ಬುಧವಾರ, ಜುಲೈ 23, 2025

ಮುಂದಿನ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು, ಕಾರ್ಯಕರ್ತರು, ಅಭಿಮಾನಿ ಬಳಗದ ಶಕ್ತಿಯಿಂದ ಶಾರದ ಅಪ್ಪಾಜಿ ಗೆಲ್ಲಿಸಿಕೊಳ್ಳುತ್ತೇವೆ

ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ 

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. 
    ಭದ್ರಾವತಿ: ಕ್ಷೇತ್ರದಲ್ಲಿ ಮುಂದಿನ ೨೦೨೮ರ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಗೆಲುವು ಖಚಿತ. ಇದು ಸಾಧ್ಯವಾಗದಿದ್ದಲ್ಲಿ ನನ್ನ ಜನ್ಮವಿರುವತನಕ ಈ ಕ್ಷೇತ್ರಕ್ಕೆ ತಲೆ ಹಾಕುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. 
    ಅವರು ಬುಧವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದಲ್ಲಿ ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರ ಕೊಡುಗೆ ಅಪಾರವಾಗಿದೆ. ಅವರ ಅಭಿಮಾನ ಬಳಗ, ಪಕ್ಷದ ಕಾರ್ಯಕರ್ತರು ಇನ್ನೂ ಜೀವಂತವಾಗಿದ್ದಾರೆ. ಸೋಲಿನಿಂದ ಯಾರು ಸಹ ದೃತಿಗೆಡುವ ಅಗತ್ಯವಿಲ್ಲ. ಈ ಬಾರಿ ಶಾರದ ಅಪ್ಪಾಜಿಯವರು ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನಾನು, ನಮ್ಮ ತಂದೆ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಹಾಗು ನಮ್ಮ ತಾತ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರು ಮುಂದಿನ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಅವರನ್ನು ಗೆಲ್ಲಿಸುತ್ತೇವೆ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ಈ ಕ್ಷೇತ್ರಕ್ಕೆ ನನ್ನ ಜನ್ಮವಿರುವತನಕ ತಲೆ ಹಾಕುವುದಿಲ್ಲ ಎಂದರು. 
    ಕ್ಷೇತ್ರದಲ್ಲಿನ ಕಾಂಗ್ರೆಸ್ ಶಾಸಕರು ಹಾಗು ಅವರ ಕುಟುಂಬ ವರ್ಗದರಿಂದ ನಿರಂತರವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಇದನ್ನು ಅವರು ಅರ್ಥಮಾಡಿಕೊಂಡು ಸುಮ್ಮನಿರಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಿಡಿದೆದ್ದು ಹೋರಾಟ ನಡೆಸಿದ್ದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಕ್ಷೇತ್ರದಲ್ಲಿ ಇಸ್ಪೀಟ್, ಮಟ್ಕಾ, ಜೂಜಾಟ, ಗಾಂಜಾ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಯುವ ಜನರು ದಾರಿ ತಪ್ಪುತ್ತಿದ್ದಾರೆ. ಶಾಸಕರ ಆಡಳಿತದಲ್ಲಿ ಕುಟುಂಬ ವರ್ಗದವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಧಿಕಾರಿಗಳು, ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಪಕ್ಷದ ಮುಖಂಡರು, ಕಾರ್ಯಕರ್ತರು ಸದಸ್ಯತ್ವ ಹೆಚ್ಚಿಸುವ ಮೂಲಕ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಅಗತ್ಯವಿದೆ ಎಂದರು. 
    ಜೆಡಿಎಸ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಗಮನಿಸಿದರೆ, ಇದು ಮುಂದಿನ ಚುನಾವಣೆಯ ದಿಕ್ಸೂಚಿ ತೊರಿಸುತ್ತದೆ. ಬದಲಾವಣೆಯ ಗಾಳಿ ತೊರುತ್ತದೆ ಎಂದರು.
    ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಂಪರ್ಕ ನಿರಂತರವಾಗಿ ಇಟ್ಟುಕೊಳ್ಳುವ ನಿಮ್ಮ ಬಳಿಗೆ ನಾನು ಬಂದಿದ್ದೇನೆ. ಜನರ ಧ್ವನಿಯಾಗಿರುವ, ಪಕ್ಷ ಕಟ್ಟಲು ಶ್ರಮಿಸುವ ನಿಷ್ಟಾವಂತರನ್ನು ಗುರುತಿಸಿ ಕಾರ್ಯಕರ್ತರ ಸಮಕ್ಷಮ ತಾಪಂ, ಜಿಪಂ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದರು.
    ವೇದಿಕೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಟಿ. ಚಂದ್ರೇಗೌಡ, ತಿಮ್ಮೇಗೌಡ, ಮಧುಸೂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ