ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ : ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಎಲ್ಲಾ ದಾಖಲೆಗಳನ್ನು ಹೊಂದಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ಅರಣ್ಯ ಇಲಾಖೆಯವರು ನೋಟಿಸ್ ನೀಡುವ ಮೂಲಕ ವಿನಾಕಾರಣ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ. ತಕ್ಷಣ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಲಾಯಿತು.
ಸರ್ವೋಚ್ಛ ನ್ಯಾಯಾಲಯವೇ ರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಹೇಳಿದೆ. ಹೀಗಿರುವಾಗ ೫೦ ವರ್ಷಗಳಿಂದ ಸುಮ್ಮನೆ ಇದ್ದು, ಇದೀಗ ಏಕಾಏಕಿ ನೋಟಿಸ್ ನೀಡುವ ಮೂಲಕ ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು ಸರಿಯಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಾಣ ಕುರುಡುತನಕ್ಕೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವ ಮೂಲಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಯಿತು.
ಪ್ರಮುಖರಾದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಮುಖಂಡರಾದ ಟಿ. ಚಂದ್ರೇಗೌಡ, ಸುರೇಶ್, ಜಯರಾಮ್, ಡಿ. ಆನಂದ್, ಎಂ.ಎ ಅಜಿತ್, ಗೊಂದಿ ಜಯರಾಮ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ರೈತರು, ಕೃಷಿ ಕೂಲಿ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಮುಖಂಡರು, ಅಭಿಮಾನಿಗಳು ಪಾಲ್ಗೊಂಡಿದ್ದರು.
No comments:
Post a Comment