ಜನವಸತಿ ಪ್ರದೇಶ, ಸ್ವಂತ ಕಟ್ಟಡವಿಲ್ಲ
ಭದ್ರಾವತಿ, ಜೂ. ೨೨: ಕೊರೋನಾ ವೈರಸ್ ಹಿನ್ನಲೆಯಲ್ಲಿ ಅನಾರೋಗ್ಯಕ್ಕೆ ಒಳಗಾಗದವರಿಗೆ ಚಿಕಿತ್ಸೆ ನೀಡಲು ಸರ್ಕಾರ ನಗರದ ೪ ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದೆ.
ಇದುವರೆಗೂ ಸರ್ಕಾರವೇ ಸರ್ಕಾರಿ ಕೋವಿಡ್-೧೯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪತ್ಯೇಕವಾಗಿ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದ್ದು, ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ.
ಗಾಂಧಿನಗರದ ಭದ್ರಾ ನರ್ಸಿಂಗ್ ಹೋಂ, ದೂ. ೦೮೨೮೨-೨೬೬೪೮೩, ತರೀಕೆರೆ ರಸ್ತೆಯಲ್ಲಿರುವ ನಯನ ಆಸ್ಪತ್ರೆ, ಮೊ. ೯೪೪೮೮೮೪೭೭೪, ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದ ಸಮೀಪದಲ್ಲಿರುವ ದುರ್ಗಾ ನರ್ಸಿಂಗ್ ಹೋಂ, ಮೊ. ೯೪೪೯೮೩೬೩೫೨ ಮತ್ತು ತಾಲೂಕು ಕಛೇರಿ ರಸ್ತೆಯಲ್ಲಿರುವ ನಿರ್ಮಲಾ ಆಸ್ಪತ್ರೆ, ಮೊ. ೯೪೪೯೫೫೧೨೭೫ ಕೋವಿಡ್-೧೯ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತಹಸೀಲ್ದಾರ್ ಶಿವಕುಮಾರ್, ನಗರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-೧೯ ಚಿಕಿತ್ಸೆ ನೀಡಲು ಅನುಮೋದಿಸಿರುವ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಯಾವುದೇ ಸಭೆಯಲ್ಲೂ ಸಹ ಚರ್ಚೆಯಾಗಿಲ್ಲ. ಆಸ್ಪತ್ರೆಗಳಿಗೆ ಅನುಮೋದನೆ ನೀಡುವ ವಿಚಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಯಾವ ಮಾನದಂಡಗಳ ಆಧಾರದ ಮೇಲೆ ನೀಡಿದೆ ಎಂಬ ಮಾಹಿತಿ ನಮಗೆ ಇಲ್ಲ. ಈ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಶಿಫಾರಸ್ಸು ನಾವು ಮಾಡಿಲ್ಲ. ಹೆಚ್ಚಿನ ಮಾಹಿತಿ ಮೇಲಾಧಿಕಾರಿಗಳಿಂದ ಕೇಳಿ ತಿಳಿಯಬೇಕಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವುದೇ?
ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಸುಲಿಗೆಗೆ ಮುಂದಾಗಬಾರದು. ಆದರೆ ಬಹುತೇಕ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುತ್ತಿವೆ. ಪ್ರತಿಯೊಂದಕ್ಕೂ ಲೆಕ್ಕಾಚಾರ ಹಾಕುತ್ತಿವೆ. ಅಲ್ಲದೆ ನಗರದಲ್ಲಿ ಅನುಮೋದನೆ ನೀಡಲಾಗಿರುವ ೪ ಖಾಸಗಿ ಆಸ್ಪತ್ರೆಗಳು ಸಹ ಪತ್ಯೇಕ ಕಟ್ಟಡವನ್ನು ಹೊಂದಿಲ್ಲ. ಎಲ್ಲಾ ರೋಗಿಗಳಿಗೂ ಒಂದೇ ಕಟ್ಟಡದಲ್ಲಿ ಚಿಕಿತ್ಸೆ ನೀಡುತ್ತಿವೆ. ಕೋವಿಡ್-೧೯ ರೋಗಿಗಳಿಗೆ ಪ್ರತ್ಯೇಕ ಕಟ್ಟಡ ಬೇಕೇ ಬೇಕು. ಇಲ್ಲವಾದಲ್ಲಿ ಆಸ್ಪತ್ರೆಗೆ ಬರುವ ಇತರೆ ರೋಗಿಗಳಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕೇವಲ ಕೋವಿಡ್-೧೯ ಚಿಕಿತ್ಸೆ ಮಾತ್ರ ನೀಡಬೇಕು. ಉಳಿದ ಕಾಯಿಲೆಗಳಿಗೆ ಬೇರೆಡೆಗೆ ಕಳುಹಿಸಿ ಕೊಡಬೇಕಾಗಿದೆ. ಅಲ್ಲದೆ ಈ ಆಸ್ಪತ್ರೆಗಳು ಜನವಸತಿ ಪ್ರದೇಶಗಳಲ್ಲಿದ್ದು, ಸಮುದಾಯಕ್ಕೆ ವೈರಸ್ ಹರಡುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಊರಿನ ಹೊರಭಾಗಗಳಲ್ಲಿ ಇರುವ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-೧೯ ಚಿಕಿತ್ಸೆಗೆ ಅನುಮೋದನೆ ನೀಡುವುದು ಸೂಕ್ತವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.