Tuesday, August 18, 2020

ವಿಐಎಸ್‌ಎಲ್-ಎಂಪಿಎಂ ಅಭಿವೃದ್ಧಿಗಾಗಿ ಜಿಲ್ಲಾ ಬಿಜೆಪಿ ಘಟಕ ಹೋರಾಟ : ಮೇಘರಾಜ್


ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಮಾತನಾಡಿದರು.
ಭದ್ರಾವತಿ, ಆ. ೧೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ಜಿಲ್ಲಾಧ್ಯಕ್ಷ ಮೇಘರಾಜ್ ತಿಳಿಸಿದರು.
        ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜಕೀಯ ಪಕ್ಷವಾದರೂ ಸಹ ಇತರೆ ರಾಜಕೀಯ ಪಕ್ಷಗಳಿಗಿಂತ ಭಿನ್ನತೆಯನ್ನು ಹೊಂದಿದೆ. ದೇಶದ ಸಂಸ್ಕೃತಿ, ಆಚಾರ-ವಿಚಾರ, ದೇಶ ಭಕ್ತಿ, ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಸಹ ಗಮನ ಹರಿಸುತ್ತಿದೆ ಎಂದರು.
      ಕೋವಿಡ್-೧೯ರ ಹಿನ್ನಲೆಯಲ್ಲಿ ಈ ಬಾರಿ ಪಕ್ಷ ಸಂಘಟನೆ ವಿಳಂಬವಾಗಿದ್ದು, ಇದೀಗ ಜಿಲ್ಲೆಯ ಎಲ್ಲಾ ೧೦ ಮಂಡಲಗಳಲ್ಲಿ ಸಂಘಟನೆಗಳನ್ನು ಪುನಃ ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೇ ೩ ಮಂಡಲಗಳ ಪ್ರವಾಸ ಮುಕ್ತಾಯಗೊಂಡಿದ್ದು, ಇದೀಗ ೪ನೇ ಪ್ರವಾಸ ಭದ್ರಾವತಿಯಲ್ಲಿ ನಡೆಯುತ್ತಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಅಗತ್ಯವಿದೆ ಎಂದರು.
     ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಎಲ್ಲಾ ತಂತ್ರಗಾರಿಕೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಮತದಾರರು ಸಹ ಬಿಜೆಪಿ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
     ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು : ಖಂಡನೆ

ಬೆಳಗಾವಿ ಜಿಲ್ಲೆಯ ಪೀರನವಾಡಿ (ಚನ್ನಪಟ್ಟಣ) ಗ್ರಾಮದಲ್ಲಿ ಆ.೧೫ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹಾಗು ತೆರವುಗೊಳಿಸಿರುವ ಸ್ಥಳದಲ್ಲಿಯೇ ಸರ್ಕಾರವೇ ಪುನಃ ಪ್ರತಿಮೆಯನ್ನು  ಸ್ಥಾಪಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘ, ಕನಕ ಯುವಪಡೆವತಿಯಿಂದ ಮಂಗಳವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಷ್ಠಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಭದ್ರಾವತಿ, ಆ. ೧೮: ಬೆಳಗಾವಿ ಜಿಲ್ಲೆಯ ಪೀರನವಾಡಿ (ಚನ್ನಪಟ್ಟಣ) ಗ್ರಾಮದಲ್ಲಿ ಆ.೧೫ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹಾಗು ತೆರವುಗೊಳಿಸಿರುವ ಸ್ಥಳದಲ್ಲಿಯೇ ಸರ್ಕಾರವೇ ಪುನಃ ಪ್ರತಿಮೆಯನ್ನು  ಸ್ಥಾಪಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘ, ಕನಕ ಯುವಪಡೆವತಿಯಿಂದ ಮಂಗಳವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
      ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ವೀರ ಮರಣ ಹೊಂದಿದ ಅಪ್ರತಿಮ ನಾಯಕನಾಗಿದ್ದು, ಸಮಾಜದ ಎಲ್ಲರನ್ನು ಸಂಘಟಿಸಿ ಜಾತ್ಯಾತೀತವಾಗಿ ಹೋರಾಟ ನಡೆಸುವ ಮೂಲಕ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಮಹಾನ್ ಆದರ್ಶ ವ್ಯಕ್ತಿ ಆ.೧೫ರಂದು ಜನ್ಮತಾಳಿರುವುದು ಈ ನಾಡಿನ ಸೌಭಾಗ್ಯವಾಗಿದೆ. ಅವರ ಹುಟ್ಟುಹಬ್ಬದ ದಿನದಂದು ಪ್ರತಿಮೆ ಸ್ಥಳಾಂತರ ಮಾಡಿರುವುದು ಕೇವಲ ಕುರುಬ ಸಮಾಜಕ್ಕೆ ಮಾಡಿರುವ ಅವಮಾನವಲ್ಲ. ಇಡೀ ದೇಶದ ಜನರಿಗೆ ಮಾಡಿರುವ ಅವಮಾನವಾಗಿದೆ. ಈ ದುರ್ಘಟನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
        ತಕ್ಷಣ ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯನ್ನು ಸರ್ಕಾರವೇ ಪ್ರತಿಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಬೇಕು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಸಂಗೊಳ್ಳಿ ರಾಯಣ್ಣರವರ ಹೆಸರು ತೆಗೆದು ಹಾಕುವ ಹುನ್ನಾರಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಹೆಸರನ್ನು ಕೈಬಿಡಬಾರದು ಶಾಶ್ವತವಾಗಿ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
      ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸಂತೋಷ್, ಉಪಾಧ್ಯಕ್ಷ ಸಣ್ಣಯ್ಯ, ಕಾರ್ಯದರ್ಶಿ ರಾಜೇಶ್, ಖಜಾಂಚಿ ವಸಂತ, ನಿರ್ದೇಶಕರಾದ ಮಂಜುನಾಥ್, ಯೋಗಾನಂದ, ರಾಜಪ್ಪ, ಸತ್ಯ(ಕೋಡಿಹಳ್ಳಿ), ಕನಕ ಯುವಪಡೆ ಅಧ್ಯಕ್ಷ ಜೆ. ಕುಮಾರ, ಜಿ. ವಿನೋದ್‌ಕುಮಾರ್, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಕೇಸರಿ ಪಡೆ ಗಿರೀಶ್, ಮಂಜುನಾಥ್ ಕೊಯ್ಲಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, August 17, 2020

ಕೊರೋನಾ ಸೋಂಕು ಇಬ್ಬರು ಮೃತ : ಅಂತ್ಯಕ್ರಿಯೆ


ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಸೋಮವಾರ ಇಬ್ಬರು ಮುಸ್ಲಿಂ ಸಮುದಾಯವರು ಮೃತಪಟ್ಟಿದ್ದು, ಕೋವಿಡ್ ಮಾದರಿಯಂತೆ ಇವರ ಅಂತ್ಯಕ್ರಿಯೆ ನಡೆಸಲಾಯಿತು.
ಭದ್ರಾವತಿ, ಆ. ೧೭: ಕೊರೋನಾ ಸೋಂಕಿನಿಂದ ಸೋಮವಾರ ಇಬ್ಬರು ಮುಸ್ಲಿಂ ಸಮುದಾಯವರು ಮೃತಪಟ್ಟಿದ್ದು, ಕೋವಿಡ್ ಮಾದರಿಯಂತೆ ಇವರ ಅಂತ್ಯಕ್ರಿಯೆ ನಡೆಸಲಾಗಿದೆ.
       ಓರ್ವ ವ್ಯಕ್ತಿಯ ಅಂತ್ಯಕ್ರಿಯೆ ತರೀಕೆರೆ ರಸ್ತೆಯಲ್ಲಿರುವ ಖಬರ್‌ಸ್ತಾನ್‌ನಲ್ಲಿ ಹಾಗು ಇನ್ನೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ತಿಮ್ಲಾಪುರ ಖಬರ್‌ಸ್ತಾನ್‌ನಲ್ಲಿ ನಡೆಸಲಾಗಿದೆ.
      ಅಂತ್ಯಕ್ರಿಯೆಯಲ್ಲಿ ಪೌರಾಯುಕ್ತ ಮನೋಹರ್, ಆರೋಗ್ಯ ಇಲಾಖೆ ಹಾಗು ನಗರಸಭೆ ಸಿಬ್ಬಂದಿಗಳು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪಾಲ್ಗೊಂಡಿದ್ದರು.



ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಶಿಕ್ಷಣ ಮೊಟಕುಗೊಳಿಸದಿರಿ : ಟಿ.ಎಸ್ ಸುಮನಾ

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿನಿಯರು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.
ಭದ್ರಾವತಿ, ಆ. ೧೭: ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಶಿಕ್ಷಣ ಮೊಟಕುಗೊಳಿಸಬಾರದು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕೆಂದು ನಗರದ ನ್ಯೂಟೌನ್ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಉಪಪ್ರಾಚಾರ್ಯರಾದ ಟಿ.ಎಸ್ ಸುಮನಾ ಹೇಳಿದರು.
     ಅವರು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಸುಶಿಕ್ಷಿತ ಮತ್ತು ಸುಸಂಸ್ಕೃತ ವಿದ್ಯಾರ್ಥಿಗಳು ಮಾತ್ರವೇ ಆರೋಗ್ಯಕರ ಸಮಾಜ ಮತ್ತು ದೇಶವನ್ನು ನಿರ್ಮಿಸಬಲ್ಲರು. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು ಎಂದರು.
       ಪಿ. ಸ್ಪರ್ಶ, ಎಚ್.ಎಸ್ ಪ್ರೀತಿ, ಸಿ. ವಾತ್ಸಲ್ಯ ಸಿ. ಜೋಗಿ, ಕೆ. ಪ್ರೇರಣಾ, ಜ್ಞಾನಾಮೃತ ಸೇರಿದಂತೆ ಒಟ್ಟು ೧೧ ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕಗಳನ್ನು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದುಕೊಂಡಿದ್ದಾರೆ.
     ವಿಶೇಷವಾಗಿ ಈ ವಿದ್ಯಾರ್ಥಿನಿಯರ ಸವಿ ನೆನಪಿಗಾಗಿ ಇವರ ಹೆಸರಿನಲ್ಲಿ ಶಾಲಾ ಆವರಣದಲ್ಲಿ ಒಂದೊಂದು ಸಸಿಗಳನ್ನು ನೆಡಲಾಯಿತು. ಶಿಕ್ಷಕರಾದ ಎಂ.ಬಿ ಮಂಜುನಾಥ್, ಮೆಹಬೂಬ್ ಆಲಿ ಖಾನ್, ಸತ್ಯನಾರಾಯಣ ಭಟ್, ಟಿ.ಎಲ್ ಸುಬ್ರಾಯ, ಗಾಯತ್ರಿ ಹೆಗಡೆ ಸೇರಿದಂತೆ ಇನ್ನಿತರರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಜಯಕರ್ನಾಟಕ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವ

ಭದ್ರಾವತಿ ತಾಲೂಕಿನ ಬಿ.ಆರ್.ಪಿ ಶಂಕರಘಟ್ಟದಲ್ಲಿ  ಜಯಕರ್ನಾಟಕ ಸಂಘಟನೆ ಹಾಗು ಸಾಧನ ಮಹಿಳಾ ವೇದಿಕೆ ವತಿಯಿಂದ ಈ ಬಾರಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವದಲ್ಲಿ ನಿವೃತ್ತ ಯೋಧ ದಯಾನಂದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭದ್ರಾವತಿ, ಆ. ೧೭:  ತಾಲೂಕಿನ ಬಿ.ಆರ್.ಪಿ ಶಂಕರಘಟ್ಟದಲ್ಲಿ  ಜಯಕರ್ನಾಟಕ ಸಂಘಟನೆ ಹಾಗು ಸಾಧನ ಮಹಿಳಾ ವೇದಿಕೆ ವತಿಯಿಂದ ಈ ಬಾರಿ ವಿಶೇಷವಾಗಿ ೭೪ನೇ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು.
     ಸಮಾರಂಭದಲ್ಲಿ ನಿವೃತ್ತ ಯೋಧ ದಯಾನಂದ್ ಹಾಗು ಬಿ.ಆರ್.ಪಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ರಮೇಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಮಾರಂಭದ ಅಧ್ಯಕ್ಷತೆ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಟಿ.ಡಿ ಶಶಿಕುಮಾರ್ ವಹಿಸಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ಅಶ್ವಿನಿ, ಜಯಕರ್ನಾಟಕ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಆರ್ ತ್ಯಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಜಯಕರ್ನಾಟಕ ಸಂಘಟನೆಯ ಹಾಗು ಮಹಿಳಾ ವೇದಿಕೆಯ ಸದಸ್ಯರುಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
  ಸಾಧನ ಮಹಿಳೆ ವೇದಿಕೆ ಕಾರ್ಯದರ್ಶಿ ಗುಣಸಾಗರಿ ಸ್ವಾಗತಿಸಿದರು.  ಮೀನಾ ವೆಂಕಟೇಶ್ ಪ್ರಾರ್ಥಿಸಿದರು.

ಜನ್ನಾಪುರ ನಗರ ಆರೋಗ್ಯ ಕೇಂದ್ರದ ಕೋವಿಡ್-೧೯ ತಪಾಸಣಾ ಕೇಂದ್ರ ಸ್ಥಳಾಂತರಕ್ಕೆ ಆಗ್ರಹ

ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ  


ಭದ್ರಾವತಿ ಜನ್ನಾಪುರ ಎನ್‌ಟಿಬಿ ಲೇಔಟ್ ನಗರಸಭಾ ಶಾಖಾ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಗರ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿರುವ ಕೋವಿಡ್-೧೯ ತಪಾಸಣಾ ಕೇಂದ್ರ.
ಭದ್ರಾವತಿ, ಆ. ೧೭: ಜನದಟ್ಟಣೆ ಅಧಿಕವಿರುವ ಜನ್ನಾಪುರ ಎನ್‌ಟಿಬಿ ಲೇಔಟ್‌ನಲ್ಲಿ ತೆರೆಯಲಾಗಿರುವ ಕೋವಿಡ್-೧೯ ತಪಾಸಣಾ ಕೇಂದ್ರವನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಐಎಸ್‌ಎಲ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಒತ್ತಾಯಿಸಿದೆ.
        ಎನ್‌ಟಿಬಿ ಲೇಔಟ್ ನಗರಸಭಾ ಶಾಖಾ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಗರ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ತಪಾಸಣಾ ಕೇಂದ್ರ ತೆರೆಯಲಾಗಿದೆ. ಈ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳಿದ್ದು, ಅಲ್ಲದೆ ಮೆಸ್ಕಾಂ ವತಿಯಿಂದ ವಿದ್ಯುತ್ ಬಿಲ್ ಪಾವತಿ ಕೇಂದ್ರ, ತಾಲೂಕು ಆಡಳಿತದಿಂದ ನೆಮ್ಮದಿ ಕೇಂದ್ರ, ನಗರಸಭೆ ವತಿಯಿಂದ ನಗರ ವಸತಿ ರಹಿತ ನಿರ್ಗತಿಕರ ಆಶ್ರಯ ತಂಗುದಾಣ ತೆರೆಯಲಾಗಿದೆ.
       ನಗರಸಭೆ ಶಾಖಾ ಕಛೇರಿಗೆ ಪ್ರತಿ ದಿನ ಬೆಳಿಗ್ಗೆ ಪೌರಕಾರ್ಮಿಕರು,  ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಬಂದು ಹೋಗುತ್ತಾರೆ. ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಕೇಂದ್ರ ಮತ್ತು ನೆಮ್ಮದಿ ಕೇಂದ್ರಗಳಿಗೆ ನೂರಾರು ಮಂದಿ ಬಂದು ಹೋಗುತ್ತಾರೆ. ಒಟ್ಟಾರೆ ಪ್ರತಿದಿನ ೫೦೦ಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ. ಅಲ್ಲದೆ ಸಮೀಪದಲ್ಲಿಯೇ ಎಂಎಸ್‌ಐಎಲ್ ಮದ್ಯದಂಗಡಿ, ೨ ಖಾಸಗಿ ಕ್ಲಿನಿಕ್‌ಗಳು, ವಿದ್ಯಾಸಂಸ್ಥೆ ಹಾಗು ಅಂಗಡಿ ಮುಂಗಟ್ಟುಗಳಿವೆ. ಈಗಾಗಲೇ ತಾಲೂಕಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನದಟ್ಟಣೆ ಅಧಿಕವಿರುವ ಸ್ಥಳದಲ್ಲಿ ಸೋಂಕು ಶೀಘ್ರವಾಗಿ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸೋಂಕು ಹೊಂದಿರುವ ವ್ಯಕ್ತಿಗಳು ಈ ಭಾಗದಲ್ಲಿ ಎಲ್ಲಿಬೇಕೆಂದರಲ್ಲಿ ಓಡಾಡುವುದು ಕಂಡು ಬರುತ್ತಿದೆ. ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-೧೯ ತಪಾಸಣಾ ಕೇಂದ್ರವನ್ನು ತಕ್ಷಣ ಸ್ಥಳಾಂತರಿಸುವಂತೆ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಕಾರ್ಯಾಧ್ಯಕ್ಷೆ ರಮಾ ವೆಂಕಟೇಶ್ ಮನವಿಯಲ್ಲಿ ಆಗ್ರಹಿಸಿದ್ದಾರೆ.  

ಜಯಮ್ಮ ನಿಧನ

ಜಯಮ್ಮ
ಭದ್ರಾವತಿ, ಆ. ೧೭:  ಹಳೇನಗರದ ಶ್ರೀ ಅಕ್ಕಮಹಾದೇವಿ ಬಳಗದ ಕಾರ್ಯದರ್ಶಿ ಅನಿತಬಸವರಾಜಯ್ಯನವರ ತಾಯಿ ಜಯಮ್ಮ ಅನಾರೋಗ್ಯದಿಂದ ನಿಧನ ಹೊಂದಿದರು.
       ತೀವ್ರ ರಕ್ತದೊತ್ತಡದಿಂದಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದು, ಮೃತರ ಅಪೇಕ್ಷೆಯಂತೆ ಅವರ ದೇಹವನ್ನು ಮೆಗ್ಗಾನ್ ವೈದ್ಯಕೀಯ ಕಾಲೇಜಿಗೆ ಶಿವಮೊಗ್ಗ ಬಸವಕೇಂದ್ರದ ಶ್ರೀ  ಬಸವಮರುಳಸಿದ್ದ ಸ್ವಾಮೀಜಿಯವರ ಸಮ್ಮುಖದಲ್ಲಿ ದೇಹದಾನ ಮಾಡಲಾಯಿತು. ಮೃತರ ನಿಧನಕ್ಕೆ ಶ್ರೀ ಅಕ್ಕಮಹಾದೇವಿ ಬಳಗ ಸಂತಾಪ ಸೂಚಿಸಿದೆ.