೩ ದಿನ ಕಾರ್ಯ ಚಟುವಟಿಕೆ ಸ್ಥಗಿತ
ಭದ್ರಾವತಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಮಿಕನೋರ್ವ ಅನುಮಾನಸ್ಪದವಾಗಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಕಾರ್ಖಾನೆ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಸೈನ್ಯ ಸಂಘಟನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಸಲಾಯಿತು.
ಭದ್ರಾವತಿ, ಜು. ೧೭: ೩ ದಿನಗಳ ಕಾಲ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವಲ್ಲಿ ಕರ್ನಾಟಕ ಜನ ಸೈನ್ಯ ಸಂಘಟನೆ ಯಶಸ್ವಿಯಾಗಿದೆ.
ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವ ಮೂಲಕ ಉಳಿದ ಕಾರ್ಮಿಕರ ಹಿತ ರಕ್ಷಣೆ ಕಾಪಾಡಬೇಕೆಂದು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.
ಈ ನಡುವೆ ಪೌರಾಯುಕ್ತರು ತಕ್ಷಣ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ ಕಾರ್ಮಿಕರನ್ನು ಮನೆಗೆ ಕಳುಹಿಸುವಂತೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಧುಕರ್ ಜೋಯಿಸ್ ಕಾರ್ಮಿಕರಿಗೆ ೩ ದಿನ ರಜೆ ಘೋಷಿಸುವ ಮೂಲಕ ಜು.೨೦ರಂದು ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.