Thursday, July 30, 2020

ಜಾತಿನಿಂದನೆ, ಜೀವ ಬೆದರಿಕೆ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮೂಲಕ ಮನವಿ 

ಪೊಲೀಸರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೩೦: ಪೊಲೀಸರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
ತಾಲೂಕಿನ ಹೆಬ್ಬಂಡಿ ಲಕ್ಷ್ಮೀಪುರ ಗ್ರಾಮದ ಸರ್ವೆ ನಂ. ೩೭/೧ ರಲ್ಲಿ ೦-೩೧ ಗುಂಟೆ ಜಮೀನು ಮತ್ತು ಸರ್ವೆ ನಂ. ೩೭/೬ರಲ್ಲಿ ೦-೨೯ ಗುಂಟೆ ಜಮೀನು ಹೊಂದಿರುವ ಸೀನಪ್ಪರವರು ತಮ್ಮ ಹೆಸರಿನಲ್ಲಿ ಆರ್‌ಟಿಸಿ ಮ್ಯೂಟೇಷನ್ ಹಾಗೂ ಮೂಲ ದಾಖಲೆಗಳನ್ನು ಹೊಂದಿದ್ದಾರೆ. ಅಲ್ಲದೆ ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ತನಿಖೆ ನಡೆಸಿ ಜಮೀನು ಸೀನಪ್ಪನವರಿಗೆ ಸೇರಿದೆ ಎಂದು ಖಚಿತಪಡಿಸಿದ್ದಾರೆ. ಆದರೂ ಸಹ ಲಕ್ಷ್ಮೀಪುರದ ನಿವಾಸಿಗಳಾದ ಕೆಂಪಮ್ಮ, ಮಗ ನಾಗರಾಜ ಹಾಗೂ ಮೊಮ್ಮಕ್ಕಳಾದ ಗೌತಮಿ, ರಾಘವೇಂದ್ರ, ಬೇಬಿಯಮ್ಮ, ಲಕ್ಷ್ಮಮ್ಮ, ದೇವೇಂದ್ರ ಸೇರಿದಂತೆ ಇನ್ನಿತರರು  ಪರಿಶಿಷ್ಟ ಜಾತಿ ಬೋವಿ ಜನಾಂಗಕ್ಕೆ ಸೇರಿರುವ ಸೀನಪ್ಪರವರಿಗೆ ಜಾತಿ ನಿಂದನೆ ಮಾಡುವ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಯಿತು. 
ಈ ಸಂಬಂಧ ಸೀನಪ್ಪರವರು ನ್ಯೂಟೌನ್ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಪೊಲೀಸ್ ಉಪಾಧೀಕ್ಷಕರಿಗೆ ಮನವಿ ಸಹ ಸಲ್ಲಿಸಿರುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿಲ್ಲ. ಅಲ್ಲದೆ ಜೀವ ಬೆದರಿಕೆ ಹೊಂದಿರುವ ಸೀನಪ್ಪರವರಿಗೆ ಸೂಕ್ತ ರಕ್ಷಣೆ ಸಹ ನೀಡಿಲ್ಲ ಎಂದು ದೂರಲಾಯಿತು. 

      ತಕ್ಷಣ ಪೊಲೀಸರು ಜಾತಿನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು. ಸೀನಪ್ಪರವರ ಜಮೀನಿನಲ್ಲಿರುವ ಮನೆಯಲ್ಲಿ ಅಕ್ರಮವಾಗಿ ವಾಸವಾಗಿರುವ ಕೆಂಪಮ್ಮ ಮತ್ತು ಕುಟುಂಬದವರನ್ನು ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು. ಕಾರ್ಯಾಧ್ಯಕ್ಷ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಆನಂದಮೂರ್ತಿ, ಸಂಯುಕ್ತ ಜನಾತದಳ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸೀನಪ್ಪ, ಲಕ್ಷ್ಮಮ್ಮ, ಮಂಜಪ್ಪ, ನಾಗರಾಜಪ್ಪ, ನಾಗರತ್ನಮ್ಮ, ಪುಷ್ಪ, ಎಸ್. ಸುರೇಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Wednesday, July 29, 2020

ಭದ್ರಾವತಿಯಲ್ಲಿ ೭ ಕೊರೋನಾ ಸೋಂಕು ಪತ್ತೆ

ಭದ್ರಾವತಿ, ಜು. ೨೯: ಉಕ್ಕಿನ ನಗರದಲ್ಲಿ ಕೆಲವು ದಿನಗಳಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬುಧವಾರ ಸಹ ನಗರಸಭೆ ವ್ಯಾಪ್ತಿಯಲ್ಲಿ ೩ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ೪ ಒಟ್ಟು ೭ ಪ್ರಕರಣಗಳು ಪತ್ತೆಯಾಗಿವೆ. 
ತಾಲೂಕಿನಲ್ಲಿ ಕೆಲವು ದಿನಗಳಿಂದ ಸುಮಾರು ೫ಕ್ಕೂ ಅಧಿಕ ಸೋಂಕು ಪ್ರಕರಣಗಳು ಕಂಡು ಬರುತ್ತಿವೆ. ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಸುಮಾರು ೪೫ ವರ್ಷದ ವ್ಯಕ್ತಿ, ಹೊಸಮನೆ ಅಶ್ವತ್ಥ್ ನಗರದಲ್ಲಿ ೭೫ ವರ್ಷದ ವೃದ್ಧೆ ಮತ್ತು ಸಿ.ಎನ್ ರಸ್ತೆಯಲ್ಲಿ ೬೫ ವರ್ಷದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಗ್ರಾಮಾಂತರ ಭಾಗದಲ್ಲಿ ೪ ಪ್ರಕರಣಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷರಾದ ಲತಾಮಣಿ, ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 

ಬಿಜೆಪಿ ಪಕ್ಷದ ವತಿಯಿಂದ ಹೊಸ ಸಿದ್ದಾಪುರದಲ್ಲಿ ವನಮಹೋತ್ಸವ

ಭದ್ರಾವತಿ, ಜು. ೨೯: ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ಭಾರತೀಯ ಜನತಾ ಪಕ್ಷ ತಾಲೂಕು ಘಟಕದ ವತಿಯಿಂದ ವನ ಮಹೋತ್ಸವ ಆಚರಿಸಲಾಯಿತು. 
ಯುವ ಮುಖಂಡ ಜಿ.ಆರ್ ಪ್ರವೀಣ್ ಪಟೇಲ್, ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಮಂಜಪ್ಪ, ಜಯರಾಮ, ಪುಟ್ಟೇಗೌಡ, ಸುಬ್ರಮಣಿ, ಚಂದ್ರಪ್ಪ, ಪರಮೇಶ್ವರಪ್ಪ, ನಂಜಪ್ಪ, ಹನುಮಂತಪ್ಪ, ಈಶ್ವರ, ವೆಂಕಟೇಶ್, ನವೀನ, ಷಣ್ಮುಖಂ, ಜಗದೀಶ್, ಸರೋಜಮ್ಮ, ಪ್ರೇಮಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಹಳೇನಗರ ಭಾಗದಲ್ಲಿ ೨ ದಿನ ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೨೯: ನಗರಸಭೆ ವ್ಯಾಪ್ತಿಯ ಹಳೇನಗರ ಭಾಗದಲ್ಲಿ ಅಮೃತ್ ನಗರ ಯೋಜನೆಯಡಿ ರಾಜಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರ ಜೊತೆಗೆ ಕಾಮಗಾರಿಗೆ ಅಡ್ಡಲಾಗಿರುವ ಬೀದಿ ದೀಪ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಸಹ  ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜು. ೩೦ ಮತ್ತು ೩೧ರಂದು ವಿದ್ಯುತ್ ವ್ಯತ್ಯಯವಾಗಲಿದೆ. 
ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫.೩೦ರ ವರೆಗೆ ಹಳೇನಗರ ಭಾಗದ ಸಿದ್ದಾರೂಢ ನಗರ, ಶಂಕರ ಮಠ ರಸ್ತೆ, ಕನಕ ನಗರ, ಕೆಎಸ್‌ಆರ್‌ಟಿಸಿ ಬಸ್ ಘಟಕದ ಸುತ್ತಮುತ್ತ, ಸಿಲ್ವರ್ ಪಾರ್ಕ್, ಅಂಬೇಡ್ಕರ್ ನಗರ, ಕೋಟೆ ಏರಿಯಾ ೫ನೇ ಕ್ರಾಸ್, ಹೊಸ ಸೇತುವೆ ರಸ್ತೆ, ಕಾಳಿದಾಸ ಬಡಾವಣಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಮನೋಹರ್ ಕೋರಿದ್ದಾರೆ. 


ಸುರಗಿತೋಪಿನಲ್ಲಿ ವಾರ್ಡ್ ಮಟ್ಟದ ಕಾರ್ಯಪಡೆ ಅಸ್ತಿತ್ವಕ್ಕೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಕೋವಿಡ್-೧೯ ನಿಯಂತ್ರಣ ಸಂಬಂಧ ನೂತನವಾಗಿ ವಾರ್ಡ್ ಮಟ್ಟದ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ. 
ಭದ್ರಾವತಿ, ಜು. ೨೯: ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಕೋವಿಡ್-೧೯ ನಿಯಂತ್ರಣ ಸಂಬಂಧ ನೂತನವಾಗಿ ವಾರ್ಡ್ ಮಟ್ಟದ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ. 
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿಗಳಾದ ಸುಹಾಸಿನಿ, ಈಶ್ವರಪ್ಪ, ಸ್ಥಳೀಯ ಪ್ರಮುಖರಾದ ನಿರ್ಮಲ ಕುಮಾರಿ, ಉಮೇಶ್, ಕಿರಣ್, ಪರಮೇಶ್, ಅನು, ಚೇತನ್‌ಕುಮಾರ್, ಅಪ್ರೋಜ್ ಮತ್ತು ನಗರಸಭೆ ಸದಸ್ಯೆ ಕೆ.ಆರ್ ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಪುಟ್ಟಮ್ಮ, ಸುಜಾತ, ಲಕ್ಕವ್ವ ಬೀರದಾರ್, ಆಶಾ ಕಾರ್ಯಕರ್ತೆ ಸವಿತಾ, ಪೊಲೀಸ್ ಸಿಬ್ಬಂದಿಗಳಾದ ನಾಯ್ಕ್, ವಿಕ್ರಂ, ವೈದ್ಯ ಡಾ. ಚಂದ್ರೇಗೌಡ ಸೇರಿದಂತೆ ಇನ್ನಿತರರು ಕಾರ್ಯಪಡೆಯಲ್ಲಿದ್ದು, ಮೊದಲ ಸಭೆಯಲ್ಲಿ ಸಮುದಾಯಕ್ಕೆ ಕೊರೋನಾ ಸೋಂಕು ಕುರಿತು ಜಾಗೃತಿ ಮೂಡಿಸುವುದು ಹಾಗೂ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸುವುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲಾಯಿತು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯೂನ್ ಕಿಟ್ ಬಿಡುಗಡೆ

ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಬುಧವಾರ ಬಿ.ಕೆ ಸಂಗಮೇಶ್ವರ್ ಬಿಡುಗಡೆಗೊಳಿಸಿದರು. 
ಭದ್ರಾವತಿ, ಜು. ೨೯: ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಬಿಡುಗಡೆ ಸಮಾರಂಭ ಬುಧವಾರ ನಗರಸಭೆ ಸರ್.ಎಂ ವಿಶ್ವೇಶ್ವರಾಯ ಸಭಾಂಗಣದಲ್ಲಿ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್ ಔಷಧಿ ಬಿಡುಗಡೆಗೊಳಿಸಿದರು. ತಹಸೀಲ್ದಾರ್ ಶಿವಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ಉಪ ನೊಂದಾಣಾಧಿಕಾರಿ ಲಕ್ಷ್ಮೀಪತಿ ಹಾಗೂ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Tuesday, July 28, 2020

ಕಳಪೆ ಗುಣಮಟ್ಟದ ಬೆಲ್ಲ ತಯಾರಿಕೆ : ೨ ಆಲೆಮನೆಗಳ ಮೇಲೆ ದಾಳಿ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ೨ ಅಲೆಮನೆಗಳ ಮೇಲೆ ತಹಸೀಲ್ದಾರ್ ಶಿವಕುಮಾರ್ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿರುವುದು. 
ಭದ್ರಾವತಿ, ಜು. ೨೮: ತಾಲೂಕಿನ ಅರಳಿಹಳ್ಳಿ ಗ್ರಾಮದ ೨ ಅಲೆಮನೆಗಳ ಮೇಲೆ ತಹಸೀಲ್ದಾರ್ ಶಿವಕುಮಾರ್ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿರುವ ಘಟನೆ ನಡೆದಿದೆ. 
ಕಳಪೆ ಗುಣಮಟ್ಟದ ಸಕ್ಕರೆ ಹಾಗೂ ಇನ್ನಿತರ ರಾಸಾಯನಿಕ ಪದಾರ್ಥಗಳನ್ನು ಬಳಸಿ ಬೆಲ್ಲ ತಯಾರಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರ ಮೇರೆಗೆ ಅನುಸೂಯಮ್ಮ ಮತ್ತು ಬಿ. ರಾಜು ಎಂಬುವರಿಗೆ ಸೇರಿದ ೨ ಆಲೆಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ಸಂದರ್ಭದಲ್ಲಿ ಸುಮಾರು ೧೫೦ ಸಕ್ಕರೆ ಚೀಲ ಹಾಗೂ ಬೆಲ್ಲ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿವೆ. ೨ ಆಲೆಮನೆಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. 
ಕಾರ್ಯಾಚರಣೆ ತಂಡದಲ್ಲಿ ಶಿರಸ್ತೇದಾರ್ ಮಂಜಾನಾಯ್ಕ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ದೇವರಾಜ್, ರಾಜಸ್ವ ನಿರೀಕ್ಷಕ ಜಗದೀಶ್ ಸೇರಿದಂತೆ  ಇನ್ನಿತರರು ಪಾಲ್ಗೊಂಡಿದ್ದರು.