Tuesday, July 7, 2020

ಜು.೧೧ರಂದು ಪದಗ್ರಹಣ ಸಮಾರಂಭ

ಭದ್ರಾವತಿ, ಜು. ೭ : ಲಯನ್ಸ್ ಕ್ಲಬ್ ಶುಗರ್ ಟೌನ್  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ್ಯೂಟೌನ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ  ಜು.೧೧ರಂದು ಸಂಜೆ ೪ ಗಂಟೆಗೆ  ನಡೆಯಲಿದೆ.
    ನಿತ್ಯಾನಂದ ಪೈ ಅಧ್ಯಕ್ಷರಾಗಿ,   ತಮ್ಮೇಗೌಡ ಕಾರ್ಯದರ್ಶಿಯಾಗಿ, ಎಂ.ಸಿ ಯೋಗೇಶ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಡಿಜಿ ೨ರ ಗವರ್ನರ್  ಕೆ.ಸಿ ವೀರಭದ್ರಪ್ಪ ಪದಗ್ರಹಣ ನೆರವೇರಿಸಿ ಕೊಡಲಿದ್ದಾರೆ.  ಎಚ್.ಜಿ ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
 

ಜು.೧೦ರಿಂದ ಅನಿರ್ದಿಷ್ಟಾವಧಿ ಹೋರಾಟ

ಭದ್ರಾವತಿ, ಜು. ೭: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜು.೧೦ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ. 
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೨ ಸಾವಿರ ರು. ಗೌರವ ಧನ, ಕೋವಿಡ್-೧೯ರ ವಿರುದ್ಧ ಹೋರಾಟ ನಡೆಸಲು ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ೧ ವಾರದಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರಲಾಗಿದೆ. 

ರೋಗ ನಿರೋಧಕ ಶಕ್ತಿ ಹೊಂದಲು ಯೋಗ ಸಹಕಾರಿ : ಮಹೇಶ್ ಗುರೂಜೀ

ಭದ್ರಾವತಿ ಜನ್ನಾಪುರ ಬಬ್ಬೂರು ಕಮ್ಮೆ ವಿಪ್ರ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರು ವಂದನೆ ಕಾರ್ಯಕ್ರಮದಲ್ಲಿ ಯೋಗ ಗುರು ಮಹೇಶ್ ಗುರೂಜಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ, ಜು. ೭: ಪ್ರಸ್ತುತ ಎದುರಾಗಿರುವ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ನಮ್ಮ ದೇಹ ರೋಗ ನಿರೋಧಕ ಶಕ್ತಿ ಹೊಂದಲು ಯೋಗ ಸಹಕಾರಿಯಾಗಿದೆ ಎಂದು ಯೋಗ ಗುರು ಮಹೇಶ್ ಗುರೂಜೀ ತಿಳಿಸಿದರು. 
ಅವರು ಜನ್ನಾಪುರ ಬಬ್ಬೂರು ಕಮ್ಮೆ ವಿಪ್ರ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗುರು ವಂದನೆ ಸ್ವೀಕರಿಸಿ ಮಾತನಾಡಿದರು. 
ಪ್ರತಿದಿನ ಹೆಚ್ಚು ಪ್ರಾಣಾಯಾಮ ಮತ್ತು ಶಕ್ತಿ ಕ್ರಿಯೆಗಳನ್ನು ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು. 
ನಮ್ಮಲ್ಲಿನ ಅಂಧಕಾರ ತೊಡೆದು ಹಾಕುವವರು ಗುರು, ಸಂಕಷ್ಟಗಳಿಂದ ಮುಕ್ತಿಗೊಳಿಸುವವರು ಗುರು. ಎಲ್ಲರೂ ಗುರುವನ್ನು ಗೌರವಿಸಿ ಅವರ ತೋರಿಸಿಕೊಟ್ಟ ದಾರಿಯಲ್ಲಿ ಸಾಗಬೇಕೆಂದರು. 
ದಾಕ್ಷಾಯಿಣಿ, ಆರ್. ಲಕ್ಷ್ಮಿ, ಪುಷ್ಪ, ವಾಣಿ, ಲಕ್ಷ್ಮಿ, ಶೈಲಜ, ಕಲ್ಪನ, ಮುನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಾಗಮಣಿ ಸ್ವಾಗತಿಸಿದರು. ಭ್ಯಾಗ ಪ್ರಾರ್ಥಿಸಿದರು. 

ಕರ್ನಾಟಕ ಜನಸಂವಾದ ಸಮಾರೋಪ ವೀಕ್ಷಣೆಗೆ ಅವಕಾಶ : ಬಿ.ಎಲ್ ಸಂತೋಷ್ ಭಾಷಣಕ್ಕೆ ಮೆಚ್ಚುಗೆ

ಭದ್ರಾವತಿ ನಗರಸಭೆ ೧೨ನೇ ವಾರ್ಡಿನ ಹೊಸಮನೆ ಮುಖ್ಯ ರಸ್ತೆ ಸಂತೆ ಮೈದಾನದ ಬಳಿ ಸಾರ್ವಜನಿಕರಿಗೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಜನಸಂವಾದ ಸಮಾರೋಪದ ನೇರವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. 
ಭದ್ರಾವತಿ, ಜು. ೭: ನಗರಸಭೆ ೧೨ನೇ ವಾರ್ಡಿನ ಹೊಸಮನೆ ಮುಖ್ಯ ರಸ್ತೆ ಸಂತೆ ಮೈದಾನದ ಬಳಿ ಸಾರ್ವಜನಿಕರಿಗೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಜನಸಂವಾದ ಸಮಾರೋಪದ ನೇರವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. 
ಸಂಜೆ ಮಳೆ ನಡುವೆಯೂ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಸುಮಾರು ಒಂದೂವರೆ ತಾಸು ವೀಕ್ಷಣೆ ನಡೆಸಿದ ಸಾರ್ವಜನಿಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರವರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಪ್ರಮುಖರಾದ ಮಂಗೋಟೆ ರುದ್ರೇಶ್, ಬಿ.ಎಸ್ ಶ್ರೀನಾಥ್, ಮಂಜುನಾಥ್ ಕೊಹ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕಿನ ಪಕ್ಷದ ವಿವಿಧ ಶಕ್ತಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. 

ಪೌರಾಯುಕ್ತರಿಂದ ನಗರಸಭೆ ವ್ಯಾಪ್ತಿ ಕೆರೆಗಳ ವೀಕ್ಷಣೆ : ಖುದ್ದು ಮಾಹಿತಿ ಸಂಗ್ರಹ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ಮಂಗಳವಾರ ಒಂದೇ ದಿನ ಖುದ್ದಾಗಿ ಸುಮಾರು ೫-೬ ಕೆರೆಗಳನ್ನು ವೀಕ್ಷಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. 
ಭದ್ರಾವತಿ, ಜು. ೭: ನಗರಸಭೆ ಪೌರಾಯುಕ್ತ ಮನೋಹರ್ ಮಂಗಳವಾರ ಒಂದೇ ದಿನ ಖುದ್ದಾಗಿ ಸುಮಾರು ೫-೬ ಕೆರೆಗಳನ್ನು ವೀಕ್ಷಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. 
ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ರೈತರಿಗೆ ಹಾಗೂ ದನಗಾಹಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. 
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಪೌರಾಯುಕ್ತರು ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ,  ಸಿದ್ದಾಪುರ ವ್ಯಾಪ್ತಿಯ ಸರ್ವೆ ನಂ. ೧೩೩ರ ೮ ಎಕರೆ ೩೬ ಗುಂಟೆ ಗೌಡನ ಕೆರೆ, ಸರ್ವೆ ನಂ. ೩೬ರ ೨ ಎಕರೆ ೮ ಗುಂಟೆ ಬಿದಿರೊಡ್ಡು ಕೆರೆ, ಸರ್ವೆ ನಂ.೧೯ರ ೬ ಎಕರೆ ೨೭ ಗುಂಟೆ ಚಿಕ್ಕಯ್ಯನ ಕೆರೆ, ಸರ್ವೆ ನಂ.೬೩ರ ೪೫ ಎಕರೆ ೩ ಗುಂಟೆ ಬಳಸೋಕೆರೆ, ಸರ್ವೆ ನಂ.೬೯ರ ೧ ಎಕರೆ ೨೬ ಗುಂಟೆ ಬಳಸೋಕೆರೆ, ಸರ್ವೆ ನಂ. ೮೬ರ ೫ ಎಕರೆ, ೧೫ ಗುಂಟೆ ನೆಲಕಟ್ಟೆ ಕೆರೆ ಮತ್ತು ಸರ್ವೆ ೧೧೦ರ ೨೪ ಎಕರೆ, ೧೦ ಗುಂಟೆ ಹೊಸೂರು ಕೆರೆಗಳನ್ನು ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 
      ಈಗಾಗಲೇ ತಹಸೀಲ್ದಾರ್ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳ ಬೌಂಡರಿ ಗುರುತಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಬೌಂಡರಿ ಕಾರ್ಯ ಕೈಗೊಂಡ ನಂತರ ಕೆರೆಗಳ ಸ್ವಚ್ಛತಾ ಕೈಗೊಂಡು ಅಭಿವೃದ್ಧಿಗೆ ಸಂಬಂಧಿಸಿದಂತೆ ಪೌರಾಯುಕ್ತರು ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. 
ಕೆರೆಗಳ ವೀಕ್ಷಣೆ ಸಂದರ್ಭದಲ್ಲಿ ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಆರ್. ಮುಕುಂದಯ್ಯ, ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ರೈತ ಮುಖಂಡ ಎಸ್.ಎಸ್ ನೀಲಕಂಠಪ್ಪ, ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಇದಕ್ಕೂ ಮೊದಲು ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ಆರಂಭಗೊಳ್ಳುವಂತೆ ಕೆರೆ ದಂಡೆ ಮೇಲಿರುವ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Monday, July 6, 2020

ಜು.೮ರಂದು ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಅಧ್ಯಕ್ಷ ಸ್ಥಾನಕ್ಕೆ ನಾಲ್ವರು, ಉಪಾಧ್ಯಕ್ಷ ಸ್ಥಾನ ಒಬ್ಬ ಮಹಿಳೆ ಪೈಪೋಟಿ 

ಭದ್ರಾವತಿ ತಾಲೂಕು ಪಂಚಾಯಿತಿ. 
ಭದ್ರಾವತಿ, ಜು. ೬: ಉಳಿದ ೧೦ ತಿಂಗಳ ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜು.೮ರಂದು ಚುನಾವಣೆ ನಡೆಯಲಿದ್ದು,  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಒಪ್ಪಂದದ ಪ್ರಕಾರ ಎರಡು ಸ್ಥಾನಗಳಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 
ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷದ  ಆಶಾ ಶ್ರೀಧರ್ ಅಧ್ಯಕ್ಷರಾಗಿ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸಿದ್ದು, ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್ ಪಕ್ಷದ ಸದಸ್ಯರಾದ ಸಿಂಗನಮನೆ ಕ್ಷೇತ್ರದ ಉಷಾಕಿರಣ, ಹಿರಿಯೂರು ಕ್ಷೇತ್ರದ ಸರೋಜಮ್ಮ ಹಾಜ್ಯನಾಯ್ಕ, ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ದೊಣಬಘಟ್ಟ ಕ್ಷೇತ್ರದ ಶಮಾ ಬಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷೆ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಮಾತ್ರ ಆಕಾಂಕ್ಷಿಯಾಗಿದ್ದಾರೆ. 
ಈಗಾಗಲೇ ಜೆಡಿಎಸ್ ಪಕ್ಷದ ಗೀತಾ ಜಗದೀಶ್, ಯಶೋದಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಆಶಾ ಶ್ರೀಧರ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್ ಪಕ್ಷದ ತುಂಗಮ್ಮ ಜಯಮ್ಮ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. 
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿರ್ಧಾರದ ಮೇಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.  ಒಟ್ಟು ೧೯ ಸದಸ್ಯ ಬಲ ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ೯ ಜೆಡಿಎಸ್, ೬ ಕಾಂಗ್ರೆಸ್ ಮತ್ತು ೪ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್-ಜೆಡಿಎಸ್ ಒಪ್ಪಂದದ ಪ್ರಕಾರ ಅಧಿಕಾರದ ಚುಕ್ಕಾಣಿ ಹಿಡಿದಿವೆ.

ಅಂಗಡಿ ಮುಂಗಟ್ಟು ತೆರವುಗೊಳಿಸಲು ನಗರಸಭೆಗೆ ನೋಟಿಸ್

ಎಂಪಿಎಂ ಕಾರ್ಖಾನೆ, ನಗರಾಡಳಿತ ಪ್ರದೇಶ ನಿರ್ವಹಣೆ ಹೊರ ಗುತ್ತಿಗೆ 

ಭದ್ರಾವತಿ ನಗರಸಭೆಗೆ ಎಂಪಿಎಂ ಆಡಳಿತ ಮಂಡಳಿ ಅಂಗಡಿ ಮುಂಗಟ್ಟು ತೆರವುಗೊಳಿಸಲು ನೋಟಿಸ್ ನೀಡಿರುವುದು. 
ಭದ್ರಾವತಿ, ಜು. ೬: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿರ್ವಹಣೆಯನ್ನು ಸರ್ಕಾರ ಹೊರ ಗುತ್ತಿಗೆ ನೀಡುವುದು ಬಹುತೇಕ ಖಚಿತವಾಗಿದೆ.  
ಜು.೧ರಂದು ಕಾರ್ಖಾನೆಗೆ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡುವ ನಿರ್ಧಾರ ಹೊರಬಿದಿದ್ದು, ಕಾರ್ಖಾನೆ ನಿರ್ವಹಣೆ ಜೊತೆಗೆ ನಗರಾಡಳಿತ ಪ್ರದೇಶ ನಿರ್ವಹಣೆ ಸಹ ಹೊರಗುತ್ತಿಗೆ ಪಾಲಾಗಲಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ತಕ್ಷಣ ಕಾರ್ಖಾನೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಕಾರ್ಖಾನೆ ಅಧೀನಕ್ಕೆ ನೀಡುವಂತೆ ಸೂಚಿಸಲಾಗಿದೆ. 
ಕಾರ್ಖಾನೆಯ ನಗರಾಡಳಿತ ಇಲಾಖೆಯಿಂದ ಯಾವುದೇ ಆದಾಯ ನಗರಸಭೆಗೆ ಬಾರದಿದ್ದರೂ ಸಹ ಕಳೆದ ಹಲವಾರು ವರ್ಷಗಳಿಂದ ಕಾರ್ಖಾನೆ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ನಗರೋತ್ಥಾನ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದೀಗ ಏಕಾಏಕಿ ನಗರಸಭೆ ಆಡಳಿತಕ್ಕೆ ಕಾರ್ಖಾನೆ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸೂಚಿಸಿದೆ. ಇದರಿಂದಾಗಿ ವ್ಯಾಪಾರಸ್ಥರು ಆತಂಕಗೊಂಡಿದ್ದು, ಕಾರ್ಖಾನೆಗೆ ಸೇರಿದ ಕೆಲವು ಜಾಗಗಳನ್ನು ಬ್ಯಾಂಕ್, ಅಂಚೆ ಕಛೇರಿ, ಪೊಲೀಸ್ ಠಾಣೆ ಹಾಗೂ ಶಾಲೆಗಳನ್ನು ತೆರೆಯಲು ಬಿಟ್ಟು ಕೊಡಲಾಗಿದೆ.