ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ಖಂಡಿಸಿ ಮಂಗಳವಾರ ಆಡಳಿತ ಮಂಡಳಿ ವಿರುದ್ಧ ಕೆಲವು ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿ, ಮೇ. ೨೦: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ಖಂಡಿಸಿ ಮಂಗಳವಾರ ಆಡಳಿತ ಮಂಡಳಿ ವಿರುದ್ಧ ಕೆಲವು ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾಸಂಸ್ಥೆಗೆ ಆಗಮಿಸಿದ್ದ ಸಿ.ಎಸ್ ಷಡಾಕ್ಷರಿ ಸಿಬ್ಬಂದಿಗಳು ಹಾಗೂ ಪೋಷಕರ ದೂರುಗಳನ್ನು ಸ್ವೀಕಾರ ಮಾಡಿ ಆಡಳಿತ ಮಂಡಳಿಯ ಕಾರ್ಯ ವೈಖರಿ ಹಾಗೂ ಲೋಪದೋಷಗಳನ್ನು ಪರಿಶೀಲಿಸಿದರು.ಶಿಕ್ಷಕರ ಸಂಘದ ಪ್ರಮುಖರಾದ ಕೂಬಾನಾಯ್ಕ, ಯು. ಮಹಾದೇವಪ್ಪ, ಬಸವಂತರಾವ್ ದಾಳೆ, ಲೋಹಿತ್, ಧನಂಜಯ ಸೇರಿದಂತೆ ಇನ್ನಿತರ ನೇತೃತ್ವದಲ್ಲಿ ಕೆಲವು ಸರ್ಕಾರಿ ನೌಕರರು, ಶಿಕ್ಷಕರು ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿ ಈ ಹಿಂದೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಅನ್ವರ್ ಕಾಲೋನಿಯಲ್ಲಿ ಸರ್ವೆ ನಂ. ೫೮/೬ರ ೩ ಎಕರೆ ಜಮೀನನ್ನು ವಿದ್ಯಾಸಂಸ್ಥೆ ಖರೀದಿಸಿದ್ದು, ಇದೀಗ ಅಧಿಕ ಮೌಲ್ಯದ ಜಮೀನನ್ನು ಆಡಳಿತ ಮಂಡಳಿ ಅಕ್ರಮವಾಗಿ ಕಡಿಮೆ ಬೆಲೆಗೆ ಪರಭಾರೆ ಮಾಡಿದೆ. ತಕ್ಷಣ ಈ ಜಮೀನನ್ನು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿ.ಎಸ್ ಷಡಾಕ್ಷರಿ ಯಾವುದೇ ಕಾರಣಕ್ಕೂ ಜಮೀನನ್ನು ಬೇರೆಯವರಿಗೆ ಪರಭಾರೆ ಮಾಡಲು ಬಿಡುವುದಿಲ್ಲ. ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದ ತಾಲೂಕು ಶಾಖೆ ಅಧ್ಯಕ್ಷ, ವಿದ್ಯಾಸಂಸ್ಥೆ ಪದನಿಮಿತ್ತ ಛೇರ್‍ಮನ್ ಎನ್. ಕೃಷ್ಣಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.