Saturday, May 9, 2020

ಉಳ್ಳವರು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗಿ : ಎಂ.ಜೆ ಅಪ್ಪಾಜಿ

ಭದ್ರಾವತಿ  ನ್ಯೂಟೌನ್ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಕಡು ಬಡವರಿಗೆ ಶನಿವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ದಿನಸಿ ಸಾಮಗ್ರಿ ವಿತರಿಸಿದರು. 
ಭದ್ರಾವತಿ: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಶ್ರೀಸಾಮಾನ್ಯರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂದಿಗ್ದ ಪರಿಸ್ಥಿತಿಯಲ್ಲಿ ಉಳ್ಳವರು ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಬೇಕೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮನವಿ ಮಾಡಿದರು.
ಅವರು ಶನಿವಾರ ನ್ಯೂಟೌನ್ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
ಎಲ್ಲವನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ತಮ್ಮೊಂದಿಗೆ ಬದುಕುತ್ತಿರುವ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರ ನೆರವಿಗೆ ಮುಂದಾಗುವುದು ಉಳ್ಳವರ ಕರ್ತವ್ಯವಾಗಿದೆ. ಕೈಲಾದಷ್ಟು ನೆರವು ನೀಡುವ ಮೂಲಕ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸಲು ಮುಂದಾಗಬೇಕೆಂದರು.
ಪ್ರಸ್ತುತ ರಾಜ್ಯದಲ್ಲಿ ತುರ್ತಾಗಿ ಮದ್ಯದಂಗಡಿಗಳನ್ನು ತೆರೆಯುವ ಅಗತ್ಯವಿರಲಿಲ್ಲ. ಸುಮಾರು ೪೦ ದಿನಗಳಿಂದ ಮದ್ಯವಿಲ್ಲದೆ ಜನರು ಬದುಕಿದ್ದರು. ಮುಂದೆ ಸಹ ಮದ್ಯವಿಲ್ಲದೆ ಬದುಕುತ್ತಿದ್ದರು. ರಾಜ್ಯ ಸರ್ಕಾರ ಹಣದ ಆಸೆಗಾಗಿ ಜನರ ಬದುಕನ್ನು ಬಲಿ ಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮುಖಂಡರಾದ ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಬದರಿನಾರಾಯಣ, ಎಚ್.ಎಂ ಮಹಾದೇವಯ್ಯ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯದರ್ಶಿ ಲೋಕೇಶ್(ಕೆಇಬಿ) ವಂದಿಸಿದರು. 

Friday, May 8, 2020

ತಾಲೂಕು ದಂಡಾಧಿಕಾರಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕಾರ

ಭದ್ರಾವತಿ ತಾಲೂಕು ನೂತನ ತಾಲೂಕು ದಂಡಾಧಿಕಾರಿಯಾಗಿ 
ಶಿವಕುಮಾರ್ ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು. 
ಭದ್ರಾವತಿ: ನೂತನ ತಾಲೂಕು ದಂಡಾಧಿಕಾರಿಯಾಗಿ ತಹಸೀಲ್ದಾರ್ ಶಿವಕುಮಾರ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಉಪಸ್ಥಿತಿಯಲ್ಲಿ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ ಮಲ್ಲಪ್ಪ, ಹೀರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್, ಪರಿಸರ ಅಭಿಯಂತರ ರುದ್ರೇಗೌಡ, ಕಂದಾಯಾಧಿಕಾರಿ ಪ್ರಶಾಂತ್, ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ತಾಲೂಕು ನೂತನ ತಾಲೂಕು ದಂಡಾಧಿಕಾರಿಯಾಗಿ ಶಿವಕುಮಾರ್ ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದು, ಇವರನ್ನು ಆರೋಗ್ಯ ಇಲಾಖೆ ವತಿಯಿಂದ ಸ್ವಾಗತಿಸಲಾಯಿತು. 
ಶಿವಕುಮಾರ್ ಪರಿಚಯ: 
ಶಿವಕುಮಾರ್‌ರವರು ೨೦೦೦ ಇಸವಿಯಲ್ಲಿ ತಹಸೀಲ್ದಾರ್ ಹುದ್ದೆಯಲ್ಲಿ ನೇಮಕಗೊಂಡಿದ್ದು, ಸುಮಾರು ೧೯ ವರ್ಷ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿದ್ದು, ನಂತರ ಹಾವೇರಿ ತಾಲೂಕು ದಂಡಾಧಿಕಾರಿಯಾಗಿ ಸುಮಾರು ೨ ವರ್ಷ ಸೇವೆ ಸಲ್ಲಿಸಿ ಇದೀಗ ಭದ್ರಾವತಿಗೆ ವರ್ಗಾವಣೆಗೊಂಡಿದ್ದಾರೆ.
ಈ ಹಿಂದೆ ಸೋಮಶೇಖರ್‌ರವರು ಸುಮಾರು ೧ ವರ್ಷ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಏ.೩೦ರಂದು ನಿವೃತ್ತಿ ಹೊಂದಿದ್ದರು. ಇದೀಗ ತೆರವಾಗಿದ್ದ ಹುದ್ದೆಗೆ ಶಿವಕುಮಾರ್ ನೇಮಕಗೊಂಡಿದ್ದಾರೆ. 

ಸ್ವ ಸಹಾಯ ಮಹಿಳಾ ಸಂಘಗಳಿಂದ ಮಾಸ್ಕ್ ತಯಾರಿಕೆ

ಭದ್ರಾವತಿ ನಗರಸಭೆಯ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ (ಡೇ-ನಲ್ಮ್) ಗುಂಪು ಉದ್ಯೋಗ ಕಾರ್ಯಕ್ರಮದಡಿ ರಚನೆಯಾಗಿರುವ ಹೆಬ್ಬಂಡಿ ಗ್ರಾಮದ ಬಾಂಧವ್ಯ ಮಹಿಳಾ ಘಟಕ ಮತ್ತು ಹೊಸಸಿದ್ದಾಪುರದ ಚಾಮುಂಡೇಶ್ವರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿರುವುದು.
ಭದ್ರಾವತಿ, ಏ. ೮: ಲಾಕ್‌ಡೌನ್ ಅಂತ್ಯಗೊಂಡಿದ್ದರೂ ಸಹ ರಾಜ್ಯಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಹಸಿರು ವಲಯದಲ್ಲಿ ಸಾರ್ವಜನಿಕರ ಸಂಚಾರ ಅಧಿಕವಾಗಿದೆ. ಈ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಬಳಸುವಂತೆ ಹಾಗೂ ಎಲ್ಲಿಬೇಕೆಂದರಲ್ಲಿ ಉಗುಳದಂತೆ ಎಚ್ಚರಿಕೆ ನೀಡಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದ ಸ್ವಸಹಾಯ ಮಹಿಳಾ ಸಂಘಗಳು ಇದೀಗ ಮಾಸ್ಕ್ ತಯಾರಿಕೆಯನ್ನು ಉದ್ಯೋಗವನ್ನಾಗಿಸಿ ಕೊಂಡಿವೆ.
ನಗರಸಭೆಯ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ (ಡೇ-ನಲ್ಮ್) ಗುಂಪು ಉದ್ಯೋಗ ಕಾರ್ಯಕ್ರಮದಡಿ ರಚನೆಯಾಗಿರುವ ಹೆಬ್ಬಂಡಿ ಗ್ರಾಮದ ಬಾಂಧವ್ಯ ಮಹಿಳಾ ಘಟಕ ಮತ್ತು ಹೊಸಸಿದ್ದಾಪುರದ ಚಾಮುಂಡೇಶ್ವರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ.
ಉತ್ತಮ ಗುಣಮಟ್ಟದ ಕಾಟನ್ ಮಾಸ್ಕ್ ತಯಾರಿಸುತ್ತಿದ್ದು, ಮಾಸ್ಕ್ ಅಗತ್ಯವಿರುವವರು ಖರೀದಿಸಬಹುದಾಗಿದೆ.  ದೊಡ್ಡ ಪ್ರಮಾಣದಲ್ಲಿ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದ್ದು, ಖರೀದಿಸುವವರು ಮೊ. ೮೬೬೦೬೭೧೬೯೫, ೯೯೮೬೫೭೦೯೦೭ ಅಥವಾ ೯೬೬೩೮೯೪೬೪೬ ಸಂಪರ್ಕಿಸಬಹುದಾಗಿದೆ.



ಅನಿಲ ವಿತರಕರಿಂದ ಹೆಚ್ಚುವರಿ ಹಣ ವಸೂಲಾತಿ : ಸ್ಥಳೀಯರಿಂದ ದೂರು

ಭದ್ರಾವತಿ ಜನ್ನಾಪುರದಲ್ಲಿರುವ ಓಂ ಸಾಯಿ ಇಂಡಿಯನ್ ಡಿಸ್ಟ್ರಿಬ್ಯೂಟರ್‍ಸ್ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡಲು ಹೆಚ್ಚುವರಿ ಹಣ ಪಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ. 

ಭದ್ರಾವತಿ: ನಗರದ ಜನ್ನಾಪುರದಲ್ಲಿರುವ ಓಂ ಸಾಯಿ ಇಂಡಿಯನ್ ಡಿಸ್ಟ್ರಿಬ್ಯೂಟರ್‍ಸ್ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡಲು ಹೆಚ್ಚುವರಿ ಹಣ ಪಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.
ಅನಿಲ ಸಿಲಿಂಡರ್ ನಿಗದಿತ ದರಕ್ಕೆ ಪೂರೈಕೆ ಮಾಡದೆ ೭೪೩ ರು. ಇದ್ದರೆ, ೭೭೦ ರು. ಪಡೆಯಲಾಗುತ್ತಿದೆ. ಹೆಚ್ಚುವರಿಯಾಗಿ ಸುಮಾರು ೨೭ ಹೆಚ್ಚು ಪಡೆಯಲಾಗುತ್ತಿದೆ. ಆದರೆ ೭೪೩ ರು.ಗಳಿಗೆ ರಶೀದಿ ನೀಡಲಾಗುತ್ತಿದೆ. ಪ್ರಸ್ತುತ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲೂ ಹೆಚ್ಚುವರಿ ಹಣ ವಸೂಲಾತಿ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಮೋಹನ್‌ಕುಮಾರ್,  ಎಚ್. ಮಂಜುನಾಥ್, ಎಸ್. ಶಿವು, ಪ್ರಕಾಶ್, ಸುಬ್ಬೇಗೌಡ, ಅಲಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, May 7, 2020

ಗ್ರಾಮೀಣ ಭಾಗದಲ್ಲಿ ಕಡು ಬಡವರು, ವಿಕಲಚೇತನರಿಗೆ ಆಹಾರ ಸಾಮಗ್ರಿ ವಿತರಣೆ

ಭದ್ರಾವತಿ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಂಚೇನಹಳ್ಳಿ, ಬಾರಂದೂರು,  ಹಿರಿಯೂರು ಸೇರಿದದಂತೆ ೮ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರಿಗೆ, ವಿಕಲಚೇತನರಿಗೆ ಗುರುವಾರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಮೇ. ೭: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಕಡು ಬಡವರು, ನಿರಾಶ್ರಿತರು, ಕೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು, ವಿಕಲಚೇತನರು ಸೇರಿದಂತೆ ಶ್ರೀಸಾಮಾನ್ಯರು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯನ್ನು ಅರಿತುಕೊಂಡಿರುವ ಕೆಲವು ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು,  ದಾನಿಗಳು ನೆರವಿಗೆ ಮುಂದಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಪ್ರತಿನಿಧಿಸುವ ಸ್ವಕ್ಷೇತ್ರ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಂಚೇನಹಳ್ಳಿ, ಬಾರಂದೂರು,  ಹಿರಿಯೂರು ಸೇರಿದದಂತೆ ೮ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರಿಗೆ, ವಿಕಲಚೇತನರಿಗೆ ಗುರುವಾರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಬೆಂಗಳೂರಿನ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ. ಅನುರಾಧ ಪಟೇಲ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮಾಜಿ ಸದಸ್ಯ ಎಸ್. ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ೮೦೦ ರಿಂದ ೧೦೦೦ ಮಂದಿಗೆ ಆಹಾರ ಸಾಮಾಗ್ರಿ  ವಿತರಿಸಲಾಯಿತು. 

ಮದ್ಯ ವ್ಯಸನಿಗಳಾದಿರಿ : ಜನಜಾಗೃತಿ ವೇದಿಕೆ ಮನವಿ

ಜಿ. ಆನಂದಕುಮಾರ್ 
ಭದ್ರಾವತಿ: ರಾಜ್ಯದಲ್ಲಿ ಕಳೆದ ಸುಮಾರು ೪೦ ದಿನಗಳಿಂದ ಮದ್ಯ ಮಾರಾಟವಿಲ್ಲದ ಕಾರಣ ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ದಿನ ಕಳೆದಿವೆ. ಇದೀಗ ಪುನಃ ಮದ್ಯ ಮಾರಾಟ ಆರಂಭವಾಗಿದ್ದು, ನೆಮ್ಮದಿ ಕಂಡಿದ್ದ ಕುಟುಂಬಗಳಲ್ಲಿ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಪುನಃ ಮದ್ಯ ವ್ಯಸನಿಗಳಾಗದಂತೆ ಎಚ್ಚರ ವಹಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಿ ಎಂದು ಅಖಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಜಿ. ಆನಂದಕುಮಾರ್ ಮನವಿ ಮಾಡಿದ್ದಾರೆ.
ಸುಮಾರು ೪೦ ದಿನಗಳ ವರೆಗೆ ಮದ್ಯ ಮಾರಾಟವಿಲ್ಲದ ಕಾರಣ ಕುಟುಂಬದಲ್ಲಿ ನೆಮ್ಮದಿ ಲಭಿಸಿದೆ ಎಂಬುದು ಶೇ.೮೯ರಷ್ಟು ಜನರ ಅಭಿಪ್ರಾಯವಾಗಿದೆ. ಕುಟುಂಬದಲ್ಲಿ ಆರೋಗ್ಯ ಸುಧಾರಿಸಿದೆ, ಖರ್ಚು ಕಡಿಮೆಯಾಗಿದೆ, ಯಾವುದೇ ಸಮಸ್ಯೆ ಎದುರಾಗಿಲ್ಲ. ಈ ನಡುವೆ ಪುನಃ ಮದ್ಯ  ಮಾರಾಟ ಆರಂಭಗೊಂಡಿರುವುದು ದುರಾದುಷ್ಟಕರ ಬೆಳವಣಿಗೆಯಾಗಿದೆ. ಶಾಶ್ವತವಾಗಿ ಮದ್ಯಪಾನದಿಂದ ದೂರು ಉಳಿಯುವ ದೃಢ ಸಂಕಲ್ಪ ಕೈಗೊಳ್ಳಬೇಕಾಗಿದೆ. ಮದ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಇದು ಮಹಾತ್ಮಗಾಂಧಿ ಅವರ ಕನಸು ಸಹ ಆಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶಯ ಸಹ ಆಗಿದೆ. ಈ ಹಿನ್ನಲೆಯಲ್ಲಿ ಪುನಃ ಮದ್ಯ ವ್ಯಸನಿಗಳಾಗಿದಿರಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Wednesday, May 6, 2020

ತುಂಬಿದ ಸಿಲಿಂಡರ್ ಸ್ಪೋಟ

ಭದ್ರಾವತಿ ತುಂಬಿದ ಅಡುಗೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಬಿ.ಎಚ್ ರಸ್ತೆ ವೈಶಾಲಿ ಹೋಟೆಲ್ ಹಿಂಭಾಗ ಬುಧವಾರ ಸಂಜೆ ನಡೆದಿದೆ. 
ಭದ್ರಾವತಿ: ತುಂಬಿದ ಅಡುಗೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಬಿ.ಎಚ್ ರಸ್ತೆ ವೈಶಾಲಿ ಹೋಟೆಲ್ ಹಿಂಭಾಗ ಬುಧವಾರ ಸಂಜೆ ನಡೆದಿದೆ.
ನೂರುಲ್ಲಾ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು,  ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡದಿದೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಗೋಡೆ ಹಾಗೂ ಮೇಲ್ಛಾವಣಿ ಜಖಂಗೊಂಡಿದೆ.


ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಅಶೋಕ್‌ಕುಮಾರ್, ವಿನೂತನ್, ಹರೀಶ್, ಸುರೇಶ್‌ಚಾರ್ ಅವರನ್ನೊಳಗೊಂಡ ತಂಡ ಆಗಮಿಸಿ ಯಾವುದೇ ದುರ್ಘಟನೆ ನಡೆಯದಂತೆ ಎಚ್ಚರ ವಹಿಸಿತು.  ಪೊಲೀಸ್ ನಗರ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.