ನಗರದ ವಿವಿಧೆಡೆ ಸಂಘ-ಸಂಸ್ಥೆಗಳಿಂದ ಸಂತಾಪ
ಭದ್ರಾವತಿ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೇಬಲ್ ಅಪರೇಟರ್ ಸಂಘದ ವತಿಯಿಂದ ಶುಕ್ರವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಸೆ. ೧೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ತಾಲೂಕಿನ ಎಲ್ಲಾ ವರ್ಗದ ಜನರ ಶಕ್ತಿಯಾಗಿದ್ದರು ಎಂದು ನಗರದ ತರುಣ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ, ಕೇಬಲ್ ಅಪರೇಟರ್ ಸಂಘದ ಪ್ರಮುಖರಲ್ಲಿ ಒಬ್ಬರಾದ ಬಿ.ಎಚ್ ಶಿವಕುಮಾರ್ ತಿಳಿಸಿದರು.
ಅವರು ಶುಕ್ರವಾರ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೇಬಲ್ ಅಪರೇಟರ್ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಪ್ಪಾಜಿಯವರ ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕ್ಷೇತ್ರದ ಜನತೆ ಹಾಗು ಕೇಬಲ್ ಅಪರೇಟರ್ ಸಂಘಟನೆಗಳ ಪರವಾಗಿ ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ತಿಳಿಸಿದರು.
ನಗರಸಭಾ ಸದಸ್ಯ ಎಚ್. ರವಿಕುಮಾರ್ ಮಾತನಾಡಿ, ಅಪ್ಪಾಜಿ ಕೇವಲ ರಾಜಕಾರಣಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಅನುಭವ ಹೊಂದಿದ್ದ ಮಹಾನ್ ನಾಯಕರಾಗಿದ್ದರು. ಇಂತಹ ಅಪರೂಪದ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
ಸಂಘದ ಖಜಾಂಚಿ ರಂಗನಾಥ್ ಮಾತನಾಡಿ, ಅಪ್ಪಾಜಿ ಎಲ್ಲಾ ಜನರ ಧ್ವನಿಯಾಗಿದ್ದರು. ಎಲ್ಲಾ ವರ್ಗದ ಜನರಲ್ಲಿ ಸಾಮಾನ್ಯ ವ್ಯಕ್ತಿಯಂತೆ ಗುರುತಿಸಿಕೊಂಡಿದ್ದರು ಎಂದರು.
ಕೇಬಲ್ ಅಪರೇಟರ್ ಸಂಘದ ಅಧ್ಯಕ್ಷ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಎಂ.ಎಸ್ ಸುರೇಶಪ್ಪ, ದಯಾನಂದ, ಕಾರ್ಯದರ್ಶಿ ಮೈಲಾರಿರಾವ್, ವೆಂಕಟಚಲ ಸೇರಿದಂತೆ ನಗರದ ಕೇಬಲ್ ಅಪರೇಟರ್‌ಗಳು ಪಾಲ್ಗೊಂಡಿದ್ದರು.
ಭದ್ರಾವತಿ ವಿದ್ಯಾಮಂದಿರಲ್ಲಿ ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಸಂತಾಪ ಸೂಚಿಸಲಾಯಿತು.
ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘ ಸಂತಾಪ:
ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದ ಹುಟ್ಟು ಹೋರಾಟಗಾರ ಅಪ್ಪಾಜಿಯವರನ್ನು ಕಳೆದುಕೊಂಡು ಇದೀಗ ಕ್ಷೇತ್ರ ಬಡವಾಗಿದ್ದು, ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಎಂದಿಗೂ ಅವರೇ ನಮ್ಮ ಜೊತೆಯಲ್ಲಿ ಇರುವಂತೆ ಭಾವನೆ ಮೂಡಿಸುತ್ತಿವೆ ಎಂದು ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಗೋಪಾಲ್ ಸ್ಮರಿಸಿದರು.
ಅವರು ನ್ಯೂಟೌನ್ ವಿದ್ಯಾಮಂದಿರದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಪಾಂಡು, ಮುನಿಸ್ವಾಮಿ, ಸೂರಜ್, ರಾಜು, ಸೆಲ್ವಂ, ಸುಂದರ್, ಗುಣಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಸಂಘದ ವತಿಯಿಂದ ಸಂಘದ ಅಧ್ಯಕ್ಷೆ ಸುಶೀಲಾಬಾಯಿ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರಿಂದ ಸಂತಾಪ:
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಸಂಘದ ವತಿಯಿಂದ ಸಂಘದ ಅಧ್ಯಕ್ಷೆ ಸುಶೀಲಾಬಾಯಿ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಅಪ್ಪಾಜಿ ನಿವಾಸಕ್ಕೆ ತೆರಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳುವ ಜೊತೆಗೆ ಕುಟುಂಬ ವರ್ಗದವರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸಲಾಯಿತು.
ವೇದಾವತಿ, ಉಮಾ, ವಿಶಾಲಾಕ್ಷಿ, ಜಯಶ್ರೀ, ವಿನೋದಾ, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ.ಪಂ. ಸದಸ್ಯ ಎಸ್. ಮಣಿಶೇಖರ್, ನೋಟರಿ ಲೋಕೇಶ್ವರರಾವ್, ಶಾರದಾ ಅಪ್ಪಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.