ಭದ್ರಾವತಿ ಸಿ.ಎನ್ ರಸ್ತೆ, ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಪ್ರಪ್ರಥಮ ಪದಾಧಿಕಾರಿಗಳ ಸಭೆಯಲ್ಲಿ ನಡೆಯಿತು.
ಭದ್ರಾವತಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯಗಳನ್ನು ಮೈಗೂಡಿಸಿಕೊಂಡು ಹಾಗು ಕ್ಷೇತ್ರದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿದ ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ದಾರಿಯಲ್ಲಿ ಸಾಗುತ್ತಿರುವ ಪ್ರಸ್ತುತ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ದಲಿತ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳು ಎದ್ದು ಕಾಣುತ್ತಿದ್ದು, ಅಲ್ಲದೆ ಒಗ್ಗಟ್ಟು ಇಲ್ಲದಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ದಲಿತ ಸಂಘಟನೆಯ ಅಗತ್ಯವಿದ್ದು, ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು.
ಅವರು ನಗರದ ಸಿ.ಎನ್ ರಸ್ತೆ, ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಜರುಗಿದ ಕರ್ನಾಟಕ ದಲಿತ ಸಮನ್ವಯ ಸಮಿತಿ ಪ್ರಪ್ರಥಮ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ದಲಿತ ಸಮನ್ವಯ ಸಮಿತಿ ರಾಜ್ಯಮಟ್ಟದ ಸಂಘಟನೆಯಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನದ ಆಶಯದಂತೆ ಮತ್ತು ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತಿ ಪಡೆದಿರುವ ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಹಾದಿಯಲ್ಲಿ ಮುನ್ನಡೆಸಲಾಗುವುದು. ಈ ಸಂಘಟನೆ ಮೂಲಕ ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಧ್ವನಿಯಾಗಿ ಹಾಗೂ ಭವಿಷ್ಯದ ಮಕ್ಕಳ ಶಿಕ್ಷಣದ ಹಕ್ಕುಗಳು, ಅಲ್ಪಸಂಖ್ಯಾತರು, ದೀನ ದಲಿತರ ಹಕ್ಕುಗಳಿಗಾಗಿ ಚಳುವಳಿಗಳನ್ನು, ಹೋರಾಟಗಳನ್ನು ರೂಪಿಸಲಾಗುವುದು ಎಂದರು
ದಲಿತ ಹಾಗು ಪ್ರಗತಿಪರ ಎಲ್ಲಾ ಸಂಘಟನೆಗಳನ್ನು, ಎಲ್ಲಾ ಹೋರಾಟಗಾರರು ಹಾಗೂ ಚಿಂತಕರನ್ನು ಸಮನ್ವಯಗೊಳಿಸಿಕೊಂಡು ಸಾಗುವ ಸದುದ್ದೇಶ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಸಮಿತಿ ಹೊಂದಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಹೋರಾಟಗಾರರು, ಚಿಂತಕರು, ಪ್ರಗತಿಪರರು, ನೌಕರರು, ಶಿಕ್ಷಣಾಸಕ್ತರು, ಸಾಹಿತಿಗಳು ಸಮಿತಿಯೊಂದಿಗೆ ಕೈಜೋಡಿಸಲು ಕೋರುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲಾ ಜಿಲ್ಲೆ ತಾಲೂಕು ಹೋಬಳಿ ವಿಭಾಗ ಮಟ್ಟದ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗುವುದು ಎಂದರು.
ಸಾರಿಗೆ ಇಲಾಖೆಯ ಎನ್. ಮಂಜುನಾಥ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯು. ಮಹದೇವಪ್ಪ ಮತ್ತು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪರವರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು.
ಕೇಂದ್ರ ಕಾರ್ಯಕಾರಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಸುನಿಲ್ ಕೋಟಿ ಸ್ವಾಗತಿಸಿ, ನೇತ್ರ ಕಾಳಿಂಗನಹಳ್ಳಿ ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ