Saturday, August 8, 2020
ಮದ್ಯದಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ : ಆ.12ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ
Friday, August 7, 2020
ಭದ್ರಾವತಿಯಲ್ಲಿ ೧೨ ಸೋಂಕು ಪತ್ತೆ : ಕೊರೋನಾ ತಪಾಸಣೆ ನಡೆಸುವಲ್ಲಿ ನಿರ್ಲಕ್ಷ್ಯತನ
ಸಿಂಗನಮನೆ ಗ್ರಾ.ಪಂ. ಸದಸ್ಯ ಡಿ.ಟಿ ಶಶಿಕುಮಾರ್ ಆರೋಪ
ಭದ್ರಾವತಿ ಸಿಂಗನಮನೆ ಗ್ರಾಮ ಪಂಚಾಯಿತಿ ಸದಸ್ಯ ಡಿ.ಟಿ ಶಶಿಕುಮಾರ್
ಗಾಂಧಿನಗರದಲ್ಲಿ ೫೧ ವರ್ಷದ ಮಹಿಳೆ, ಎರೆಹಳ್ಳಿಯಲ್ಲಿ ೫೮ ವರ್ಷದ ವ್ಯಕ್ತಿ, ಹೊಳೆಹೊನ್ನೂರಿನಲ್ಲಿ ೪೦ ವರ್ಷದ ಪುರುಷ, ಮೂಡಲವಿಠಲಪುರದಲ್ಲಿ ೨೦ ವರ್ಷದ ಯುವಕ, ಅರಕೆರೆಯಲ್ಲಿ ೫೬ ವರ್ಷದ ವ್ಯಕ್ತಿ, ಜೇಡಿಕಟ್ಟೆಯಲ್ಲಿ ೪೫ ವರ್ಷದ ವ್ಯಕ್ತಿ, ಬಿ.ಎಚ್ ರಸ್ತೆಯಲ್ಲಿ ೨೫ ವರ್ಷದ ಪುರುಷ, ಇಂದ್ರನಗರದಲ್ಲಿ ೨೩ ವರ್ಷದ ಮಹಿಳೆ ಹಾಗು ಬಸಲಿಕಟ್ಟೆಯಲ್ಲಿ ೫೨ ವರ್ಷದ ವ್ಯಕ್ತಿ ಸೇರಿದಂತೆ ಒಟ್ಟು ೧೨ ಮಂದಿ ಸೋಂಕಿಗೆ ಒಳಗಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ನೇತೃತ್ವದ ತಂಡ ಸೋಂಕು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ೧೦೦ ಹಾಗು ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
ಕೊರೋನಾ ಸೋಂಕು ತಪಾಸಣೆ ನಿರ್ಲಕ್ಷ್ಯತನ:
ತಾಲೂಕಿನಲ್ಲಿ ಕೊರೋನಾ ಸೋಂಕು ತಪಾಸಣೆ ನಡೆಸುವಲ್ಲಿ ತಾಲೂಕು ಆರೋಗ್ಯ ಇಲಾಖೆ ನಿರ್ಲಕ್ಷ್ಯತನ ವಹಿಸಿದ್ದು, ಇದರಿಂದಾಗಿ ಸೋಂಕು ಗ್ರಾಮೀಣ ಭಾಗದಲ್ಲೂ ವ್ಯಾಪಕವಾಗಿ ಹರಡುತ್ತಿದೆ ಎಂದು ಸಿಂಗನಮನೆ ಗ್ರಾಮ ಪಂಚಾಯಿತಿ ಸದಸ್ಯ ಡಿ.ಟಿ ಶಶಿಕುಮಾರ್ ಆರೋಪಿಸಿದ್ದಾರೆ.
ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ತಪಾಸಣೆಗೆ ತೆರಳಿದ್ದು, ಆದರೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸದೆ ನಿರ್ಲಕ್ಷ್ಯತನದಿಂದ ನಡೆದುಕೊಂಡು ವಾಪಾಸು ಕಳುಹಿಸಿದ್ದಾರೆ. ಈ ವ್ಯಕ್ತಿ ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ತಪಾಸಣೆ ಮಾಡಿಸಿದ್ದು, ೩ ದಿನಗಳ ನಂತರ ಸೋಂಕು ದೃಢಪಟ್ಟಿರುವ ವರದಿ ಬಂದಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆಸ್ಪತ್ರೆಗೆ ತಪಾಸಣೆಗೆ ಬಂದರೂ ಸಹ ತಪಾಸಣೆ ನಡೆಸದೆ ಕಳುಹಿಸಿರುವ ಕ್ರಮ ಖಂಡನೀಯ. ತಾಲೂಕು ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎಲ್ಲಾ ಗ್ರಾಮಪಂಚಾಯಿತಿಗಳು ಎಚ್ಚೆತ್ತುಕೊಂಡು ಮುನ್ನಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಿವಾರಣೆ ಔಷಧ ಸಿಂಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿ ರುದ್ರಾಭಿಷೇಕ
ಭದ್ರಾವತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ ಗ್ರಾಮದೇವತೆ ಶ್ರೀ ಹಳದಮ್ಮ ದೇವಿಗೆ ರುದ್ರಾಭಿಷೇಕ ನೆರವೇರಿಸಲಾಯಿತು.
ಭದ್ರಾವತಿ, ಆ. ೭: ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಶುಕ್ರವಾರ ಹಳೇನಗರದ ಗ್ರಾಮದೇವತೆ ಶ್ರೀ ಹಳದಮ್ಮ ದೇವಿಗೆ ತಾಲೂಕು ಕನಕ ಯುವ ಪಡೆ ವತಿಯಿಂದ ರುದ್ರಾಭಿಷೇಕ ನೆರವೇರಿಸಲಾಯಿತು.
ಕನಕ ಯುವಪಡೆ ಅಧ್ಯಕ್ಷ ಜೆ. ಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ. ವಿನೋದ್‌ಕುಮಾರ್, ಲೋಕೇಶ್, ನವೀನ್, ರಾಜೇಶ್, ಕೇಶವ, ಗೋಪಾಲಕೃಷ್ಣ, ಮಧು, ಶರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಡಿಇಓ ಮೃತ ಕುಟುಂಬಕ್ಕೆ ಸಹಾಯಾಸ್ತ : ೧.೫೦ ಲಕ್ಷ ರು. ಬಾಂಡ್ ವಿತರಣೆ
ಭದ್ರಾವತಿ ತಾಲೂಕಿನ ಅನವೇರಿ ಗ್ರಾಮ ಪಂಚಾಯಿತಿ ಡಿಇಓ ಪ್ರದೀಪ್‌ರವರು ನಿಧನ ಹೊಂದಿದ್ದು, ಸಂಕಷ್ಟದಲ್ಲಿರುವ ಮೃತರ ಕುಟುಂಬಕ್ಕೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಾಯಾಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಭದ್ರಾವತಿ, ಆ. ೭: ಅನವೇರಿ ಗ್ರಾಮ ಪಂಚಾಯಿತಿ ಡಿಇಓ ಪ್ರದೀಪ್‌ರವರು ನಿಧನ ಹೊಂದಿದ್ದು, ಸಂಕಷ್ಟದಲ್ಲಿರುವ ಮೃತರ ಕುಟುಂಬಕ್ಕೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಾಯಾಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೃತರ ಪುತ್ರಿ ಮತ್ತು ಪತ್ನಿ ಹೆಸರಿನಲ್ಲಿ ಜಂಟಿಯಾಗಿ ೧,೫೦,೦೦೦ ರು. ಮೌಲ್ಯದ ಸಹಾಯಾಸ್ತದ ಬಾಂಡ್ ವಿತರಣೆ ಮಾಡಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಸಿ.ಎ.ಓ ಪುರಾಣಿಕ್, ಸಹಾಯಕ ನಿರ್ದೇಶಕ ಸಂತೋಷ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಿನ ವಿವಿಧೆಡೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ನೇತೃತ್ವ ತಂಡ ಪರಿಶೀಲನೆ
ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಹೊಸ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ನೇತೃತ್ವ ತಂಡ ಪರಿಶೀಲನೆ ನಡೆಸಿತು.
ಭದ್ರಾವತಿ, ಆ. ೭: ತಾಲೂಕಿನ ವಿವಿಧೆಡೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಳ್ಳುತ್ತಿದ್ದು, ಅಲ್ಲದೆ ಪ್ರತಿ ಬಾರಿ ಸೇತುವೆ ಹಾನಿಗೊಳಗಾಗುತ್ತಿದೆ. ಈ ಹಿನ್ನಲೆಯಲ್ಲಿ ಮಣಿವಣ್ಣನ್ ತಂಡ ಸೇತುವೆ ಪರಿಶೀಲನೆ ನಡೆಸಿತು.
ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಹಾಗೂ ಪೌರಾಯುಕ್ತ ಮನೋಹರ್ ಸೇತುವೆಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ವಿವರಿಸಿದರು.
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಭದ್ರಾವತಿ ತಾಲೂಕಿನ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಭದ್ರಾ ಜಲಾಶಯಕ್ಕೆ ಜಿಲ್ಲಾಧಿಕಾರಿ ತಂಡ ಭೇಟಿ:
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ತಾಲೂಕಿನ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಲಾಶಯದ ಅಧಿಕಾರಿಗಳು ಪ್ರಸ್ತುತ ಜಲಾಶಯದಲ್ಲಿ ಭರ್ತಿಯಾಗಿರುವ ನೀರಿನ ಪ್ರಮಾಣ, ಒಳ ಹಾಗೂ ಹೊರ ಹರಿವು ಮತ್ತು ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳ ಮಾಹಿತಿಗಳನ್ನು ನೀಡಿದರು.
ತಾಲೂಕಿನಾದ್ಯಂತ ಮಳೆ : ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ಶಾಸಕ ಸಂಗಮೇಶ್ವರ್ ಸೂಚನೆ
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಭದ್ರಾವತಿ, ಆ. ೭: ತಾಲೂಕಿನಾದ್ಯಂತ ಮಳೆ ಹೆಚ್ಚಾಗಿದ್ದು, ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಆಡಳಿತ ತಕ್ಷಣ ಸ್ಪಂದಿಸಬೇಕೆಂದರು.
ಪ್ರವಾಹ, ರಸ್ತೆಗಳಿಗೆ ಮರಗಳು ಬಿದ್ದು ಸಂಚಾರಕ್ಕೆ ತೊಂದರೆ ಕಂಡು ಬಂದಲ್ಲಿ, ವಿದ್ಯುತ್ ಅಡಚಣೆ ಉಂಟಾದಲ್ಲಿ ಮೆಸ್ಕಾಂ, ಅರಣ್ಯ ಹಾಗು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಸ್ಪಂದಿಸಬೇಕು. ಅಗ್ನಿಶಾಮಕ ಇಲಾಖೆ ಸಹ ದಿನದ ೨೪ ಗಂಟೆ ಸೇವೆಗೆ ಲಭ್ಯವಿರಬೇಕು. ಒಟ್ಟಾರೆ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಎಚ್ಚರವಹಿಸಬೇಕೆಂದರು.
೧೦೦ ಹಾಸಿಗೆಯುಳ್ಳ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-೧೯ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಗೆ ಬರುವ ಇತರೆ ರೋಗಿಗಳಿಗೆ ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿಲ್ಲ. ಇತ್ಯಾದಿ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ವಿರುದ್ಧ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತಾಲೂಕು ಪಂಚಾಯಿತಿ ಆಡಳಿತ ನೋಡಿಕೊಳ್ಳಬೇಕು. ರೈತರಿಗೆ ಮಳೆಯಿಂದ ಎದುರಾಗುವ ಸಮಸ್ಯೆಗಳಿಗೆ ಕೃಷಿ ಇಲಾಖೆ ಪೂರಕವಾಗಿ ಸ್ಪಂದಿಸಬೇಕೆಂದರು.
ಪೌರಾಯುಕ್ತ ಮನೋಹರ್ ಮಾತನಾಡಿ, ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆ. ಉಳಿದಂತೆ ಸಂಭವಿಸಬಹುದಾದ ಘಟನೆಗಳಿಗೆ ಸ್ಪಂದಿಸಲು ಈಗಾಗಲೇ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಲ್ಲದೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸಹಾಯವಾಣಿ ಸಹ ನೀಡಲಾಗಿದೆ ಎಂದರು.
ಕೃಷಿ ಅಧಿಕಾರಿ ಶಶಿಧರ್ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಕಳೆದ ೨-೩ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಮಂಜುನಾಥ್, ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ ಮತ್ತು ವಲಯ ಅರಣ್ಯಾಧಿಕಾರಿ ಮಂಜುನಾಥ್ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.