Friday, July 3, 2020

ಉಕ್ಕಿನ ನಗರದಲ್ಲಿ ಒಟ್ಟು ೨೩ ಸೋಂಕಿತರು, ಒಂದೇ ದಿನ ೪ ಪ್ರಕರಣ ಪತ್ತೆ

ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಭದ್ರಾವತಿ, ಜು. ೩: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ. ಇದುವರೆಗೂ ಒಟ್ಟು ೨೩ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ ಒಂದೇ ದಿನ ೪ ಪ್ರಕರಣಗಳು ಪತ್ತೆಯಾಗಿವೆ. 
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಆರಂಭದಿಂದಲೂ ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದರೂ ಸಹ ಇದೀಗ ಸೋಂಕಿನ ಪ್ರಕರಣ ೨೩ಕ್ಕೆ ತಲುಪಿದೆ. ೩-೪ ದಿನಗಳ ಹಿಂದೆ ಒಂದೇ ದಿನ ೮ ಸೋಂಕಿನ ಪ್ರಕರಣ ದಾಖಲಾಗಿದ್ದವು. 
ಶುಕ್ರವಾರ ಪುನಃ ೪ ಪ್ರಕರಣ ದಾಖಲಾಗಿವೆ. ಹೊಳೆಹೊನ್ನೂರಿನಲ್ಲಿ ೧೯ ವರ್ಷದ ಯುವಕನಿಗೆ, ವಿಶ್ವೇಶ್ವರಯ್ಯ ನಗರದಲ್ಲಿ ಬೆಂಗಳೂರಿನಿಂದ ಬಂದಿರುವ ೨೨ ಹಾಗೂ ೨೦ ವರ್ಷದ ಇಬ್ಬರು ಸಹೋದರಿಯರಿಗೆ ಮತ್ತು ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಬಂದಿರುವ ೨೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ನಗರಸಭೆ ಆಡಳಿತ ಸೋಂಕು ಪತ್ತೆಯಾಗಿರುವ ಸ್ಥಳದ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಮಾಡಿಸಿ ಕಂಟೈನ್‌ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್‌ಗೆ ಮುಂದಾಗಿದೆ. 
ಸುರಗಿತೋಪು ಸೀಲ್‌ಡೌನ್: 
ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕೊಳಚೆ ಪ್ರದೇಶವಾಗಿರುವ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. 
ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್: 
ತಾಲೂಕಿನ ಕೂಡ್ಲಿಗೆರೆ ನಾಡಕಛೇರಿ ಅಧಿಕಾರಿಯೊಬ್ಬರ ಪತ್ನಿಗೆ ಸೋಂಕು ತಗುಲಿದೆ ಎನ್ನುವ ಮಾಹಿತಿ ಗುರುವಾರ ಎಲ್ಲೆಡೆ ಹರದಾಡುತ್ತಿತ್ತು. ಈ ನಡುವೆ ನಾಡಕಛೇರಿ ಅಧಿಕಾರಿ ನಗರದ ತಾಲೂಕು ಕಛೇರಿಗೂ ಭೇಟಿ ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ನಗರಸಭೆವತಿಯಿಂದ ತಾಲೂಕು ಕಛೇರಿಗೆ ಸ್ಯಾನಿಟೈಸರ್ ಮಾಡಿಸಲಾಗಿದೆ. 
ಕಳೆದ ೪-೫ ದಿನಗಳ ಹಿಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲು ಆಶಾ ಕಾರ್ಯಕರ್ತೆಯರು ಹೊಸಮನೆ ಎನ್‌ಎಂಸಿ ರಸ್ತೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಗೆ ಭೇಟಿ ನೀಡಿದ್ದರು. ಈ ಪೈಕಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಹರಡಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶಾಸಕರ ಗೃಹ ಕಛೇರಿಗೂ ನಗರಸಭೆ ವತಿಯಿಂದ ಸ್ಯಾನಿಟೈಸರ್ ಮಾಡಿಸಲಾಗಿದೆ. 

Thursday, July 2, 2020

ಎಂಪಿಎಂ ಆಡಳಿತ ಮಂಡಳಿಯಿಂದ ತಾರತಮ್ಯ ದೂರು

ಸೇವಾ ಭದ್ರತೆ ನೀಡಿ, ಪುನಃ ಕಾರ್ಖಾನೆ ಆರಂಭಿಸಿ ಸಚಿವರಿಗೆ ಮನವಿ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಗೆ ಭೇಟಿ ನೀಡಿದ  ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಿವಿಧ ಕಾರ್ಮಿಕ ಸಂಘಟನೆಗಳಿಂದ, ಪಕ್ಷದ ಮುಖಂಡರಿಂದ ಮನವಿ ಹಾಗೂ ದೂರುಗಳನ್ನು ಸಲ್ಲಿಸಲಾಯಿತು.
ಭದ್ರಾವತಿ, ಜು. ೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರ ಜಾರಿಗೊಳಿಸಿದ ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಗುತ್ತಿಗೆ ಕಾರ್ಮಿಕರಿಗೆ ಕಾರ್ಖಾನೆ ಆಡಳಿತ ಮಂಡಳಿ ತಾರತಮ್ಯ ವೆಸಗಿದೆ ಎಂದು ಆರೋಪಿಸಿ ಮೈಸೂರು ಕಾಗದ ಕಾರ್ಖಾನೆ ಮಜ್ದೂರು ಸಂಘ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್‌ಶೆಟ್ಟರ್‌ಗೆ ದೂರು ಸಲ್ಲಿಸಿದೆ.
ಬುಧವಾರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ವಿಎಸ್‌ಎಸ್ ಯೋಜನೆ ಜಾರಿಗೊಳಿಸಿ ಸರ್ಕಾರ ತೀರ್ಮಾನಿಸಿರುವ ಆದೇಶಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಕಾಯಂ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯ ವೆಸಗಿದೆ. ಸರ್ಕಾರ ನ.೩೦, ೨೦೧೭ರಂತೆ ೧೦೩೪ ಗುತ್ತಿಗೆ ಕಾರ್ಮಿಕರನ್ನು ವಿಎಸ್‌ಎಸ್ ಯೋಜನೆಗೆ ಒಳಪಡಿಸುವಂತೆ ಸೂಚಿಸಿದೆ ಆದರೆ ಆಡಳಿತ ಮಂಡಳಿ ಯಾರನ್ನು ಸಹ ಪರಿಗಣಿಸಿರುವುದಿಲ್ಲ. ೧೦೩೪ ಮಂದಿಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ಮೃತ ನಿಧಿ ಅಥವಾ ವಿಎಸ್‌ಎಸ್ ಸೌಲಭ್ಯ ಯಾವುದನ್ನು ಸಹ ಕೊಟ್ಟಿರುವುದಿಲ್ಲ.
ಸರ್ಕಾರ ನ.೩೦, ೨೦೧೭ರಂತೆ ಅಂತಿಮ ಸೇವಾ ಅವಧಿ ನಿಗದಿಗೊಳಿಸಿದೆ. ಆದರೆ ಆಡಳಿತ ಮಂಡಳಿ ೨೦೧೫/೨೦೧೬/೨೦೧೭ರ ಸೇವಾ ಅವಧಿ ಮೊಟಕುಗೊಳಿಸಿದೆ. ೧೬೩/೬೬ರಂತೆ ಕನಿಷ್ಠ ವೇತನದ ತುಟ್ಟಿಭತ್ಯೆ ನೀಡುವ ಬದಲು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಲಾಗಿದೆ. ೪೫ ದಿನಗಳ ವೇತನ ಬದಲಾಗಿ ಕೆಲವು ಕಾರ್ಮಿಕರಿಗೆ ೨೨ ೧/೨ ದಿನ ವೇತನ ನೀಡಲಾಗಿದೆ. ೨೦೧೧ ರಿಂದ ೨೦೧೫ರ ಉತ್ಪಾದನೆ ಅವಧಿಯ ಹೆಚ್ಚುವರಿ ಕೆಲಸದ ವ್ಯತ್ಯಾಸ ಹಣ ಕೊಟ್ಟಿರುವುದಿಲ್ಲ. ನ.೩೦, ೨೦೧೭ರಂತೆ ಸೇವಾ ಅವಧಿ ಪರಿಗಣಿಸಿ ಗ್ರಾಚ್ಯುಟಿ ನೀಡುವಂತೆ ಸರ್ಕಾರ ಸೂಚಿಸಿದೆ. ಆದರೆ ಆಡಳಿತ ೨೦೧೫, ೨೦೧೬ ಮತ್ತು ೨೦೧೭ರಂತೆ ಮೊಟಕುಗೊಳಿಸಿದೆ ಎಂದು ಆರೋಪಿಸಲಾಗಿದೆ.
  ಸೇವಾ ಭದ್ರತೆ ನೀಡಿ :
  ಕಾರ್ಖಾನೆಯಲ್ಲಿ ಕನಿಷ್ಠ ೧೦ ವರ್ಷ ಸೇವೆ ಸಲ್ಲಿಸದ ಮತ್ತು ೧೦ ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಹೊಂದಿರುವ ಉದ್ಯೋಗಿಗಳಿಗೆ ಸೇವಾ ಭದ್ರತೆ ಅಥವಾ ಎರವಲು ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಸಚಿವ ಜಗದೀಶ್‌ಶೆಟ್ಟರ್‌ಗೆ ಒತ್ತಾಯಿಸಿದೆ.
ಪ್ರಸ್ತುತ ಕಾರ್ಖಾನೆಯಲ್ಲಿರುವ ೨೨೦ ಉದ್ಯೋಗಿಗಳ ಪೈಕಿ ಸುಮಾರು ೧೦ ರಿಂದ ೨೦ ವರ್ಷಗಳ ಸೇವಾವಧಿ ಬಾಕಿ ಇರುವ ಎಸ್.ಸಿ/ಎಸ್.ಟಿ ಬ್ಯಾಕ್‌ಲಾಗ್ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅತ್ಯಂತ ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ವಿಆರ್‌ಎಸ್ ಯೋಜನೆಯ ಸೌಲಭ್ಯದಿಂದಲೂ ವಂಚಿತರಾಗಿದ್ದು, ಅಲ್ಲದೆ ಕ್ಲೋಸರ್ ಯೋಜನೆಗೆ ಒಳಪಟ್ಟಲ್ಲಿ ಅತ್ಯಂತ ಕಡಿಮೆ ಅಂದರೆ ಸುಮಾರು ೬೦ ರಿಂದ ೭೦ ಸಾವಿರಗಳು ಮಾತ್ರ ಸಿಗಲಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಸ್ತುತ ೧೧೭ ಮಂದಿಯನ್ನು ವಿವಿಧ ನಿಗಮ/ಮಂಡಳಿಗಳಿಗೆ ಎರವಲು ಸೇವೆ ಮೇಲೆ ಕಳುಹಿಸಿದೆ. ಉಳಿದ ೧೦೩ ಮಂದಿಯನ್ನು ನಿಯೋಜನೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ೨೨೦ ಉದ್ಯೋಗಿಗಳನ್ನು ವಿವಿಧ ನಿಗಮ/ಮಂಡಳಿಗಳಲ್ಲಿ ನಿಯೋಜಿಸಿ ಅವರ ಸೇವೆ ಪೂರ್ಣಗೊಳ್ಳುವವರೆಗೆ ಸೇವಾ ಭದ್ರತೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದೆ.
ಪುನಃ ಕಾರ್ಖಾನೆ ಆರಂಭಿಸಿ:
೨೦೧೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಸಿರು ಪೀಠ ನ್ಯಾಯಾಲಯದ ಆದೇಶವನ್ನು ನೆಪವಾಗಿಟ್ಟುಕೊಂಡು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ಎಂಪಿಎಂ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ನಗರದ ಆರ್ಥಿಕ ಸ್ಥಿತಿಯನ್ನು ಕುಗ್ಗಿಸಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ತಕ್ಷಣ ಪುನಃ ಕಾರ್ಖಾನೆ ಆರಂಭಿಸುವಂತೆ ಆಮ್ ಆದ್ಮಿ ಪಾರ್ಟಿ ಸಚಿವರಿಗೆ ಆಗ್ರಹಿಸಿದೆ.
ಪುನಃ ಕಾರ್ಖಾನೆಯನ್ನು ಆರಂಭಿಸುವ ಜೊತೆಗೆ ನಗರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡಬೇಕು. ನಗರದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕೆಂದು ಒತ್ತಾಯಿಸಿದೆ.

ವೈದ್ಯರ ಸೇವೆ ಎಂದಿಗೂ ಅವಿಸ್ಮರಣೀಯ : ಎನ್. ಕೃಷ್ಣಪ್ಪ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜು. ೨: ಜಗತ್ತಿನಾದ್ಯಂತ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂದರ್ಭದಲ್ಲಿ ವೈದ್ಯರ ಸೇವೆ ಅವಿಸ್ಮರಣೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಕೃಷ್ಣಪ್ಪ ಹೇಳಿದರು. 
ಅವರು ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
ಕೊರೋನಾ ವೈರಸ್ ನಿರ್ಮೂಲನೆಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ. ತಾಲೂಕಿನಲ್ಲಿ ವೈದ್ಯರು ಯಾವುದೇ ಭೀತಿ ಇಲ್ಲದೆ ಪ್ರಾಮಾಣಿಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾಸಂಸ್ಥೆ ವತಿಯಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಮಾತನಾಡಿ, ಜನರು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಂಡಲ್ಲಿ ಮಾತ್ರ ಕೊರೋನಾ ವೈರಸ್ ನಿಮೂರ್ಲನೆ ಸಾಧ್ಯ. ಕೊರೋನಾ ವೈರಸ್‌ಗೆ ಯಾರು ಸಹ ಭೀತಿಪಡುವ ಅಗತ್ಯವಿಲ್ಲ. ಎಲ್ಲರೂ ಜಾಗ್ರತೆಯಿಂದ ನಡೆದುಕೊಳ್ಳಬೇಕೆಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್, ಕಿರಿಯ ಆರೋಗ್ಯ ಸಹಾಯಕ ಎಚ್.ಎಂ ನಾಗರಾಜಪ್ಪ, ಶ್ರೀಕಾಂತ್, ಎಸ್.ಜೆ. ಮಹೇಶ್ವರ, ಪಿ. ಕೃಷ್ಣ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಕೆ ಚಂದ್ರಪ್ಪ, ಉಪಾಧ್ಯಕ್ಷ ಅಶೋಕ್‌ರಾವ್, ಖಜಾಂಚಿ ಎಸ್.ಕೆ ಮೋಹನ್, ರಂಗನಾಥ ಪ್ರಸಾದ್, ಎಂ.ಡಿ ಮಲ್ಲಿಕಾರ್ಜುನ, ಎಂ.ಎಸ್ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, July 1, 2020

ಎಂಪಿಎಂ ಪುನಶ್ಚೇತನ ಖಚಿತ : ಜಗದೀಶ್ ಶೆಟ್ಟರ್

ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಬುಧವಾರ ಭೇಟಿ ನೀಡಿದ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸನ್ಮಾನಿಸಿ ಅಭಿನಂದಿಸಿದರು. 
ಭದ್ರಾವತಿ, ಜು. ೧: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದು, ಕಾರ್ಖಾನೆಯನ್ನು ಆರಂಭಿಸಲು ಹಲವು ದಿಕ್ಕಿನಲ್ಲಿ ಚರ್ಚಿಸಲಾಗುತ್ತಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. 
ಅವರು ಬುಧವಾರ ಕಾರ್ಖಾನೆಗೆ ಭೇಟಿ ನೀಡಿ ಎಂಪಿಎಂ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚಲು ಬಿಡುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ಮುಖ್ಯಮಂತ್ರಿಗಳು ನೀಡಿದ್ದಾರೆ. ದೇಶ ಹಾಗೂ ರಾಜ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಬೃಹತ್ ಕೈಗಾರಿಕೆಯೊಂದು ಪ್ರಸ್ತುತ ಸ್ಥಗಿತಗೊಂಡಿರುವುದು ನೋವಿನ ವಿಚಾರವಾಗಿದೆ. ಈ ಕಾರ್ಖಾನೆಯನ್ನು ಹೇಗಾದರೂ ಮಾಡಿ ಪುನಶ್ಚೇತನಗೊಳಿಸುವ ಮೂಲಕ ಇಲ್ಲಿನ ನಿರುದ್ಯೋಗಿಗಳಿಗೆ, ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕಾಗಿದೆ ಎಂದರು. 
ಸಚಿವರಾಗಿ ಅಧಿಕಾರ ವಹಿಸಗೊಂಡ ನಂತರ ಆರಂಭದಲ್ಲಿಯೇ ಕಾರ್ಖಾನೆಗೆ ಭೇಟಿ ನೀಡಬೇಕಾಗಿತ್ತು. ಆದರೆ ಕೊರೋನಾ ಹಿನ್ನಲೆಯಲ್ಲಿ ಬರಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿ ಈಗಾಗಲೇ ಹಲವಾರು ಬಾರಿ ಸಭೆಗಳನ್ನು ನಡೆಸಿ ಕಾರ್ಖಾನೆಯ ಸ್ಥಿತಿಗತಿಗಳನ್ನು ಅರಿತುಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಖುದ್ದಾಗಿ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಖಾನೆಗೆ ಈ ಹಿಂದೆ ಅರಣ್ಯ ಇಲಾಖೆಯಿಂದ ಪಡೆಯಲಾಗಿದ್ದ ಅರಣ್ಯ ಭೂಮಿಯನ್ನು ಪುನಃ ಕಾರ್ಖಾನೆಗೆ ಉಳಿಸಿಕೊಂಡಿದ್ದಾರೆ. ಇದು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮೊದಲ ಪ್ರಯತ್ನವಾಗಿದೆ. ಈಗಾಗಲೇ ಕಾರ್ಖಾನೆಗೆ ಹಲವು ಖಾಸಗಿ ಕಂಪನಿಗಳು ಭೇಟಿ ಪರಿಶೀಲನೆ ನಡೆಸಿವೆ. ಸರ್ಕಾರ ಸಹ ಮಾತುಕತೆ ನಡೆಸಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ವಹಿಸುವುದು ಅಥವಾ ಗುತ್ತಿಗೆ ಆಧಾರದಲ್ಲಿ ನೀಡುವುದು ಸೇರಿದಂತೆ ಇನ್ನಿತರ ವಿಚಾರಗಳ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 
ಆರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪ್ರಸ್ತುತ ಕಾರ್ಖಾನೆ ವಿವಿಧ ಬ್ಯಾಂಕ್‌ಗಳಲ್ಲಿ ಹೊಂದಿರುವ ಸಾಲ, ಕಚ್ಛಾ ಸಾಮಗ್ರಿಗಳು, ಕಾರ್ಮಿಕರ ಸ್ಥಿತಿಗಳು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. 
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಹೇಗಾದರೂ ಮಾಡಿ ಕಾರ್ಖಾನೆಯನ್ನು ಪುನಃ ಆರಂಭಿಸಿ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. 
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ ಶೆಟ್ಟಣ್ಣನವರ್, ಮುಖಂಡರಾದ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ ಸೇರಿದಂತೆ ಇನ್ನಿತರರು ಮಾತನಾಡಿದರು. 
ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಜಿಲ್ಲಾಧಿಕಾರಿ ಶಿವಕುಮಾರ್, ಕರ್ನಾಟಕ ರಾಜ್ಯ ಆರ್ಯವೈಶ್ಯ ನಿಗಮ ಮಂಡಳಿ ಅಧ್ಯಕ್ಷ ಡಿ.ಎಸ್ ಅರುಣ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Tuesday, June 30, 2020

ಉಪ ಕುಲಸಚಿವೆ ಡಿ.ವಿ ಗಾಯತ್ರಿ ಅಮಾನತು

ಅಮಾನತು ಆದೇಶ ಪತ್ರ 
ಭದ್ರಾವತಿ, ಜೂ. ೩೦: ಕುವೆಂಪು ವಿಶ್ವ ವಿದ್ಯಾಲಯ ದಾಸ್ತಾನು ಮತ್ತು ಖರೀದಿ ವಿಭಾಗದ ಉಪ ಕುಲಸಚಿವೆ ಡಿ.ವಿ ಗಾಯತ್ರಿಯವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ನೀಡಿ ಸರ್ಕಾರಿ ಉದ್ಯೋಗ ಪಡೆದ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಸೇವೆಯಿಂದ ಅಮಾನುಗೊಳಿಸಿ ಆದೇಶಿಸಲಾಗಿದೆ. 
ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕವಾದಂತಹ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದು, ಈ ಸಂಬಂಧ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ  ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇದರನ್ವಯ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್  ದಾಖಲಾಗಿದೆ. ವಿಶ್ವವಿದ್ಯಾಲಯದ ನಿಯಮಾನುಸಾರ ಇಲಾಖಾ ವಿಚಾರಣೆ ಕಾಯ್ದಿರಿಸಿ ಕುಲಪತಿಗಳ ಆದೇಶದ ಮೇರೆಗೆ ಅಮಾನುಗೊಳಿಸಲಾಗಿದೆ ಎಂದು ಕುಲಸಚಿವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. 
  ಕಳೆದ ೩ ದಿನಗಳ ಹಿಂದೆ ಈ ಸಂಬಂಧ ಜೈಭೀಮ್ ಕನ್ನಡ ಜಾಗೃತಿ ವೇದಿಕೆ ಮತ್ತು ಎಸ್‌ಸಿ/ಎಸ್‌ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಕುಲಪತಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿತ್ತು.

ದನದ ದೊಡ್ಡಿ ಜಾಗ ಖಾಸಗಿಯವರಿಗೆ ನೀಡದಿರಿ : ಬಿ.ಎನ್ ರಾಜು

ಕೋಟ್ಯಾಂತರ ರು. ಮೌಲ್ಯದ ಜಾಗ ಸದ್ಬಳಕೆಯಾಗಲಿ 

ಭದ್ರಾವತಿ ನಗರಸಭೆಗೆ ಸೇರಿದ ನಗರದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗದಲ್ಲಿರುವ ದನದೊಡ್ಡಿ ಜಾಗವನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡದಿರುವಂತೆ ಮಾನಗ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. 
ಭದ್ರಾವತಿ, ಜೂ. ೩೦: ನಗರದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗದಲ್ಲಿರುವ ನಗರಸಭೆಗೆ ಸೇರಿದ ದನದ ದೊಡ್ಡಿ ಜಾಗವನ್ನು ಯಾವುದೇ ಕಾನಕ್ಕೂ ಖಾಸಗಿಯವರಿಗೆ ನೀಡಬಾರದೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಆಗ್ರಹಿಸಿದೆ. 
ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಈ ಹಿಂದೆ ದನದ ದೊಡ್ಡಿಯಾಗಿದ್ದ ಜಾಗ ಅನೇಕ ವರ್ಷಗಳಿಂದಲೂ ವಿವಾದದಿಂದ ಕೂಡಿದೆ. ನಗರಸಭೆ ಖಾತೆ ನಂ. ೧೭೪/೧೭೪ರಲ್ಲಿ ಜಾಗದ ಅಳತೆ ೨೫*೮೦ ಅಡಿಗಳಾಗಿದ್ದು, ಈ ಜಾಗವನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದವರಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಮಂಜೂರಾತಿಗಾಗಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು. 
ಶಾಸಕರು ಸ್ವಜಾತಿಯ ಪ್ರೀತಿಯಿಂದ ಪ್ರಸ್ತಾವನೆ ಸಲ್ಲಿಸಿರುವ ಕ್ರಮವನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕೋಟ್ಯಾಂತರ ರು. ಬೆಲೆ ಬಾಳುವ ಜಾಗವನ್ನು ನಗರಸಭೆಗೆ ಆದಾಯ ಬರುವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಅಥವಾ ಸರ್ಕಾರದ ವಿವಿಧ ಇಲಾಖೆಗಳ ಕಟ್ಟಡ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದೆಂದು ಆಗ್ರಹಿಸಿದರು. 
ಜಾಗವನ್ನು ಖಾಸಗಿಯವರಿಗೆ ನೀಡುವ ಸಂಬಂಧ ಮೇ.೨೯ರಂದು ತಿಂಗಳೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಮಿತಿಯು ಈ ಸಂಬಂಧ ತಕರಾರು ಸಲ್ಲಿಸಲಿದೆ. ಅಲ್ಲದೆ ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದರು. 
ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷ ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್, ಬ್ರಹ್ಮಲಿಂಗಯ್ಯ, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರಿಂದ ಮನವಿ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೩೦: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಮತ್ತು ಗೌರವ ಧನ ಎರಡೂ ಸೇರಿ ಮಾಸಿಕ ೧೨ ಸಾವಿರ ರು. ನೀಡುವುದು. ಆಗಾಗ ಎಲ್ಲಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ನಡೆಸಿ ಕೊರೋನಾ ವೈರಸ್ ಪ್ರಕರಣ ಕಂಡು ಬಂದಲ್ಲಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುವುದು. ಚಿಕಿತ್ಸೆ ಅವಧಿಯಲ್ಲಿ ಸಂಪೂರ್ಣ ಗೌರವ ಧನ ನೀಡುವುದು. ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿಗಳನ್ನು ಸಮರ್ಪಕವಾಗಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈಗಾಗಲೇ ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಯಾವುದೇ ಬೇಡಿಕೆ ಈಡೇರಿಲ್ಲ. ಈ ಹಿನ್ನಲೆಯಲ್ಲಿ ೭ ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ರೀತಿಯ ಪ್ರತಿಭಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಒಂದು ವೇಳೆ ಸಮಸ್ಯೆ ಪರಿಹರಿಸದಿದ್ದಲ್ಲಿ ಜು.೧೦ರಿಂದ ರಾಜ್ಯಾದ್ಯಂತ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಲಾಗಿದೆ.
ಜಿಲ್ಲಾಧ್ಯಕ್ಷೆ ರಾಜೇಶ್ವರಿ ನಂದೀಶ್, ತಾಲೂಕು ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ಆಶಾ, ಆರ್. ವಾಸಂತಿ, ಎನ್. ಭಾಗ್ಯ, ಎಚ್. ನೇತ್ರಾವತಿ, ಎನ್. ಕಮಲ, ಪಿ. ಶೃತಿ, ಎನ್. ಸೀಮಾ, ಎಸ್. ಗೀತಾಂಜಲಿ, ಹೇಮಾವತಿ, ಆರ್. ಮಂಜುಳ, ಸುಮಿತ್ರ ಬಾಯಿ, ಫಜಲುನ್ನಿಸಾ, ಎಸ್. ಮಮತ, ವಿ. ಅನಿತಾ, ಬಿ. ದೀಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.