Saturday, October 3, 2020

ನಿವೃತ್ತ ಮುಖ್ಯ ಶಿಕ್ಷಕ ಮೌನೇಶಚಾರ್ ನಿಧನ

ಮೌನೇಶಚಾರ್
ಭದ್ರಾವತಿ, ಅ. ೩: ನಗರದ ಹೊಸಮನೆ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ಮೌನೇಶಚಾರ್(೬೨) ಶನಿವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿ ಹೊಂದಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
     ಮೌನೇಶಚಾರ್‌ರವರು ಸರ್ಕಾರಿ ಶಾಲೆ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
     ಮೃತರ ನಿಧನಕ್ಕೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಎಲ್. ದೇವರಾಜ್, ಶಿಕ್ಷಕ ವೃಂದದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗೊಂದಿ ಚಾನಲ್‌ನಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲು

ತುರ್ತು ಕಾರ್ಯಾಚರಣೆಯಲ್ಲಿ ಓರ್ವನ ರಕ್ಷಣೆ

ಶನಿವಾರ ಮಧ್ಯಾಹ್ನ ಭದ್ರಾವತಿ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ಈಜಲು ಹೋಗಿ ಇಬ್ಬರು ಯುವಕರ ಮೃತಪಟ್ಟಿರುವುದು.  
ಭದ್ರಾವತಿ, ಅ. ೩: ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ನಡೆದಿದೆ.
      ಜನ್ನಾಪುರದ ನಿವಾಸಿಗಳಾದ ರಾಜೇಶ್(೩೮) ಮತ್ತು ಮನೋಜ್(೧೭) ಎಂಬುವರು ಸಾವನ್ನಪ್ಪಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಒಟ್ಟು ೯ ಜನರು ಚಾನಲ್‌ನ ಆಂಜನೇಯ ಬಂಡೆ ಬಳಿ ಈಜಲು ತೆರಳಿದ್ದು, ಈ ಪೈಕಿ ಈ ಇಬ್ಬರು ನೀರಿನ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸಿ ಕಾರ್ತಿಕ್(೧೩) ಎಂಬ ಬಾಲಕನನ್ನು ರಕ್ಷಿಸಲಾಗಿದೆ.
       ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಈ ಹಿಂದೆ ಸಹ ಈ ರೀತಿಯ ಘಟನೆಗಳು ನಡೆದಿವೆ ಎನ್ನಲಾಗಿದೆ.

ಅ.೪ರಂದು ಪಟೇಲ್ ಜನ್ಮದಿನ

ಜೆ.ಎಚ್ ಪಟೇಲ್
ಭದ್ರಾವತಿ, ಅ. ೩: ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರ ೯೦ನೇ ವರ್ಷದ ಜನ್ಮ ದಿನ ಅ. ೪ರಂದು ಬೆಳಿಗ್ಗೆ ೧೧ ಗಂಟೆಗೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
       ನಿರಂಜನ ದೇಶಿ ಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ತ್ರಿಶೂಲ್ ಪಾಣಿ ಪಟೇಲ್ ಉಪಸ್ಥಿತರಿರುವರು. ಕಾರಿಗನೂರು ಜಿ.ಪಂ. ಸದಸ್ಯ, ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಅಧ್ಯಕ್ಷತೆ ವಹಿಸಲಿದ್ದು, ಶಿರಸ್ತೇದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಮನೋಹರ್, ನ್ಯೂಟೌನ್ ಠಾಣಾಧಿಕಾರಿ ಮೋಹನ್‌ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭಾ ಸದಸ್ಯ ಎಂ.ಎ ಅಜಿತ್, ಕೆ.ವಿ ಶಿವರಾಮ್, ಸುಮನ್ ದಯಾಳನ್, ಕಲಾವತಿ, ದಿವ್ಯಶ್ರೀ, ಎಸ್. ಉಮೇಶ್, ರವಿ ಕಿಶನ್, ಜಮಾನುಲ್ಲಾಖಾನ್, ಸತೀಶ್‌ಪಟೇಲ್, ಗಂಗಾಧರ್, ಶಿವಕುಮಾರ್, ಕೆ. ಪ್ರಸಾದ್, ಸಿದ್ದಲಿಂಗಯ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ಸತ್ಯನಾರಾಯಣ, ನಲ್ಲೂರು ಉಸ್ಮಾನ್ ಷರೀಫ್, ಬಿ.ಎನ್ ರಾಜು ಮತ್ತು ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
      ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜೆಡಿಯು ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ  ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ಕೋರಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ : ಮನವಿ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೩: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
       ಹಲವಾರು ವರ್ಷಗಳಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಇದರಿಂದಾಗಿ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದು, ಹೋರಾಟ ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಸೆ.೨೪ರಿಂದ ನಿರಂತರವಾಗಿ ಹಂತ ಹಂತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಸಲಾಗುವುದು. ತಕ್ಷಣ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
       ಪ್ರಮುಖರಾದ ಡಾ. ದತ್ತಾತ್ರೇಯ, ಡಾ. ಕಿರಣ್, ಡಾ. ವರ್ಷ, ನೇತ್ರಾವತಿ, ಗ್ರೇಷಿಯಾ, ವಸಂತ, ಆಶಾ ಮೆಂಟರ್, ಸಚಿನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, October 2, 2020

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ೫೦೦ ರು. ದಂಡ

ಎಲ್ಲಿಬೇಕೆಂದರಲ್ಲಿ ಕಸ ಹಾಕುವಂತಿಲ್ಲ, ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

ಭದ್ರಾವತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ನಗರಸಭೆ ಸಿಬ್ಬಂದಿಗಳು ದಂಡ ವಿಧಿಸುತ್ತಿರುವುದು.
ಭದ್ರಾವತಿ, ಅ. ೨: ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಬರುವವರಿಗೆ ಶನಿವಾರದಿಂದ ೫೦೦ ರು. ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.
        ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ೧೦೦ ರು. ದಂಡ ವಿಧಿಸಲಾಗುತ್ತಿದ್ದು, ಇದೀಗ ಹೊಸ ಸರ್ಕಾರಿ ಆದೇಶ ಬಂದಿದೆ. ಈ ಪ್ರಕಾರ ೫೦೦ ರು. ದಂಡ ವಿಧಿಸಲಾಗುವುದು. ಶುಕ್ರವಾರ ೧೦೦ ರು. ದಂಡ ವಿಧಿಸಲಾಗಿದ್ದು, ಒಟ್ಟು ೬,೭೦೦ ರು. ವಸೂಲಾತಿ ಮಾಡಲಾಗಿದೆ ಎಂದರು.
     ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಹೋಟೆಲ್, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದಲ್ಲಿ ನಗರಸಭೆ ಆಡಳಿತ ದಂಡ ವಿಧಿಸಲಿದೆ.
    ಇದೆ ರೀತಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದನ್ನು ಸಹ ನಿಷೇಧಿಸಲಾಗಿದ್ದು, ಪ್ರತಿಯೊಬ್ಬರು ಕಸ ಎಸೆಯದೆ ಸಂಗ್ರಹಿಸಿಟ್ಟುಕೊಂಡು ನಗರಸಭೆ ವತಿಯಿಂದ ಕಸ ಸಂಗ್ರಹಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ನೀಡುವುದು. ಒಂದು ವೇಳೆ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದು ಕಂಡು ಬಂದಲ್ಲಿ ದಂಡ ವಿಧಿಸಲಿದೆ.
     ನಗರಸಭೆ ಪರಿಸರ ಅಭಿಯಂತರ ರಕ್ಷಿತ್ ನೇತೃತ್ವದ ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ ಹಾಗು ಸೂಪರ್‌ವೈಸರ್ ಎನ್.ಗೋವಿಂದ ಸೇರಿದಂತೆ ಇನ್ನಿತರನ್ನೊಳಗೊಂಡ ತಂಡ ಈಗಾಗಲೇ ಈ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

ಚರಂಡಿ ಕಾಮಗಾರಿ ವ್ಯವಸ್ಥಿತವಾಗಿ ಕೈಗೊಳ್ಳುಲು ಒತ್ತಾಯಿಸಿ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೫ ಮತ್ತು ೭ರಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‌ಡಿಪಿಐ ವತಿಯಿಂದ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೨: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೫ ಮತ್ತು ೭ರಲ್ಲಿ ಕೈಗೊಳ್ಳಲಾಗುತ್ತಿರುವ ಬಾಕ್ಸ್ ಮಾದರಿ ಚರಂಡಿ ನಿರ್ಮಾಣ ಕಾಮಗಾರಿ ವ್ಯವಸ್ಥಿತವಾಗಿ ಕೈಗೊಂಡಿಲ್ಲ. ಇದರಿಂದಾಗಿ  ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಗಿದೆ.
          ವಾರ್ಡ್ ನಂ.೭ರ ಖಲಂದರಿಯಾ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿ ಸರಿಯಾಗಿ ಕೈಗೊಳ್ಳದ ಕಾರಣ ಕಲ್ಮಶಗೊಂಡ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ವಾಸನೆಯಿಂದಾಗಿ ಸ್ಥಳೀಯ ನಿವಾಸಿಗಳು, ರಸ್ತೆಯಲ್ಲಿ ಸಂಚರಿಸುವವರು ತೊಂದರೆ ಅನುಭವಿಸುವಂತಾಗಿದೆ.   
       ವಾರ್ಡ್ ನಂ.೫ರ ಖಾಜಿ ಮೊಹಲ್ಲಾದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಇಂಜಿನಿಯರ್ ಶ್ರೇಯಸ್‌ರವರು ಕಾಮಗಾರಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಕಾಮಗಾರಿ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಇದನ್ನು ಪ್ರಶ್ನಿಸಲು ಮುಂದಾದರೆ ಶ್ರೇಯಸ್‌ರವರು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಅ.೪ರಂದು ಮನೋಜ್ ದತ್ತಿ ಕಾರ್ಯಕ್ರಮ

ಭದ್ರಾವತಿ, ಅ. ೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅ.೪ರಂದು ಬೆಳಿಗ್ಗೆ ೧೦ ಗಂಟೆಗೆ ಎಸ್. ಶ್ರೀನಿವಾಸ್ ದತ್ತಿ ದಾನಿಗಳ ಸಹಕಾರದೊಂದಿಗೆ ಮನೋಜ್ ದತ್ತಿ ಕಾರ್ಯಕ್ರಮ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
        ಅಂಧ ಮಕ್ಕಳಿಂದ ಸುಗಮ ಸಂಗೀತ ಹಾಗು ಗಾನಗಾರುಡಿಗ ಡಾ. ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನುಡಿ ನಮನ ನಡೆಯಲಿದ್ದು,  ಉದ್ಯಮಿ ಎನ್ ಪ್ರಕಾಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
        ಕಸಾಪ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು,  ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ, ಕಸಾಪ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿಗಳಾದ ಚನ್ನಪ್ಪ, ವೈ.ಕೆ ಹನುಮಂತಯ್ಯ ಹಾಗು ಸಂಚಾಲಕ ಚಂದ್ರಶೇಖರಪ್ಪ ಚಕ್ರಸಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.