Sunday, July 19, 2020

ಮನೆ ಕಳ್ಳತನ : ಚಿನ್ನಾಭರಣ, ನಗದು ಕಳವು

ಭದ್ರಾವತಿ, ಜು. ೧೯: ನಗರದ ನ್ಯೂ ಕಾಲೋನಿಯಲ್ಲಿ ಮನೆಯೊಂದರ ಬೀರುವಿನ ಬೀಗ ಮುರಿದು ನಗದು, ಚಿನ್ನಾಭರಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಐಡಿಕೆ ೩೦/ಬಿ ವಸತಿ ಗೃಹದ ನಿವಾಸಿ ರಜೀಯಾ ಫರ್ವೀನ್ ಎಂಬುವರು ಜು.೧೧ರಂದು ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳಿದ್ದು, ಪುನಃ ಜು.೧೮ರಂದು ಹಿಂದಿರುಗಿದ್ದಾರೆ. ಈ ಅವಧಿಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಕಿಟಕಿಯ ಮೂಲಕ ಒಳ ಪ್ರವೇಶಿಸಿ ಬೀರುವಿನ ಬೀಗ ಮುರಿಯಲಾಗಿದೆ. ಬೀರುವಿನಲ್ಲಿದ್ದ ಸುಮಾರು ೧೮ ಗ್ರಾಂ. ತೂಕದ ೩೬ ಸಾವಿರ ರು. ಮೌಲ್ಯದ ಒಂದು ಜೊತೆ ಬಂಗಾರದ ಬಳೆ, ೭ ಗ್ರಾಂ. ತೂಕದ ೧೪ ಸಾವಿರ ರು. ಮೌಲ್ಯದ ಬಂಗಾರದ ಸರ ಹಾಗೂ ೨೫ ಸಾವಿರ ರು. ನಗದು ಹಣ ಕಳವು ಮಾಡಲಾಗಿದೆ. 
ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಮನೆಯ ಮುಂದೆ ಕಟ್ಟಿ ಹಾಕಲಾಗಿದ್ದ ಕುರಿ ಕಳವು

ಭದ್ರಾವತಿ, ಜು. ೧೯: ಮನೆಯ ಮುಂದೆ ಕಟ್ಟಿ ಹಾಕಲಾಗಿದ್ದ ಕುರಿಯನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವ ಘಟನೆ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
೩ ದಿನಗಳ ಹಿಂದೆ ಶಿವರಾಮನಗರದ ನಿವಾಸಿ ಮೂಡಲಗಿರಿಗೌಡ ಎಂಬುವರಿಗೆ ಸೇರಿದ ಮನೆಯ ಮುಂಭಾಗ ಕಟ್ಟಿ ಹಾಕಲಾಗಿದ್ದ ೭ ಕುರಿಗಳ ಪೈಕಿ ಒಂದು ಕುರಿಯನ್ನು ಬೆಳಿಗ್ಗೆ ೧೦.೩೦ರ ಸಮಯದಲ್ಲಿ ಕಳವು ಮಾಡಲಾಗಿದೆ. ಕುರಿಯ ಅಂದಾಜು ಮೌಲ್ಯ ೧೦ ಸಾವಿರ ರು. ಗಳಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಸೀಲ್‌ಡೌನ್ ಪ್ರದೇಶದ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ಎನ್‌ಎಂಸಿ ಮುಖ್ಯ ರಸ್ತೆಯ ಬಲಭಾಗದ ಉಡುಗಲಮ್ಮ ದೇವಸ್ಥಾನ ಸಮೀಪ ಭೋವಿಕಾಲೋನಿ ವಾಪ್ತಿಗೆ ಒಳಪಡುವ ಪ್ರದೇಶ ಸೀಲ್‌ಡೌನ್ ಪ್ರದೇಶದ ನಿವಾಸಿಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಬಿಜೆಪಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ರುಗಳಾದ ಜಿ. ಆನಂದ್ ಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ವಿತರಿಸಿ ಸಂಕಷ್ಟಕ್ಕೆ ಸ್ಪಂದಿಸಿದರು. 
ಭದ್ರಾವತಿ, ಜು. ೧೯: ನಗರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ನಗರಸಭೆ ವ್ಯಾಪ್ತಿಯ ಬಹುತೇಕ ಭಾಗಗಳು ಸೀಲ್‌ಡೌನ್‌ಗಳಾಗಿ ರೂಪುಗೊಳ್ಳುತ್ತಿವೆ. ಇದರಿಂದಾಗಿ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದು, ನಗರದ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ದಾನಿಗಳು ಇವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. 
ಎನ್‌ಎಂಸಿ ಮುಖ್ಯ ರಸ್ತೆಯ ಬಲಭಾಗದ ಉಡುಗಲಮ್ಮ ದೇವಸ್ಥಾನ ಸಮೀಪ ಭೋವಿಕಾಲೋನಿ ವಾಪ್ತಿಗೆ ಒಳಪಡುವ ಪ್ರದೇಶ ಸೀಲ್‌ಡೌನ್ ಮಾಡಲಾಗಿದ್ದು, ಇಲ್ಲಿನ ನಿವಾಸಿಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಬಿಜೆಪಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ರುಗಳಾದ ಜಿ. ಆನಂದ್ ಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ವಿತರಿಸಿ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. 
ನಿವಾಸಿಗಳು ಯಾವುದೇ ಕಾರಣಕ್ಕೂ ಆತಂಕಗೊಳ್ಳದೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಪ್ರಮುಖರಾದ ಸುಬ್ಬಣ್ಣ, ಚೌಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬಿ.ಪಿ ಸತ್ಯಲಕ್ಷ್ಮಿ ನಿಧನ

ಬಿ.ಪಿ ಸತ್ಯಲಕ್ಷ್ಮಿ 
ಭದ್ರಾವತಿ, ಜು. ೧೯: ಹಳೇನಗರದ ವಾಸವಿ ಕಾಲೋನಿ ನಿವಾಸಿ ಬಿ.ಪಿ ಸತ್ಯಲಕ್ಷ್ಮಿ(೭೩) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.
ಪತಿ, ಇಬ್ಬರು ಪುತ್ರಿ, ಓರ್ವ ಪುತ್ರ ಸೇರಿದಂತೆ ಬಂಧು-ಬಳಗ ಬಿಟ್ಟಿಗಲಿದ್ದು, ಮೃತರ ಅಂತ್ಯ ಸಂಸ್ಕಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಅರಣ್ಯ ಪ್ರದೇಶ ಒತ್ತುವರಿ : ಗ್ರಾಮಸ್ಥರು, ಅರಣ್ಯ ಇಲಾಖೆ ನಡುವೆ ಮಾತಿನ ಚಕಮಕಿ

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ವ್ಯಕ್ತಿಯೊಬ್ಬರ ಮೇಲೆ 

ಅಮಾನುಷ ಹಲ್ಲೆ : ಆರೋಪ 

ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದ ನಿವಾಸಿ ಬಸವರಾಜ ಎಂಬುವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 
ಭದ್ರಾವತಿ, ಜು. ೧೯: ಕಳೆದ ೫ ದಿನಗಳ ಹಿಂದೆ ತಾಲೂಕಿನ ಕಲ್ಲಾಪುರ ಗ್ರಾಮದ ಮಾವಿನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ನಡುವೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮರಕಡಿತಲೆಯಲ್ಲಿ ತೊಡಗಿದ್ದವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ವ್ಯಕ್ತಿಯೊಬ್ಬರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆಂದು ತಹಸೀಲ್ದಾರ್‌ಗೆ ದೂರಲಾಗಿದೆ. 
ಈ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ಅರಣ್ಯ ಪ್ರದೇಶ ಒತ್ತುವರಿ ನಡೆಯುತ್ತಿದ್ದು, ಅರಣ್ಯ ಇಲಾಖೆ ವತಿಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಸಹ ಒತ್ತುವರಿ ನಿಂತಿಲ್ಲ. ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಅರಣ್ಯ ವ್ಯಾಪ್ತಿಯಲ್ಲಿ ಅಡಕೆ, ತೆಂಗು, ಬಾಳೆತೋಟಗಳನ್ನು ನಿರ್ಮಿಸಿಕೊಂಡಿದ್ದಾರೆ. ಅರಣ್ಯದಲ್ಲಿ ಕಾವಲು ಕಾಯುವ ಸಿಬ್ಬಂದಿಗಳನ್ನು ಬೆದರಿಸಿ ಕಳುಹಿಸುವ ಮೂಲಕ ಮರಕಡಿತಲೆಯಲ್ಲಿ ತೊಡಗಿದ್ದಾರೆ. ಇಂತಹವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿನಾಕಾರಣ ಯಾವುದೇ ರೀತಿ ಯಾರ ಮೇಲೂ ಹಲ್ಲೆ, ದೌರ್ಜನ್ಯ ನಡೆಸಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆಯಾಗಿದೆ. 
ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ನಡುವೆ ಒತ್ತುವರಿಗೆ ಸಂಬಂಧಿಸಿದಂತೆ ಮಾತಿನಚಕಮಕಿ ನಡೆದಿರುವುದು. 
ಆದರೆ ಡಿಎಸ್‌ಎಸ್ ಮುಖಂಡ ಕೆ. ರಂಗನಾಥ್, ಕಲ್ಲಾಪುರ ಗ್ರಾಮದ  ನಿವಾಸಿ ಬಸವರಾಜ(೩೫) ಎಂಬುವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ವೈದ್ಯರ ಮಾರ್ಗದರ್ಶನದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಣಬೆ ಹುಡುಕಿಕೊಂಡು ಅರಣ್ಯ  ಪ್ರವೇಶಿಸಿದ್ದು, ಇವರ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಮರಕಡಿತಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ. 
ಅರಣ್ಯ  ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮತ್ತು ತಹಸೀಲ್ದಾರ್ ಶಿವಕುಮಾರ್ ಗಮನಕ್ಕೆ ತರಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು. 
ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಶಿವಕುಮಾರ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಘಟನೆ ನಡೆದಿರುವುದು  ಗಮನಕ್ಕೆ ಬಂದಿದೆ. ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 

Saturday, July 18, 2020

ಎಸ್.ಪಿ ಕೃಷ್ಣೋಜಿರಾವ್ ಅಂಬೋರೆ ನಿಧನ

ಎಸ್.ಪಿ ಕೃಷ್ಣೋಜಿರಾವ್ ಅಂಬೋರೆ 
ಭದ್ರಾವತಿ, ಜು. ೧೮: ನಗರದ ಹೊಸಮನೆ ನಿವಾಸಿ, ವಾರ ಪತ್ರಿಕೆಯೊಂದರ ಸಂಸ್ಥಾಪಕ ಸಂಪಾದಕ ಎಸ್.ಪಿ ಕೃಷ್ಣೋಜಿರಾವ್(೭೨) ಅಂಬೋರೆ ಶುಕ್ರವಾರ ರಾತ್ರಿ ನಿಧನ ಹೊಂದಿದರು. 
ಶಿವಮೊಗ್ಗ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಉಪಾಧ್ಯಕ್ಷೆ ಪತ್ನಿ ಸುಮಿತ್ರಾ ಅಂಬೋರೆ, ಇಬ್ಬರು ಪುತ್ರರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ತಾಲೂಕಿನ ಸೀತಾರಾಮಪುರದಲ್ಲಿ ನಡೆಯಿತು. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ನಿಧನಕ್ಕೆ ಶ್ರದ್ದಾಂಜಲಿ

ಹೊನ್ನಾಳಿ ರಾಂಪುರ ಮಠದ ಪಟ್ಟಾಧ್ಯಕ್ಷರಾದ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ನಿಧನಕ್ಕೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಿಳಿಕಿ ಹಿರೇಮಠ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೧೮:  ಹೊನ್ನಾಳಿ ರಾಂಪುರ ಮಠದ ಪಟ್ಟಾಧ್ಯಕ್ಷರಾದ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ನಿಧನಕ್ಕೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಿಳಿಕಿ ಹಿರೇಮಠ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಧಾರ್ಮಿಕ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು. ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಹಾಸಭಾ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯ, ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್, ಯುವ ಮುಖಂಡರಾದ ಮಂಜುನಾಥ್, ವಕೀಲರಾದ ಕುಮಾರ್, ಉದಯಕುಮಾರ್, ಆನಂದ್, ರಮೇಶ್, ಸತೀಶ್, ಆನಂದಸ್ವಾಮಿ ಮತ್ತು ಗುರುಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.