Monday, August 17, 2020

ಜಯಕರ್ನಾಟಕ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವ

ಭದ್ರಾವತಿ ತಾಲೂಕಿನ ಬಿ.ಆರ್.ಪಿ ಶಂಕರಘಟ್ಟದಲ್ಲಿ  ಜಯಕರ್ನಾಟಕ ಸಂಘಟನೆ ಹಾಗು ಸಾಧನ ಮಹಿಳಾ ವೇದಿಕೆ ವತಿಯಿಂದ ಈ ಬಾರಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವದಲ್ಲಿ ನಿವೃತ್ತ ಯೋಧ ದಯಾನಂದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭದ್ರಾವತಿ, ಆ. ೧೭:  ತಾಲೂಕಿನ ಬಿ.ಆರ್.ಪಿ ಶಂಕರಘಟ್ಟದಲ್ಲಿ  ಜಯಕರ್ನಾಟಕ ಸಂಘಟನೆ ಹಾಗು ಸಾಧನ ಮಹಿಳಾ ವೇದಿಕೆ ವತಿಯಿಂದ ಈ ಬಾರಿ ವಿಶೇಷವಾಗಿ ೭೪ನೇ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು.
     ಸಮಾರಂಭದಲ್ಲಿ ನಿವೃತ್ತ ಯೋಧ ದಯಾನಂದ್ ಹಾಗು ಬಿ.ಆರ್.ಪಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ರಮೇಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಮಾರಂಭದ ಅಧ್ಯಕ್ಷತೆ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಟಿ.ಡಿ ಶಶಿಕುಮಾರ್ ವಹಿಸಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ಅಶ್ವಿನಿ, ಜಯಕರ್ನಾಟಕ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಆರ್ ತ್ಯಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಜಯಕರ್ನಾಟಕ ಸಂಘಟನೆಯ ಹಾಗು ಮಹಿಳಾ ವೇದಿಕೆಯ ಸದಸ್ಯರುಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
  ಸಾಧನ ಮಹಿಳೆ ವೇದಿಕೆ ಕಾರ್ಯದರ್ಶಿ ಗುಣಸಾಗರಿ ಸ್ವಾಗತಿಸಿದರು.  ಮೀನಾ ವೆಂಕಟೇಶ್ ಪ್ರಾರ್ಥಿಸಿದರು.

ಜನ್ನಾಪುರ ನಗರ ಆರೋಗ್ಯ ಕೇಂದ್ರದ ಕೋವಿಡ್-೧೯ ತಪಾಸಣಾ ಕೇಂದ್ರ ಸ್ಥಳಾಂತರಕ್ಕೆ ಆಗ್ರಹ

ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ  


ಭದ್ರಾವತಿ ಜನ್ನಾಪುರ ಎನ್‌ಟಿಬಿ ಲೇಔಟ್ ನಗರಸಭಾ ಶಾಖಾ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಗರ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿರುವ ಕೋವಿಡ್-೧೯ ತಪಾಸಣಾ ಕೇಂದ್ರ.
ಭದ್ರಾವತಿ, ಆ. ೧೭: ಜನದಟ್ಟಣೆ ಅಧಿಕವಿರುವ ಜನ್ನಾಪುರ ಎನ್‌ಟಿಬಿ ಲೇಔಟ್‌ನಲ್ಲಿ ತೆರೆಯಲಾಗಿರುವ ಕೋವಿಡ್-೧೯ ತಪಾಸಣಾ ಕೇಂದ್ರವನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಐಎಸ್‌ಎಲ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಒತ್ತಾಯಿಸಿದೆ.
        ಎನ್‌ಟಿಬಿ ಲೇಔಟ್ ನಗರಸಭಾ ಶಾಖಾ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಗರ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ತಪಾಸಣಾ ಕೇಂದ್ರ ತೆರೆಯಲಾಗಿದೆ. ಈ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳಿದ್ದು, ಅಲ್ಲದೆ ಮೆಸ್ಕಾಂ ವತಿಯಿಂದ ವಿದ್ಯುತ್ ಬಿಲ್ ಪಾವತಿ ಕೇಂದ್ರ, ತಾಲೂಕು ಆಡಳಿತದಿಂದ ನೆಮ್ಮದಿ ಕೇಂದ್ರ, ನಗರಸಭೆ ವತಿಯಿಂದ ನಗರ ವಸತಿ ರಹಿತ ನಿರ್ಗತಿಕರ ಆಶ್ರಯ ತಂಗುದಾಣ ತೆರೆಯಲಾಗಿದೆ.
       ನಗರಸಭೆ ಶಾಖಾ ಕಛೇರಿಗೆ ಪ್ರತಿ ದಿನ ಬೆಳಿಗ್ಗೆ ಪೌರಕಾರ್ಮಿಕರು,  ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಬಂದು ಹೋಗುತ್ತಾರೆ. ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಕೇಂದ್ರ ಮತ್ತು ನೆಮ್ಮದಿ ಕೇಂದ್ರಗಳಿಗೆ ನೂರಾರು ಮಂದಿ ಬಂದು ಹೋಗುತ್ತಾರೆ. ಒಟ್ಟಾರೆ ಪ್ರತಿದಿನ ೫೦೦ಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ. ಅಲ್ಲದೆ ಸಮೀಪದಲ್ಲಿಯೇ ಎಂಎಸ್‌ಐಎಲ್ ಮದ್ಯದಂಗಡಿ, ೨ ಖಾಸಗಿ ಕ್ಲಿನಿಕ್‌ಗಳು, ವಿದ್ಯಾಸಂಸ್ಥೆ ಹಾಗು ಅಂಗಡಿ ಮುಂಗಟ್ಟುಗಳಿವೆ. ಈಗಾಗಲೇ ತಾಲೂಕಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನದಟ್ಟಣೆ ಅಧಿಕವಿರುವ ಸ್ಥಳದಲ್ಲಿ ಸೋಂಕು ಶೀಘ್ರವಾಗಿ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸೋಂಕು ಹೊಂದಿರುವ ವ್ಯಕ್ತಿಗಳು ಈ ಭಾಗದಲ್ಲಿ ಎಲ್ಲಿಬೇಕೆಂದರಲ್ಲಿ ಓಡಾಡುವುದು ಕಂಡು ಬರುತ್ತಿದೆ. ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-೧೯ ತಪಾಸಣಾ ಕೇಂದ್ರವನ್ನು ತಕ್ಷಣ ಸ್ಥಳಾಂತರಿಸುವಂತೆ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಕಾರ್ಯಾಧ್ಯಕ್ಷೆ ರಮಾ ವೆಂಕಟೇಶ್ ಮನವಿಯಲ್ಲಿ ಆಗ್ರಹಿಸಿದ್ದಾರೆ.  

ಜಯಮ್ಮ ನಿಧನ

ಜಯಮ್ಮ
ಭದ್ರಾವತಿ, ಆ. ೧೭:  ಹಳೇನಗರದ ಶ್ರೀ ಅಕ್ಕಮಹಾದೇವಿ ಬಳಗದ ಕಾರ್ಯದರ್ಶಿ ಅನಿತಬಸವರಾಜಯ್ಯನವರ ತಾಯಿ ಜಯಮ್ಮ ಅನಾರೋಗ್ಯದಿಂದ ನಿಧನ ಹೊಂದಿದರು.
       ತೀವ್ರ ರಕ್ತದೊತ್ತಡದಿಂದಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದು, ಮೃತರ ಅಪೇಕ್ಷೆಯಂತೆ ಅವರ ದೇಹವನ್ನು ಮೆಗ್ಗಾನ್ ವೈದ್ಯಕೀಯ ಕಾಲೇಜಿಗೆ ಶಿವಮೊಗ್ಗ ಬಸವಕೇಂದ್ರದ ಶ್ರೀ  ಬಸವಮರುಳಸಿದ್ದ ಸ್ವಾಮೀಜಿಯವರ ಸಮ್ಮುಖದಲ್ಲಿ ದೇಹದಾನ ಮಾಡಲಾಯಿತು. ಮೃತರ ನಿಧನಕ್ಕೆ ಶ್ರೀ ಅಕ್ಕಮಹಾದೇವಿ ಬಳಗ ಸಂತಾಪ ಸೂಚಿಸಿದೆ.

ಸುಗಮ ಸಂಗೀತ ಕಲಾವಿದ ಕೆ.ಆರ್ ಸುಬ್ರಮಣ್ಯ ನಿಧನ

ಕೆ.ಆರ್ ಸುಬ್ರಮಣ್ಯ
ಭದ್ರಾವತಿ, ಆ. ೧೭: ಹಳೇನಗರದ ನಿವಾಸಿ, ಆಕಾಶವಾಣಿ ಸಂಗೀತ ಕಲಾವಿದ ಕೆ.ಆರ್ ಸುಬ್ರಮಣ್ಯ ನಿಧನ ಹೊಂದಿದರು.
        ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರು ಈ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿ ಕೆಲವು ದಿನಗಳ ಹಿಂದೆ ಚಿಕಿತ್ಸೆಯಿಂದ ಗುಣಮುಖರಾಗಿದ್ದರು. ಹೃದಯ ಸಂಬಂಧಿ ಕಾಯಿಲೆ ಹಿನ್ನಲೆಯಲ್ಲಿ ತಪಾಸಣೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
       ಕೆ.ಆರ್ ಸುಬ್ರಮಣ್ಯರವರು ಬಾಲ್ಯದಿಂದಲೂ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ಸುಗಮ ಸಂಗೀತ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಆಕಾಶವಾಣಿ, ದೂರದರ್ಶನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಮಲೆನಾಡು ಕಲಾವಿದರು ತಂಡವನ್ನು ರಚಿಸಿಕೊಂಡು ಸಾರ್ವಜನಿಕ ಸಭೆ, ಸಮಾರಂಭಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಅಲ್ಲದೆ ಮನೆಯಲ್ಲಿಯೇ ಮಕ್ಕಳಿಗೆ ಸುಗಮ ಸಂಗೀತ ಹೇಳಿಕೊಡುವ ಜೊತೆಗೆ ಬೇಸಿಗೆ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದರು.
   ಜೀವನ ನಿರ್ವಹಣೆಗಾಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಪಿಗ್ಮಿ ಸಂಗ್ರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ವರ್ಷ ತ್ಯಾಗರಾಜರ ಆರಾಧನೆ ಸಂದರ್ಭದಲ್ಲಿ ತ್ಯಾಗರಾಜರ ವೇಷಭೂಷಣದೊಂದಿಗೆ ಕಂಗೊಳಿಸುತ್ತಿದ್ದರು.
     ಮೃತರ ನಿಧನಕ್ಕೆ ತಾಲೂಕು ಬ್ರಾಹ್ಮಣ ಸಮಾಜ, ಶಾಂತಲ ಕಲಾ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

Sunday, August 16, 2020

ಭದ್ರಾವತಿ ತಾಲೂಕಿನ ವಿವಿಧೆಡೆ ವಿಶಿಷ್ಟವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ


ಭದ್ರಾವತಿ, ಆ. ೧೬: ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ನಗರದ ವಿವಿಧೆಡೆ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸರಳವಾಗಿ ಆಚರಿಸಲಾಯಿತು.
          ಶಿಕ್ಷಕರಿಂದಲೇ ಪಥ ಸಂಚಲನ:
      ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುವ ಕಾರಣ ಹಾಗು ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಜನರು ಸೇರದಂತೆ ನಿರ್ಬಂಧ ವಿಧಿಸಿರುವ ಹಿನ್ನಲೆಯಲ್ಲಿ ಈ ಬಾರಿ ವಿದ್ಯಾಸಂಸ್ಥೆಯ ಶಿಕ್ಷಕರು ಪಥಸಂಚಲನ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಗೊಳಿಸಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕಿಯರಿದ್ದು, ಪಥ ಸಂಚಲನದಲ್ಲಿ ಬೆರಗುಗೊಳಿಸಿದ್ದಾರೆ.
       ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ಛೇರ‍್ಮನ್ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಹಿರಿಯರಾದ ಕೆ. ಶಾಮಣ್ಣ, ಪ್ರಧಾನ ಕಾರ್ಯದರ್ಶಿ ಎ.ಕೆ ಚಂದ್ರಪ್ಪ, ಆಡಳಿತಾಧಿಕಾರಿ ಬಸವರಾಜಪ್ಪ ಉಪಸ್ಥಿತರಿದ್ದರು. ಆರ್. ರವಿ ಸ್ವಾಗತಿಸಿದರು. ಶಶಿಕಲಾ ವಂದಿಸಿದರು. ಚಂದ್ರಕಲಾ ನಿರೂಪಿಸಿದರು.
         

         ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ವನಮಹೋತ್ಸವ:
    ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
   ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಪ್ರಭಾರಿ ನಂಜುಂಡಸ್ವಾಮಿ, ಕಾರ್ಯದರ್ಶಿ ನಕುಲ್‌ರೇವಣಕರ್, ತಾಲೂಕು ಮಂಡಲ ಕಾರ್ಯದರ್ಶಿ ಕೆ.ಆರ್ ಸತೀಶ್, ಪ್ರಮುಖರಾದ ಧನುಷ್ ಬೋಸ್ಲೆ, ಸಚಿನ್ ವರ್ಣೇಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


      ವಿಐಎಸ್‌ಎಲ್ ನಿವೃತ್ತ ನೌಕರರಿಂದ ಸ್ವಾತಂತ್ರ್ಯೋತ್ಸವ :
     ನಗರದ ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
    ಸಂಘದ ಉಪಾಧ್ಯಕ್ಷ ನರಸಿಂಹಯ್ಯ ಧ್ವಜಾರೋಹಣ ನೆರವೇರಿಸಿದರು. ಸಂಘದ ಪ್ರಮುಖರಾದ ಹನುಮಂತರಾವ್, ಮುಕುಂದಯ್ಯ, ನರಸಿಂಹಚಾರ್, ರವೀಂದ್ರ ರೆಡ್ಡಿ, ಕೆಂಪಯ್ಯ, ಲಾಸರ್, ನಂಜಪ್ಪ, ನಾಗರಾಜ, ಟಾಕಪ್ಪ, ಮಂಜುನಾಥರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


        ಕುಂಚ ಕಲಾವಿದರಿಂದ ಸ್ವಾತಂತ್ರ್ಯೋತ್ಸವ :
    ನಗರದ ತರೀಕೆರೆ ರಸ್ತೆಯಲ್ಲಿರುವ ತಾಲೂಕು ಕಂಚ ಕಲಾವಿದರ ಸಂಘದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
   ನಗರಸಭೆ ಪೌರಾಯುಕ್ತ ಮನೋಹರ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಮೊಹಮ್ಮದ್ ಸಮೀವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಹಳೇನಗರದ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ವಿ. ಚಂದ್ರು, ಹಿರಿಯ ಕಲಾವಿದ ಶಿವು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಖಜಾಂಚಿ ಹಫೀಜ್ ಉರ್ ರಹಮಾನ್ ನಿರೂಪಿಸಿದರು. ಭದ್ರಾವತಿ ಗುರು ವಂದಿಸಿದರು.
     
 
      ಪೌರಕಾರ್ಮಿಕರಿಂದ ಧ್ವಜಾರೋಹಣ:
       ಆಮ್ ಆದ್ಮಿ ಪಾರ್ಟಿ ತಾಲೂಕು ಶಾಖೆ ವತಿಯಿಂದ ತಾಲೂಕು ಕಛೇರಿ ಮುಂಭಾಗದಲ್ಲಿರುವ ಪಕ್ಷದ ಕಛೇರಿಯಲ್ಲಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
      ಈ ಬಾರಿ ಮಹಿಳಾ ಪೌರಕಾರ್ಮಿಕರಾದ ನಂಜಮ್ಮರವರು ಧ್ವಜಾರೋಹಣ ನೆರವೇರಿಸಿದರು. ನಂತರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪ್ರಮುಖರಾದ ಪರಮೇಶ್ವರಚಾರ್, ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಜೋಸೆಫ್, ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


     ಪೌರಾಯುಕ್ತರಿಂದ ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ:
     ನಗರಸಭೆ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಭಾರತರತ್ನ,  ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
   ನಗರಸಭೆ ಪೌರಾಯುಕ್ತ ಮನೋಹರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.


    ಎಂಪಿಎಂ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ:
ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಹಕಾರ ಸಂಘದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
  ಎಂಪಿಎಂ ಎಂಪ್ಲಾಯಿಸ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಕಾರ್ಯದರ್ಶಿ, ನಿರ್ದೇಶಕರುಗಳು ಪಾಲ್ಗೊಂಡಿದ್ದರು.


     ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯೋತ್ಸವ:
ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಪಕ್ಷದ ಖಾಲಿ ಜಾಗದಲ್ಲಿ ನೆರವೇರಿಸಲಾಯಿತು.
       ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಟಿ ನಾಗರಾಜ್, ಜನಾರ್ಧನ, ಎಂ. ಶಿವಕುಮಾರ್, ಬಿ.ಪಿ ರಾಘವೇಂದ್ರ, ದಿಲ್‌ದಾರ್, ಅಮೀರ್‌ಜಾನ್, ಬಿ. ಗಂಗಾಧರ್, ಶಂಕರ್‌ರಾವ್, ಸತೀಶ್, ಅಣ್ಣೋಜಿರಾವ್, ಎ.ಜಿ ರಾಧಮ್ಮ, ಕೃಷ್ಣನಾಯಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


     ಕೊರೋನಾ ವಾರಿಯರ್ಸ್‌ಗಳಿಗೆ ಸನ್ಮಾನ:
೭೪ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ತಾಲೂಕಿನ ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲೆಯ ಎಲ್‌ಕೆಜಿ, ಯುಕೆಜಿ ಸಂಸ್ಥಾಪಕರಾದ ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಪ್ರೇಮ್‌ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯ ಕೂಬಾನಾಯ್ಕ ಹಾಗು ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಇದೆ ರೀತಿ ತಾಲೂಕಿನ ಗೋಣಿಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಪಂಚಾಯಿತಿ ಸದಸ್ಯರಾದ ಯಶೋಧಮ್ಮ, ಉಷಾಕಿರಣ, ಶಾಲೆಯ ಮುಖ್ಯೋಪಾಧ್ಯಾಯ ಬಸವಕುಮಾರ್ ಹಾಗು ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.


       ಹಿರಿಯ ಕಾರ್ಮಿಕನಿಂದ ಧ್ವಜಾರೋಹಣ:
     ಕಳೆದ ಸುಮಾರು ೬ ವರ್ಷಗಳಿಂದ ಯಂತ್ರಗಳು ಸ್ಥಗಿತಗೊಂಡು ಮುಚ್ಚಲ್ಪಟ್ಟಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಖಾನೆಯ ಮುಖ್ಯದ್ವಾರದಲ್ಲಿ ಜರುಗಿತು.
      ಕಾರ್ಖಾನೆಯ ಹಿರಿಯ ಕಾರ್ಮಿಕ ಟಿ.ಜಿ ಬಸವರಾಜಯ್ಯ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಅಧಿಕಾರಿ ಸತೀಶ್ ಉಪಸ್ಥಿತರಿದ್ದರು. ಭದ್ರತಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.


    ಛಲವಾದಿ ಸಮಾಜದಿಂದ ಸ್ವಾತಂತ್ರ್ಯೋತ್ಸವ:
   ನ್ಯೂಟೌನ್ ಜಯಶ್ರೀ ವೃತ್ತದ ಬಳಿ ಇರುವ ತಾಲೂಕು ಛಲವಾದಿ(ಪರಿಶಿಷ್ಟ) ಸಮಾಜದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
   ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್, ಹಿರಿಯರಾದ ಎಸ್.ಎಸ್ ಭೈರಪ್ಪ, ಸತೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

    ಛಾಯಗ್ರಾಹಕರ ಸಂಘದಿಂದ ಸ್ವಾತಂತ್ರ್ಯೋತ್ಸವ:
೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ಪತ್ತಿನ ಸೌಹಾರ್ದ ಸಹಕಾರ ಸಂಘದ ವತಿಯಿಂದ ಆಚರಿಸಲಾಯಿತು.
    ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮೇಘ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

     ಒಕ್ಕಲಿಗರ ಸಂಘದಿಂದ ಸ್ವಾತಂತ್ರ್ಯೋತ್ಸವ:
   ತಾಲೂಕು ಒಕ್ಕಲಿಗರ ಸಂಘ ಹಾಗೂ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದ ಉದ್ಯಾನವನದಲ್ಲಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
    ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ ರಮೇಶ್, ಕಾರ್ಯದರ್ಶಿ ಪ್ರಶಾಂತ್, ಸಿ.ಎನ್ ರಾಮಕೃಷ್ಣ, ಮೂರ್ತಿ, ಉಮೇಶ್, ರಾಜಣ್ಣ, ಶ್ರೀನಿವಾಸ್, ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಉಪಾಧ್ಯಕ್ಷೆ ಲೋಹಿತ ನಂಜಪ್ಪ, ಕಾರ್ಯದರ್ಶಿ ಕೆ. ರಾಧಾ, ಶಕುಂತಲಾ ರಾಮಚಂದ್ರ, ಸರಸ್ವತಿ, ಹೇಮಲತಾ, ಗೀತಾ ಕುಮಾರ್, ಗೌರಿ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
       
      
         ನೀರುಗಂಟಿಗಳಿಗೆ ಸನ್ಮಾನ:
  ನಗರದ ಹೊಳೆಹೊನ್ನೂರು ರಸ್ತೆ ಅನ್ವರ್‌ಕಾಲೋನಿಯಲ್ಲಿರುವ ಕೆಜಿಎನ್ ನೌಜವಾನ್ ಕಮಿಟಿಯಿಂದ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ನೀರುಗಂಟಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
     ನಗರಸಭೆ ಇಂಜಿನಿಯರ್ ಎಸ್.ಆರ್ ಸತೀಶ್, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖದೀರ್, ಕಮಿಟಿ ಅಧ್ಯಕ್ಷ ಅಸದುಲ್ಲಾ ಖಾನ್, ಉಪಾಧ್ಯಕ್ಷ ಶಾಹಿದ್, ಗೌರವಾಧ್ಯಕ್ಷ ಮುಸ್ತಾಫ್, ಇಮ್ರಾನ್, ಜಹಿರುದ್ದಿನ್ ಹಾಜಿ, ರಂಗ, ಸಲೀಂ ಅಮ್ಜದ್, ಮುನೀರ್ ಅಹಮದ್ ಕುಂಸಿ, ನಜರುಲ್ಲಾ, ಇಬ್ರಾಹಿಂ ಸಾಬ್, ರಿಯಾಜ್ ನದೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


      ಕೇರಳ ಸಮಾಜದ ವತಿಯಿಂದ ಸ್ವಾತಂತ್ರ್ಯೋತ್ಸವ :
     ಪ್ರತಿವರ್ಷದಂತೆ ಈ ಬಾರಿ ಸಹ ತಾಲೂಕು ಕೇರಳ ಸಮಾಜಂ ವತಿಯಿಂದ ಸಂಘದ ಕಛೇರಿಯಲ್ಲಿ ೭೪ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
  ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಧ್ವಜಾರೋಹಣದೊಂದಿಗೆ ಪರಸ್ಪರ ಶುಭಾಶಯ ಕೋರಿದರು.

Saturday, August 15, 2020

೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪ ಲೋಕಾರ್ಪಣೆ

ಭದ್ರಾವತಿ ಹಳೇನಗರದಲ್ಲಿ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.
ಭದ್ರಾವತಿ, ಆ. ೧೫: ಸುಮಾರು ೫ ದಶಕಗಳಷ್ಟು ಹಳೇಯದಾದ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ರಂಗ ಚಟುವಟಿಕೆಗಳಿಗೆ ನೆಲೆಯಾಗಿರವ ಕನಕ ಮಂಟಪ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರ ಲೋಕಾರ್ಪಣೆಗೊಂಡಿತು.
         ಈ ಹಿಂದೆ ನಿರ್ಮಾಣಗೊಂಡಿದ್ದ ಕಟ್ಟಡ ಶಿಥಿಲಗೊಂಡ ಪರಿಣಾಮ ಸುಮಾರು ೨ ದಶಕಗಳಿಂದ ರಂಗ ಚಟುವಟಿಕೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಇಲ್ಲದೆ ಸಾಕಷ್ಟು ಕಲಾತಂಡಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಹಿನ್ನಡೆ ಕಂಡುಕೊಂಡಿದ್ದವು.
         ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಹಾಗು ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಕೈಗೊಂಡ ಪರಿಶ್ರಮದ ಫಲವಾಗಿ ಶಿಥಿಲಗೊಂಡ ಕಟ್ಟಡ ನೆಲಸಮಗೊಂಡು ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಈ ಕಟ್ಟಡ ೫೪ ಅಡಿ ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದು,  ೩೨ ಅಡಿ ವೇದಿಕೆಯನ್ನು ಹೊಂದಿದೆ. ೨ ಪ್ರತ್ಯೇಕ ಕೊಠಡಿ, ಮಧ್ಯಭಾಗದಲ್ಲಿ ವಿಶಾಲವಾದ ಕೊಠಡಿ, ೨ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಅಲ್ಲದೆ ಹೊರ ಭಾಗದಲ್ಲಿ ಆಕರ್ಷಕ ಕಲಾಕೃತಿಗಳೊಂದಿಗೆ ಕಂಗೊಳಿಸುತ್ತಿದೆ.
    ಕಲಾವಿದರ ೨ ದಶಕಗಳ ಕನಸು ನನಸಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.

ವಿಐಎಸ್‌ಎಲ್ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕೇಂದ್ರ ಸರ್ಕಾರಿ ಸ್ವಾಮ್ಯದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
ಭದ್ರಾವತಿ, ಆ. ೧೫: ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
     ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್  ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾ ಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಬಿ. ವಿಶ್ವನಾಥ್, ಹಿರಿಯ ಅಧಿಕಾರಿಗಳು, ಕಾರ್ಮಿಕರ ಸಂಘ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
       ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ, ನಗರಾಡಳಿ ಮತ್ತು ರಕ್ಷಣಾ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.