ಬುಧವಾರ, ಜುಲೈ 23, 2025

ವಿಐಎಸ್‌ಎಲ್ ಕಾರ್ಖಾನೆ ಮರುನಿರ್ಮಾಣ ಕುಮಾರಣ್ಣ ಶಪಥ : ನಿಖಿಲ್ ಕುಮಾರಸ್ವಾಮಿ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮರುನಿರ್ಮಾಣ ಮಾಡಲು ಕುಮಾರಣ್ಣ ಶಪಥ ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಅತೀ ಶೀಘ್ರದಲ್ಲಿ  ಕಾರ್ಖಾನೆ ಮರುಸ್ಥಾಪನೆ ಆಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. 
    ಅವರು ಬುಧವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕುಮಾರಣ್ಣ ಕೇಂದ್ರದ ಸಚಿವರಾಗುತ್ತಿದ್ದಂತೆ ವಿಶೇಷ ಕಾಳಜಿ ವಹಿಸಿದ್ದಾರೆ. ನೂರಕ್ಕೆ ನೂರರಷ್ಟು ಇದಕ್ಕೆ ಮರು ಜೀವ ಕೊಡುತ್ತಾರೆ. ಜಿಲ್ಲೆಯ ಜನತೆಗೆ ಶಾಶ್ವತವಾಗಿ ಬದುಕು ಕಟ್ಟಿಕೊಳ್ಳುವುದಕ್ಕೆ ಈ ನಿರ್ಧಾರ ಮಾಡಿದ್ದಾರೆ ಎಂದರು.
    ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (ಆರ್‌ಎನ್‌ಐಎಲ್)/ ವೈಜಾಗ್ ಸ್ಟೀಲ್ ಕಂಪನಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕುಮಾರಣ್ಣ ಅವರ ದೃಢ ನಿರ್ಧಾರದಿಂದ ೧೧,೪೪೦ ಕೋ. ರು. ವೆಚ್ಚದಲ್ಲಿ ಮರುಜೀವ ನೀಡಿರುವುದು ನಮ್ಮ ಕಣ್ಮುಂದೆ ಇದೆ ಎಂದರು.
    ಇದೆ ರೀತಿ ವಿಐಎಸ್‌ಎಲ್ ಕಾರ್ಖಾನೆ ಸಹ ಮರುಜೀವ ಪಡೆಯಲಿದ್ದು, ಈಗಾಗಲೇ ಕಾರ್ಖಾನೆ ಮರುನಿರ್ಮಾಣ ಮಾಡುವ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ. ಇಡೀ ಕಾರ್ಖಾನೆಯನ್ನು ಹೊಸದಾಗಿ ಅತ್ಯಾಧುನಿಕವಾಗಿ ಮರುನಿರ್ಮಾಣ ಮಾಡಬೇಕೆಂದು ಕುಮಾರಣ್ಣ ಅವರು ಶಪಥ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಅತಿ ಶೀಘ್ರದಲ್ಲೇ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಒತ್ತಿ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ