ಮಾಜಿ ಶಾಸಕ ಎಂ.ಜೆ ಅಪ್ಪಾಜಿ
ಭದ್ರಾವತಿ, ಸೆ. ೩: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿದ್ದು, ೩ ಬಾರಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿ(೬೭) ಬುಧವಾರ ರಾತ್ರಿ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳನ್ನು ಹೊಂದಿದ್ದರು. ಅಪ್ಪಾಜಿಯವರಿಗೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ನಂತರ ಮೃತಪಟ್ಟಿದ್ದಾರೆ. ಈ ನಡುವೆ ಅಪ್ಪಾಜಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹಿಂದೆ ೨ ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ರಕ್ತದೊತ್ತಡ, ಮಧುಮೇಹದಿಂದ ಸಹ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಾಮಾನ್ಯ ಕಾರ್ಮಿಕ:
ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಿಗೆ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡು ಕೊಂಡರು.
ಮೊದಲ ಚುನಾವಣೆಯಲ್ಲಿ ಸೋಲು:
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯಿತರು, ಒಕ್ಕಲಿಗರು ಮತ್ತು ಮುಸ್ಲಿಂ ಸಮುದಾಯದವರು ಪ್ರತಿ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಪ್ಪಾಜಿ ಮೊದಲ ಬಾರಿಗೆ ೧೯೮೯ರಲ್ಲಿ ಜೆಎನ್‌ಪಿ ಪಕ್ಷದ ಅಭ್ಯರ್ಥಿಯಾಗಿ ಅಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಎಸ್. ಇಸಾಮಿಯಾ ವಿರುದ್ಧ ಸ್ಪರ್ಧಿಸಿ ಪರಾವಗೊಂಡಿದ್ದರು.
೧೯೯೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಪ್ಪಾಜಿ ಜೆಡಿ ಪಕ್ಷದ ಅಭ್ಯರ್ಥಿ ಬಿ.ಪಿ ಶಿವಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. ನಂತರ ೧೯೯೦ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್ ವಿರುದ್ಧ ಗೆಲುವು ಸಾಧಿಸಿದ್ದರು. ಮುಂದಿನ ೨ ಚುನಾವಣೆಯಲ್ಲೂ ಸೋಲು ಕಂಡಿದ್ದರು. ನಂತರ ೨೦೧೩ರ ಚುನಾವಣೆಯಲ್ಲಿ ೩ನೇ ಬಾರಿಗೆ ಗೆಲುವು ಸಾಧಿಸಿದ್ದರು. ೨೦೧೮ರ ಚುನಾವಣೆಯಲ್ಲಿ ಪುನಃ ಸಂಗಮೇಶ್ವರ್ ವಿರುದ್ಧ ಪರಾಭವಗೊಂಡಿದ್ದರು.
ಅಧಿಕಾರ ಇಲ್ಲದಿದ್ದರೂ ವರ್ಚಸ್ಸಿನ ನಾಯಕ:
ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ನಿಧನದಿಂದ ಕ್ಷೇತ್ರದ ರಾಜಕಾರಣದ ೩ ದಶಕಗಳ ಕೊಂಡಿ ಕಳಚಿ ಬಿದ್ದಂತಾಗಿದೆ.
ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಿದ ನಾಯಕ:
ದೇಶಾದ್ಯಂತ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕ್ಷೇತ್ರದ ಶ್ರೀಸಾಮಾನ್ಯರ ನೆರವಿಗೆ ಅಪ್ಪಾಜಿ ಧಾವಿಸುವ ಮೂಲಕ ಅಧಿಕಾರ ಇಲ್ಲದಿದ್ದರೂ ಸಹ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಕೊನೆಯವರೆಗೂ ರೈತರು, ಕಾರ್ಮಿಕರು ಹಾಗೂ ಬಡವರ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗ ಆಸ್ಪತ್ರೆಯೊಂದರ ಹಣದಾಹಕ್ಕೆ ಬಲಿಯಾದ ತಾಲೂಕಿನ ಬಡ ಕುಟುಂಬದ ಪರವಾಗಿ ಹೋರಾಟ, ತಾಲೂಕಿನ ತಾವರಘಟ್ಟ ಸ್ಮಶಾನ ಭೂಮಿ ಸಂಬಂಧ ರೈತರ ಪರ ಹೋರಾಟ ಸೇರಿದಂತೆ ಇನ್ನಿತರ ಹೋರಾಟಗಳು ಅಪ್ಪಾಜಿಯವರ ಕೊನೆಯ ಹೋರಾಟಗಳಾಗಿವೆ.
ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಎಂದರೆ ಅಪ್ಪಾಜಿ :
ಉಕ್ಕಿನ ನಗರದಲ್ಲಿ ದೇಶದ ಎರಡನೇ ಅತಿದೊಡ್ಡ ಉಕ್ಕಿನ ಮತ್ತು ಕಬ್ಬಿಣ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆಗಳು ಆರಂಭಗೊಂಡರೂ ಸಹ ನಗರಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಕೊರತೆ ಎದ್ದು ಕಾಣುತ್ತಿತ್ತು. ಬಸ್ ನಿಲ್ದಾಣ ನಿರ್ಮಾಣಕ್ಕೆ ಹಲವು ಸವಾಲುಗಲು ಎದುರಾಗಿದ್ದವು. ಎಲ್ಲಾ ಸಮಸ್ಯೆ ನಿವಾರಣೆ ಮಾಡುವ ಮೂಲಕ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ೨ ದಶಕಗಳ ಹಿಂದೆ ಅಂದರೆ ಜು.೯, ೨೦೦೦ ಇಸವಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಂತರ ಆ.೧೧, ೨೦೦೨ರಲ್ಲಿ ಉದ್ಘಾಟನೆಗೊಂಡಿತು. ಈಗಲೂ ಬಸ್ ನಿಲ್ದಾಣ ಎಂದರೆ ಅಪ್ಪಾಜಿ ನೆನಪು ಮಾಡಿಕೊಳ್ಳುತ್ತಾರೆ ಕ್ಷೇತ್ರದ ನಾಗರೀಕರು.
ಕ್ಷೇತ್ರದಲ್ಲಿ ಮಾಜಿ ಶಾಸಕರೇ ಇಲ್ಲ:
ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪಂದಿಸಿ ಆಯ್ಕೆಯಾಗಿದ್ದ ಮಾಜಿ ಶಾಸಕರೆಲ್ಲರೂ ತಮ್ಮ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ೧೯೫೭ರಲ್ಲಿ ಮೊದಲ ಶಾಸಕರಾಗಿದ್ದ ಡಿ.ಟಿ ಸೀತಾರಾಮರಾವ್, ೧೯೬೨ರಲ್ಲಿ ಕ್ಷೇತ್ರದ ಎರಡನೇ ಶಾಸಕರಾಗಿದ್ದ ಟಿ.ಡಿ ದೇವೇಂದ್ರಪ್ಪ, ೧೯೬೭ ಹಾಗೂ ೧೯೭೨ರಲ್ಲಿ ೩ ಮತ್ತು ೪ನೇ ಶಾಸಕರಾಗಿದ್ದ ಅಬ್ದುಲ್ ಖುದ್ದೂಸ್ ಅನ್ವರ್, ೧೯೭೮ರಲ್ಲಿ ೫ನೇ ಶಾಸಕರಾಗಿದ್ದ ಜಿ. ರಾಜಶೇಖರ್, ೧೯೮೩ ಮತ್ತು ೧೯೮೫ರಲ್ಲಿ ೬ ಹಾಗು ೭ನೇ ಶಾಸಕರಾಗಿದ್ದ ಸಾಲೇರ ಎಸ್ ಸಿದ್ದಪ್ಪ, ೧೯೮೯ರಲ್ಲಿ ೮ನೇ ಶಾಸಕರಾಗಿದ್ದ ಎಸ್ ಇಸಾಮಿಯಾ ಮತ್ತು ೧೯೯೪, ೧೯೯೯ ಮತ್ತು ೨೦೧೩ರಲ್ಲಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿ ಇದೀಗ ನಿಧನ ಹೊಂದಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಮಾಜಿ ಶಾಸಕರು ಯಾರು ಇಲ್ಲದಂತಾಗಿದೆ.
ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನ್ಯೂಟೌನ್‌ನಲ್ಲಿರುವ ನಿವಾಸದ ಮುಂದೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪಾರ್ಥಿವ ಶರೀರದ ಅಂತಿಮ ದರ್ಶನ:
ನ್ಯೂಟೌನ್ ಪೊಲೀಸ್ ಉಪಾಧೀಕ್ಷಕರ ಕಛೇರಿ ಮುಂಭಾಗದಲ್ಲಿರುವ ಅಪ್ಪಾಜಿ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಗಣ್ಯರು, ಧಾರ್ಮಿಕ ಮುಖಂಡರು, ಕಾರ್ಮಿಕ ಹಾಗು ರೈತ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಕೆ.ಬಿ ಅಶೋಕ್‌ನಾಯ್ಕ್, ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಪಕ್ಷದ ಮುಖಂಡ ಎಂ. ಶ್ರೀಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಸದಸ್ಯರಾದ ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಸೇರಿದಂತೆ ಅನೇಕ ಗಣ್ಯರು, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಮಿಕರ ಸಂಘಟನೆಗಳು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ ಟ್ರಸ್ಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅಪ್ಪಾಜಿ ನಿಧನಕ್ಕೆ ಸಂತಾಪ ಸೂಚಿಸಿವೆ.
ಕೃತಜ್ಞತೆ :
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ ಟಿ.ವಿ ಮಾದ್ಯಮದವರು, ಪತ್ರಕರ್ತರು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಮಸ್ತೆ ನಾಗರೀಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ತಿಳಿಸಿದ್ದಾರೆ.