ಪ್ರೊ. ಬಿ.ಜಿ ಚನ್ನಬಸಪ್ಪ
ಭದ್ರಾವತಿ, ಜು. ೫: ನಗರದ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಜಿ ಚನ್ನಬಸಪ್ಪ(೮೨) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಸಂಜೆ ಚನ್ನಗಿರಿ ಕಾಲೂಕಿನ ಬೊಮ್ಮೆನಹಳ್ಳಿ ಗ್ರಾಮದಲ್ಲಿ ನಡೆಯಿತು.
೧೯೬೪ರಲ್ಲಿ ಕುಡ್ಲೂರು ತರಳಬಾಳು ವಿದ್ಯಾಸಂಸ್ಥೆ ಸಿರಿಗೆರೆ ಶ್ರೀ ಮಹೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದು, ನಂತರ ನಗರದ ಸಿಲ್ವರ್ ಜ್ಯೂಬಿಲಿ ಪ್ರೌಢಶಾಲೆಯಲ್ಲಿ ೧೯೬೫ರಲ್ಲಿ ಸಹ ಶಿಕ್ಷಕರಾಗಿ ಸರ್ಕಾರಿ ವೃತ್ತಿಗೆ ಸೇರ್ಪಡೆಗೊಂಡರು. ೧೯೬೯ರ ವರೆಗೆ ಚಳ್ಳಕೆರೆ ತಾಲೂಕಿನ ಪುರಸಭಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ೧೯೭೧ ರಿಂದ ೧೯೭೫ರ ವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೭೬ರಿಂದ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದು, ಸುಮಾರು ೨೧ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಚನ್ನಬಸಪ್ಪ ಕೇವಲ ಪ್ರಾಧ್ಯಾಪಕ ಮಾತ್ರವಲ್ಲದೆ ಕ್ರೀಡಾ ಸಲಹೆಗಾರ, ತರಬೇತಿದಾರರಾಗಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಇವರು ತಮ್ಮ ೭೦ನೇ ವಯಸ್ಸಿನಲ್ಲಿ ಜೀವನ ಚರಿತ್ರೆ ಪುಸ್ತಕ ಹೊರತಂದಿದ್ದರು.
ಇವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಬಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಎನ್ ಲೋಹಿತೇಶ್ವರಪ್ಪ, ಬನಿ ಮಹಾದೇವಪ್ಪ, ಜಿ. ಸುರೇಶಯ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಬಸವೇಶ್ವರ ಹಾಗೂ ಭದ್ರಾ ವಿದ್ಯಾ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.