ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮೂಲಕ ಮನವಿ
ಪೊಲೀಸರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜು. ೩೦: ಪೊಲೀಸರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಹೆಬ್ಬಂಡಿ ಲಕ್ಷ್ಮೀಪುರ ಗ್ರಾಮದ ಸರ್ವೆ ನಂ. ೩೭/೧ ರಲ್ಲಿ ೦-೩೧ ಗುಂಟೆ ಜಮೀನು ಮತ್ತು ಸರ್ವೆ ನಂ. ೩೭/೬ರಲ್ಲಿ ೦-೨೯ ಗುಂಟೆ ಜಮೀನು ಹೊಂದಿರುವ ಸೀನಪ್ಪರವರು ತಮ್ಮ ಹೆಸರಿನಲ್ಲಿ ಆರ್‌ಟಿಸಿ ಮ್ಯೂಟೇಷನ್ ಹಾಗೂ ಮೂಲ ದಾಖಲೆಗಳನ್ನು ಹೊಂದಿದ್ದಾರೆ. ಅಲ್ಲದೆ ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ತನಿಖೆ ನಡೆಸಿ ಜಮೀನು ಸೀನಪ್ಪನವರಿಗೆ ಸೇರಿದೆ ಎಂದು ಖಚಿತಪಡಿಸಿದ್ದಾರೆ. ಆದರೂ ಸಹ ಲಕ್ಷ್ಮೀಪುರದ ನಿವಾಸಿಗಳಾದ ಕೆಂಪಮ್ಮ, ಮಗ ನಾಗರಾಜ ಹಾಗೂ ಮೊಮ್ಮಕ್ಕಳಾದ ಗೌತಮಿ, ರಾಘವೇಂದ್ರ, ಬೇಬಿಯಮ್ಮ, ಲಕ್ಷ್ಮಮ್ಮ, ದೇವೇಂದ್ರ ಸೇರಿದಂತೆ ಇನ್ನಿತರರು ಪರಿಶಿಷ್ಟ ಜಾತಿ ಬೋವಿ ಜನಾಂಗಕ್ಕೆ ಸೇರಿರುವ ಸೀನಪ್ಪರವರಿಗೆ ಜಾತಿ ನಿಂದನೆ ಮಾಡುವ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಯಿತು.
ಈ ಸಂಬಂಧ ಸೀನಪ್ಪರವರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಪೊಲೀಸ್ ಉಪಾಧೀಕ್ಷಕರಿಗೆ ಮನವಿ ಸಹ ಸಲ್ಲಿಸಿರುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿಲ್ಲ. ಅಲ್ಲದೆ ಜೀವ ಬೆದರಿಕೆ ಹೊಂದಿರುವ ಸೀನಪ್ಪರವರಿಗೆ ಸೂಕ್ತ ರಕ್ಷಣೆ ಸಹ ನೀಡಿಲ್ಲ ಎಂದು ದೂರಲಾಯಿತು.
ತಕ್ಷಣ ಪೊಲೀಸರು ಜಾತಿನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು. ಸೀನಪ್ಪರವರ ಜಮೀನಿನಲ್ಲಿರುವ ಮನೆಯಲ್ಲಿ ಅಕ್ರಮವಾಗಿ ವಾಸವಾಗಿರುವ ಕೆಂಪಮ್ಮ ಮತ್ತು ಕುಟುಂಬದವರನ್ನು ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು. ಕಾರ್ಯಾಧ್ಯಕ್ಷ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಆನಂದಮೂರ್ತಿ, ಸಂಯುಕ್ತ ಜನಾತದಳ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸೀನಪ್ಪ, ಲಕ್ಷ್ಮಮ್ಮ, ಮಂಜಪ್ಪ, ನಾಗರಾಜಪ್ಪ, ನಾಗರತ್ನಮ್ಮ, ಪುಷ್ಪ, ಎಸ್. ಸುರೇಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.