಲ್ಲಿ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದರು.
    ಗುಣಮಟ್ಟದ ರಸ್ತೆ ಅಭಿವೃದ್ದಿ ಕಾಮಗಾರಿ ಸೇರಿದಂತೆ ನಾಗರೀಕರಿಗೆ ಮೂಲ ಸೌಕರ್ಯಗಳನ್ನು ಓದಗಿಸುವ ನಿಟ್ಟಿನಲ್ಲಿ ಆಯವ್ಯಯ ಸಿದ್ದಪಡಿಸಲಾಗುತ್ತಿದೆ. ೨೦೨೪-೨೫ ನೇ ಸಾಲಿನಲ್ಲಿ ಆರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಈ ಬಾರಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನೀರಿನ ಶುಲ್ಕ ಹೆಚ್ಚಿಸುವ ಮೂಲಕ ಆದಾಯದ ಮೂಲ ಸಹ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದ್ದು,  ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
    ನಗರದ ಬಿ.ಎಚ್ ರಸ್ತೆ ಹಾಗು ಬಸವೇಶ್ವರ ವೃತ್ತದಲ್ಲಿ ಫುಡ್ ಕೋರ್ಟ್ ನಿರ್ಮಾಣ, ಸೈಕಲ್ ಸ್ಟ್ಯಾಂಡ್ ನಿರ್ಮಾಣ, ನ್ಯೂಟೌನ್ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ, ಹಾಳಾದ ರಸ್ತೆ ಸರಿಪಡಿಸುವುದು, ತೆರಿಗೆ ಪಾವತಿಸಲು ಕೌಂಟರ್ ತೆರೆಯುವುದು, ಬೀದಿ ದೀಪಗಳ ಅಳವಡಿಕೆ, ನೀರಿನ ಸಮರ್ಪಕ ಪೂರೈಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಕ್ರಮವಹಿಸಲಾಗಿದೆ ಎಂದರು.
    ದಲಿತ ಮುಖಂಡ ಸತ್ಯ ಭದ್ರಾವತಿ ಮಾತನಾಡಿ, ನೀರಿನ ತೆರಿಗೆ ಹೆಚ್ಚಳಕ್ಕೆ ವಿರೋಧವಿಲ್ಲ. ಆದರೆ ನಮಗೆ ಸಮರ್ಪಕವಾಗಿ ಗುಣಮಟ್ಟದ ನೀರು ಪೂರೈಕೆ ಮಾಡಬೇಕು.  ಬಿ.ಎಚ್ ರಸ್ತೆ ತಿಮ್ಮಯ್ಯ ಮಾರುಕಟ್ಟೆಯಲ್ಲಿ ನಿರ್ವಹಣೆ ಕೊರತೆಯಿಂದ ಮಳಿಗೆಗಳು ಪಾಳುಬಿದ್ದು ನಗರಸಭೆಗೆ ಸಾಕಷ್ಟು ನಷ್ಟವಾಗುತ್ತಿದೆ. ನಗರಸಭೆಯ ಆಸ್ತಿಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಿದರೆ ಆದಾಯದ ಪ್ರಮಾಣ ಹೆಚ್ಚುತ್ತದೆ ಎಂದು ಸಲಹೆ ವ್ಯಕ್ತಪಡಿಸಿದರು.
    ಜನ್ನಾಪುರ -ಹುತ್ತಾ ತೆರಿಗೆದಾರರ ಸಂಘದ ಕಾರ್ಯದರ್ಶಿ ಚಂದ್ರಪ್ಪ, ಮಾತನಾಡಿ, ರಸ್ತೆ ಅಭಿವೃದ್ದಿ ಕಾಮಗಾರಿ ಹೆಸರಿನಲ್ಲಿ ರಸ್ತೆಯಲ್ಲಿ ಗುಂಡಿ ತೆಗೆದು ಹಲವು ತಿಂಗಳಿನಿಂದ ಕಾಮಗಾರಿ ಮುಂದುವರೆಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಗುತ್ತಿಗೆದಾರನಿಗೆ ಕೇಳಿದರೆ ಬಿಲ್ ಆಗಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ರಸ್ತೆ ಕಾಮಗಾರಿ ಆರಂಭಿಸಿದ್ದು ಏಕೆ ಎಂದು ಪ್ರಶ್ನಿಸಿ ಕಾಮಗಾರಿ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ. ಮಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸಿ. ಪ್ರಸ್ತುತ ನೀಡುತ್ತಿರುವ ನೀರಿನ ತೆರಿಗೆಯೇ ಹೆಚ್ಚಾಗಿದ್ದು, ಮತ್ತಷ್ಟು ಏರಿಕೆ ಮಾಡುವುದು ಬಿಟ್ಟು ಸೋರಿಕೆಯಾಗುತ್ತಿರುವ ನೀರನ್ನು ತಡೆಯಲು ಪ್ರಯತ್ನಿಸಿ ಎಂದರು. 
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ವಾರ್ಷಿಕ ೮೦ ಲಕ್ಷ ರು. ಕಂದಾಯ ವಸೂಲಿ ಮಾಡಲಾಗುತ್ತಿದ್ದು, ಆದರೆ ಯಾವುದೇ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಟ್ಟಿಲ್ಲ ಎಂದು ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಆರೋಪಿಸಿದರು.
  ಈ ವ್ಯಾಪ್ತಿಯಲ್ಲಿ ಕೇವಲ ೧ ಸಿಸಿ ಕ್ಯಾಮರ ಹೊರತುಪಡಿಸಿ ಇದುವರೆಗೂ ಯಾವುದೇ ರಸ್ತೆ ಅಭಿವೃದ್ದಿ ಕಾಮಗಾರಿ ನಡೆದಿಲ್ಲ.  ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಮಹಿಳಾ ನೌಕರರು ಕರ್ತವ್ಯ ಮುಗಿಸಿ ಈ ರಸ್ತೆಯಲ್ಲಿ ಮನೆಗೆ ತೆರಳುವುದೇ ಕಷ್ಟವಾಗಿದೆ. ವಿಮಾನ ನಿಲ್ದಾಣ ನಿರ್ಮಾಣದ ನಂತರ ವಿದೇಶಿ ವ್ಯಾಪಾರಸ್ಥರು ಆಗಮಿಸುತ್ತಿದ್ದಾರೆ. ಈ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ಕಸದ ರಾಶಿಗಳು ಕಂಡು ಬರುತ್ತಿದ್ದು, ಪ್ರತಿದಿನ ಸ್ವಚ್ಛತಾ ಕಾರ್ಯ ನಡೆಸುವ ಜೊತೆಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಿ  ಎಂದರು.
    ಹಳೇನಗರ ಮನೆ ಮಾಲೀಕರ ಸಂಘದ ಬಸವರಾಜಯ್ಯ ಮಾತನಾಡಿ, ಕಳೆದ ವರ್ಷದಲ್ಲಿ ಎಷ್ಟು ಆದಾಯ ಬಂದಿದೆ. ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಲೆಕ್ಕ ಕೊಡಬೇಕು. ಕನಕ ಮಂಟಪ ರಸ್ತೆಯಲ್ಲಿ ಸೈಕಲ್ ಪಾತ್ ಮಾಡಿ ಅಗಲವಿದ್ದ ರಸ್ತೆಯನ್ನು ೬ ಅಡಿ ಕಡಿಮೆ ಮಾಡಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ನಮ್ಮ ತೆರಿಗೆ ಹಣ ಹಾಳು ಮಾಡಿದ್ದೀರ ಎಂದು ದೂರಿದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜು, ನಗರ ಆಶ್ರಯ ಸಮಿತಿಯ ಅಧ್ಯಕ್ಷ ಗೋಪಾಲ್  ಉಪಸ್ಥಿತರಿದ್ದರು. 
    ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ,  ವಿ. ವಿನೋದ್, ತೀರ್ಥೇಶ, ಬಸವರಾಜಯ್ಯ, ಎಲ್.ವಿ ರುದ್ರಪ್ಪ, ಚಂದ್ರಪ್ಪ ಅಮೀರ್ ಜಾನ್, ಜಹೀರ್ ಜಾನ್ ಹಾಗೂ ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಸವಿತಾ ಉಮೇಶ್, ಲತಾ ಚಂದ್ರಶೇಖರ್, ಅನಿತಾ ಮಲ್ಲೇಶ್, ಬಿ.ಎಂ ರವಿಕುಮಾರ್, ಶಶಿಕಲಾ ಬಿ.ಎಸ್ ನಾರಾಯಣಪ್ಪ, ಕೋಟೇಶ್ವರ ರಾವ್, ಎಸ್. ಪಲ್ಲವಿ, ಶೃತಿ ಸಿ. ವಸಂತಕುಮಾರ್ ಕೆ.ಜಿ ಹಾಗು ನಗರಸಭೆ ವ್ಯವಸ್ಥಾಪಕಿ ಸುನಿತಾಕುಮಾರಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment