ಗುರುವಾರ, ಆಗಸ್ಟ್ 13, 2020

ಎಸಿಬಿ ಬಲೆಗೆ ನಗರಸಭೆ ಸಿಬ್ಬಂದಿ

ಭದ್ರಾವತಿ, ಆ. ೧೩: ನಗರಸಭೆ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ಗುರುವಾರ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. 
ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್ ಎಂಬುವರು ಬಲೆಗೆ ಬಿದ್ದಿದ್ದಾರೆ. ಡಿವೈಎಸ್ಪಿ ಲೋಕೇಶ್, ತನಿಖಾ ಠಾಣಾಧಿಕಾರಿಗಳಾದ ವೀರೇಂದ್ರ, ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ವಸಂತ್, ನಾಗರಾಜ್, ರಘು, ಸುರೇಂದ್ರ, ಯೋಗೇಶ್ ಮತ್ತು ಶ್ರೀನಿವಾಸ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. 
ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ನಿವಾಸಿ ಸುಲ್ತಾನ್ ಷರೀಫ್ ಎಂಬುವವರಿಂದ ೫ ಸಾವಿರ ರು. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.



ಬುಧವಾರ, ಆಗಸ್ಟ್ 12, 2020

ಇವರು ತರಕಾರಿ ಆಭರಣ ಸುಂದರಿಯರು..!

ಭದ್ರಾವತಿ ಕಸಾಪ ವಿನೂತನ ಪ್ರಯತ್ನ ಯಶಸ್ಸು


ಭದ್ರಾವತಿ, ಆ. ೧೨: ಒಂದೆಡೆ ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಮತ್ತೊಂಡೆ ಎಲ್ಲರೂ ಒಂದೆಡೆ ಸೇರುವಂತಿಲ್ಲ. ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಚಿತ್ರಮಂದಿರಗಳಲ್ಲಿ ಕುಳಿತು ಸಂಭ್ರಮಿಸುವಂತಿಲ್ಲ. ಮನೆಯೊಳಗೆ ಇರಬೇಕಾದ ಪರಿಸ್ಥಿತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಂತರ್ಜಾಲದ ಮೂಲಕ ಮನೆಯಲ್ಲಿರುವವರನ್ನು ಸಹ ಕ್ರಿಯಾಶೀಲರನ್ನಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವೆಂಬಂತೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಮನೆಗಳಲ್ಲಿಯೇ ತರಕಾರಿ ಬಳಸಿ ಆಭರಣ ತಯಾರಿಸಿ ಧರಿಸುವ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆ ಇದೀಗ ವ್ಯಾಪಕವಾಗಿ ಗಮನ ಸೆಳೆಯುತ್ತಿದೆ.


      ಪ್ರತಿ ದಿನ ಅಡುಗೆ ತಯಾರಿಕೆಗೆ ಬಳಸುವ ತರಕಾರಿ ಬಳಸಿ ಆಭರಣ ತಯಾರಿಸುವ ವಿನೂತನ ಪ್ರಯತ್ನಕ್ಕೆ ನಗರದ ಬಹಳಷ್ಟು ಮಹಿಳೆಯರು ಮುಂದಾಗಿ ಯಶಸ್ವಿಯಾಗಿದ್ದಾರೆ. ಕ್ಯಾರೇಟ್, ಬೆಂಡೆಕಾಯಿ, ಹೀರೆಕಾಯಿ, ಸೋತೆಕಾಯಿ, ಮೂಲಂಗಿ, ಬೀನ್ಸ್, ಕಡಲೆಕಾಳು, ಬಟಾಣಿ, ಆಗಲಕಾಯಿ, ಹಸಿಮೆಣಸಿನಕಾಯಿ, ಕರಿಬೇವು ಇತ್ಯಾದಿ ಬಳಸಿ ಬಗೆ ಬಗೆಯ ಆಭರಣಗಳನ್ನು ತಯಾರಿಸಿದ್ದಾರೆ.


      ಈ ಸ್ಪರ್ಧೆಯಲ್ಲಿ ರೇಷ್ಮಾ ಭಾನು ಜಾವಿದ್ ಪಾಷ ಪ್ರಥಮ ಸ್ಥಾನ, ಅನ್ನಪೂರ್ಣಮ್ಮ ಶಂಕರಮೂರ್ತಿ ಹಾಗೂ ಲೋಹಿತಾ ನಂಜಪ್ಪ ದ್ವಿತೀಯ ಸ್ಥಾನ ಮತ್ತು ತ್ರಿವೇಣಿ ಪುಟ್ಟು ಮತ್ತು ನಂದಿನಿ ಬಾಬು ತೃತೀಯ ಸ್ಥಾನವನ್ನು ಪಡೆದಿದ್ದು, ಉಳಿದಂತೆ ಸುಜಾತಾ ಗೋಪಿನಾಥ್, ಕವಿತಾ ಸುರೇಶ್, ಧನಲಕ್ಷ್ಮಿ .ಕೆ ಮತ್ತು ಮಲ್ಲಿಕಾಂಬ ಅವರಿಗೆ ಸಮಾಧಾನಕರ ಬಹುಮಾನ ಲಭಿಸಿದೆ.
        ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದು, ಆ.೧೫ರಂದು ಸಂಜೆ ೪ ಗಂಟೆಗೆ ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಿದೆ.


ವಿದ್ಯೆ ಜೊತೆಗೆ ಉತ್ತಮ ಸಂಸ್ಕಾರ ಅಗತ್ಯ : ಮಧುಕರ್ ಕಾನಿಟ್ಕರ್


ಭದ್ರಾವತಿ ತರುಣಭಾರತಿ ವಿದ್ಯಾಕೇಂದ್ರದಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಆ. ೧೨: ಮಕ್ಕಳು ವಿದ್ಯೆ ಜೊತೆಗೆ ತ್ಯಾಗಮಯಿ ಗುಣ ಬೆಳೆಸಿಕೊಳ್ಳಬೇಕೆಂದು ತರುಣ ಭಾರತಿ ವಿದ್ಯಾಕೇಂದ್ರದ ಹಿರಿಯ ಮಾರ್ಗದರ್ಶಕರಾದ ಮಧುಕರ್ ಕಾನಿಟ್ಕರ್ ಹೇಳಿದರು.
     ಅವರು ಬುಧವಾರ ಕೇಶವಪುರ ಬಡಾವಣೆಯಲ್ಲಿರುವ ತರುಣಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಿಂದೆ ಪೋಷಕರು ಮಕ್ಕಳಿಗೆ ತಮ್ಮ ಇಡೀ ಬದುಕನ್ನು ತ್ಯಾಗ ಮಾಡಿ ವಿದ್ಯೆ, ಸಂಸ್ಕಾರ ಸೇರಿ ಎಲ್ಲವನ್ನು ನೀಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಎಲ್ಲವೂ ಬದಲಾಗಿದೆ.  ಸಮಾಜದಲ್ಲಿ ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ. ಮಕ್ಕಳು ಕೇವಲ ವಿದ್ಯೆ ಕಲಿಯುತ್ತಿದ್ದು, ಮಾನವೀಯ ಗುಣಗಳಿಂದ ದೂರ ಉಳಿಯುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
    ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯಕವಿದ್ದು, ಈ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಚಿಂತಿಸುವಂತಾಗಬೇಕೆಂದರು.
      ವೇದಿಕೆಯಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್, ನ್ಯೂಟೌನ್ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್, ರಾಚಂದ್ರ, ಚಿರಾಗ್, ಮಾಲತಿ ಕಾನಿಟ್ಕರ್, ಮಾರುತಿಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ಪೂರ್ಣಿಮಾ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ರಾಧಿಕ ನಿರೂಪಿಸಿದರು. ವಿದ್ಯಾ ಕೇಂದ್ರದ ಸಹಕಾರ್ಯದರ್ಶಿ ರಮೇಶ್ ವಂದಿಸಿದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾಕೇಂದ್ರ ಶೇ.೯೩ರಷ್ಟು ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಪುಸ್ತಕ ನೀಡಿ ಅಭಿನಂದಿಸಲಾಯಿತು.

ಬಿ.ಆರ್ ದೌಲತ್‌ರಾವ್ ಸಾಳಂಕೆ ನಿಧನ

ಭದ್ರಾವತಿ, ಆ. ೧೨: ತಾಲೂಕಿನ ಬಿಳಿಕಿ ನಿವಾಸಿ ಜಮೀನ್ದಾರ್ ಬಿ.ಆರ್ ದೌಲತ್‌ರಾವ್ ಸಾಳಂಕೆ(೭೮) ನಿಧನ ಹೊಂದಿದರು.
ಪತ್ನಿ, ೩ ಗಂಡು, ೩ ಹೆಣ್ಣು ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನೆರವೇರಿತು. ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ, ವಕೀಲರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಚಿತ್ರ: ಡಿ೧೨-ಬಿಡಿವಿಟಿ೧
ಬಿ.ಆರ್ ದೌಲತ್‌ರಾವ್ ಸಾಳಂಕೆ


ಮದ್ಯದಂಗಡಿ ವಿರುದ್ಧ ಕ್ರಮಕ್ಕೆ ಜೆಡಿಯು ಆಗ್ರಹ

ಮದ್ಯಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಸಂಯುಕ್ತ ಜನತಾದಳ ತಾಲೂಕು ಘಟಕದ ವತಿಯಿಂದ ಬುಧವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

     ಭದ್ರಾವತಿ, ಆ. ೧೨: ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ತಾಲೂಕು ಘಟಕದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ತಾಲೂಕಿನಲ್ಲಿ ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕೆಲವು ದಿನಗಳ ಹಿಂದೆ ಹೊಸ ಆನೆಕೊಪ್ಪ ಗ್ರಾಮಸ್ಥರು ಗ್ರಾಮದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
      ಈ ಮದ್ಯದಂಗಡಿಯಿಂದ ಪ್ರತಿದಿನ ಇಲ್ಲಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಎಂಆರ್‌ಪಿ ದರಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಮದ್ಯ ಸೇವೆನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಈ ಮದ್ಯದಂಗಡಿ ವಿರುದ್ಧ ಅಬಕಾರಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ.
    ಜನತಾದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್ ಗೌಡ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಮಾನವ ಹಕ್ಕುಗಳ ಹೋರಾಟ ಸಮಿತಿಯ ಎಂ.ವಿ ಚಂದ್ರಶೇಖರ್, ಪಕ್ಷದ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಯುವ ಮುಖಂಡರಾದ ಎನ್.ಆರ್ ಗಾಯಕ್‌ವಾಡ್, ಪಿ. ರಘು, ಅಜೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಂಗಳವಾರ, ಆಗಸ್ಟ್ 11, 2020

ವೃದ್ಧಾಪ್ಯ ವೇತನ ಮಂಜೂರಾತಿಗೆ ಎಎಪಿ ಆಗ್ರಹ

ಸುಮಾರು ೭-೮ ತಿಂಗಳುಗಳಿಂದ ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ವೇತನ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ, ಆ. ೧೧: ಸುಮಾರು ೭-೮ ತಿಂಗಳುಗಳಿಂದ ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ವೇತನ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರಸ್ತುತ ಎಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸರಿಯಾಗಿ ಯಾವುದೇ ಉದ್ಯೋಗ, ವಹಿವಾಟುಗಳಿಲ್ಲದೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ವೃದ್ದಾಪ್ಯ ವೇತನವಿಲ್ಲದೆ ಹಿರಿಯ ನಾಗರೀಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಹಿರಿಯ ನಾಗರೀಕರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಲಾಯಿತು.
ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೧೦ ಮಂದಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಕಳೆದ ೪ ದಿನಗಳಿಂದ ಸೀಲ್‌ಡೌನ್ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಶಿರಸ್ತೇದಾರ್ ಮಂಜಾನಾಯ್ಕರವರು ಮೊಬೈಲ್ ಮೂಲಕ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಪತ್ರಿಕೆಗೆ ಮಾಹಿತಿ ನೀಡಿದರು.
ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಮುಖಂಡ ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಶಿವಾಜಿ ಮಹಾರಾಜರ ಪುತ್ಥಳಿ ತೆರವು : ಖಂಡನೆ

ಭದ್ರಾವತಿ, ಆ. ೧೧: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವಾಜಿ ಮಹಾರಾಜರ ಪುತ್ಥಳಿ ತೆರವುಗೊಳಿಸಿರುವುದನ್ನು ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಖಂಡಿಸಿದೆ.
    ಮಣಗುತ್ತಿ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಬ್ರಿಗೇಡ್ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶಿವಾಜಿ ಮಹಾರಾಜರ ಪುತ್ಥಳಿಯನ್ನು ತೆರವುಗೊಳಿಸಿರುವುದು ಒಬ್ಬ ದಕ್ಷ ಆಡಳಿತಗಾರ, ಸಮಾಜ ಸುಧಾರಕ, ಆದರ್ಶ ವ್ಯಕ್ತಿಗೆ ಮಾಡಿರುವ ಅವಮಾನವಾಗಿದೆ.
      ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸೀಮಿತವಲ್ಲ. ಇಡೀ ಭರತ ಖಂಡದ ಒಬ್ಬ ಮಹಾನ್ ಪುರುಷ, ವಿಶ್ವದಲ್ಲೇ ಅತ್ಯಂತ ದಕ್ಷ ಆಡಳಿತಗಾರ, ಎಲ್ಲಾ ಧರ್ಮದವರನ್ನು ಪ್ರೀತಿಸುವ ಆದರ್ಶ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಇವರ ಪುತ್ಥಳಿಯನ್ನು ತೆರವುಗೊಳಿಸಿರುವುದು ಖಂಡನೀಯ ತಕ್ಷಣ ಅದೇ ಸ್ಥಳದಲ್ಲಿ ಪುಸ್ಥಳಿಯನ್ನು ಪ್ರತಿಷ್ಠಾಪಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ ಎಚ್ಚರಿಸಿದ್ದಾರೆ.